ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕೊಲಿನ್ಸ್ ಇಂಡಿಯಾ ಘಟಕದ ಆರಂಭದೊಂದಿಗೆ ಭಾರತದ ವೈಮಾನಿಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಿನ ಸಾಧನೆಯಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಹೇಳಿದರು.ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‌ನಲ್ಲಿ ನಿರ್ಮಾಣವಾಗಿರುವ ಕೊಲಿನ್ಸ್ ಇಂಡಿಯಾ ಆಪರೇಶನ್ಸ್ ಸೆಂಟರ್ (ಸಿಐಒಸಿ) ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಮಾನದ ಬಿಡಿಭಾಗಗಳ ಉತ್ಪಾದನೆ:ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‌ನ 26 ಎಕರೆಯಲ್ಲಿರುವ ಕೊಲಿನ್ಸ್ ಇಂಡಿಯಾದ ಈ ಘಟಕದಲ್ಲಿ ಆಸನ, ಬೆಳಕು ಮತ್ತು ಸರಕು ಸಾಗಣೆ ವ್ಯವಸ್ಥೆ, ತಾಪಮಾನ ಸೆನ್ಸರ್‌ಗಳು, ನೀರು ಮತ್ತು ಸುರಕ್ಷತಾ ವ್ಯವಸ್ಥೆ, ಸುಧಾರಿತ ಸಂವಹನ ವ್ಯವಸ್ಥೆ ಸೇರಿದಂತೆ ವಿಮಾನದ ಬಿಡಿಭಾಗಗಳನ್ನು ಹಾಗೂ ತಂತ್ರಜ್ಞಾನವನ್ನು ರೂಪಿಸಲಾಗುತ್ತದೆ. 2026 ರ ವೇಳೆಗೆ 2,200 ಕ್ಕೂ ಹೆಚ್ಚು ವೃತ್ತಿಪರರನ್ನು ಈ ಸಂಸ್ಥೆ ನೇಮಕ ಮಾಡಿಕೊಳ್ಳಲಿದೆ. ರೋಬೋಟಿಕ್ಸ್, ಎಐ ಮೊದಲಾದ ಸುಧಾರಿತ ತಂತ್ರಜ್ಞಾನಗಳನ್ನು ಘಟಕದಲ್ಲಿ ಬಳಸಲಾಗುತ್ತದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ನಾಯಕತ್ವದಲ್ಲಿ ಭಾರತದ ವೈಮಾನಿಕ ಕ್ಷೇತ್ರ ಸಾಕಷ್ಟು ಪ್ರಗತಿ ಕಾಣುತ್ತಿದೆ. ದೇಶದ ಆರ್ಥಿಕ ಬೆಳವಣಿಗೆ ಹಾಗೂ ಇಲ್ಲಿನ ಉದ್ಯೋಗಿಗಳ ಕೌಶಲ್ಯದ ಮೇಲೆ ಜಗತ್ತು ಇಟ್ಟಿರುವ ವಿಶ್ವಾಸಕ್ಕೆ ಇದು ಒಂದು ಸಂಕೇತ. ದೇಶವನ್ನು ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾಡಲು ಕೇಂದ್ರ ಸರ್ಕಾರ ಮಾಡುತ್ತಿರುವ ಸುಧಾರಣಾ ಕ್ರಮಗಳಲ್ಲಿ ಇದೂ ಒಂದಾಗಿದೆ. ಕೇಂದ್ರ ಸರ್ಕಾರದ ʼಆತ್ಮನಿರ್ಭರ ಭಾರತʼ ಮತ್ತು ʼಮೇಕ್ ಇನ್ ಇಂಡಿಯಾʼ ಗುರಿಗಳಿಗೆ ಇದು ಪೂರಕವಾಗಿದೆ ಎಂದು ಹೇಳಿದರು.ವಿಮಾನ ಕ್ಷೇತ್ರದಲ್ಲಿ ಹೊಸ ಹೆಜ್ಜೆ:
ಭಾರತವು ವಿಮಾನಯಾನ ಕ್ಷೇತ್ರದ ಹಬ್ ಆಗಿ ಬೆಳೆಯುವಲ್ಲಿ ಇದು ದೊಡ್ಡ ಹೆಜ್ಜೆಯಾಗಿದೆ. ಜಾಗತಿಕ ಕಂಪನಿಗಳಿಗೆ ಭಾರತ ಈವರೆಗೆ ಉತ್ತಮ ಮಾರುಕಟ್ಟೆಯಾಗಿದ್ದರೆ, ಈಗ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಭಾರತವು ಉತ್ಪಾದನಾ ಕ್ಷೇತ್ರದ ಪಾಲುದಾರನಾಗಿಯೂ ಬೆಳೆಯುತ್ತಿದೆ. ಉನ್ನತ ಮಟ್ಟದ ಕೌಶಲ್ಯ, ರಫ್ತು ಉದ್ದೇಶದ ಉತ್ಪಾದನೆ, ಹೊಸ ತಂತ್ರಜ್ಞಾನದ ಆಗಮನ, ಆವಿಷ್ಕಾರ, ಜಾಗತಿಕ ಮಟ್ಟದಲ್ಲಿ ಭಾರತದ ಪಾಲ್ಗೊಳ್ಳುವಿಕೆಗೆ ಇಂತಹ ಹೂಡಿಕೆಗಳು ಉತ್ತೇಜನ ನೀಡಲಿದೆ ಎಂದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇನ್ನು ಮುಂದೆಯೂ ಆವಿಷ್ಕಾರ, ಕೌಶಲ್ಯ ಹೊಂದಿದ ಉದ್ಯೋಗಿಗಳು ಹಾಗೂ ಸುಧಾರಿತ ಮೂಲಸೌಕರ್ಯದೊಂದಿಗೆ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ನಿರ್ಮಿಸಲಿದೆ ಎಂದು ಹೇಳಿದರು.
ವಾಣಿಜ್ಯ ಸಂಬಂಧ ವಿಸ್ತರಣೆ:ಈ ಕಾರ್ಯಕ್ರಮವು ಕೇವಲ ಒಂದು ಕಂಪನಿಯ ಘಟಕ ಸ್ಥಾಪನೆಯಲ್ಲ. ಇದು ಭಾರತವು ಜಗತ್ತಿನ ಇತರೆ ದೇಶಗಳೊಂದಿಗೆ ವಾಣಿಜ್ಯ ಸಂಬಂಧ ವಿಸ್ತರಿಸುವ ನಡೆಯಾಗಿದೆ. ದೇಶವನ್ನು ಆಧುನಿಕ ಎಂಜಿನಿಯರಿಂಗ್ ಮತ್ತು ಉತ್ಪಾದನಾ ಕ್ಷೇತ್ರದ ಹಬ್ ಆಗಿಸಲು, ಕೇಂದ್ರ ಸರ್ಕಾರ ಅವಕಾಶಗಳನ್ನು ಸೃಷ್ಟಿ ಮಾಡಿಕೊಡಲಿದೆ. ಕೊಲಿನ್ಸ್ ಏರೋಸ್ಪೇಸ್‌ಗೆ ನನ್ನ ಶುಭಾಶಯಗಳನ್ನು ತಿಳಿಸುವುದರೊಂದಿಗೆ, ಬೆಂಗಳೂರಿನ ಘಟಕದಿಂದ ಹೆಚ್ಚು ಅಭಿವೃದ್ಧಿಯಾಗಲಿ ಎಂದು ಆಶಿಸುತ್ತೇನೆ ಎಂದು ಹಾರೈಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ, ಮತ್ತಿತರರು ಇದ್ದರು.;Resize=(128,128))
;Resize=(128,128))
;Resize=(128,128))