ಶಿಕ್ಷಣ, ಸಂಸ್ಕ್ರತಿ ಇಲ್ಲದ ಮನುಷ್ಯನಿಗೆ ಬೆಲೆಯಿಲ್ಲ: ಪ್ರಾಂಶುಪಾಲೆ ಭಾರತಿ

| Published : Nov 12 2025, 01:00 AM IST

ಶಿಕ್ಷಣ, ಸಂಸ್ಕ್ರತಿ ಇಲ್ಲದ ಮನುಷ್ಯನಿಗೆ ಬೆಲೆಯಿಲ್ಲ: ಪ್ರಾಂಶುಪಾಲೆ ಭಾರತಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಮುಂದುವರಿದ ಸ್ಪರ್ದಾತ್ಮಕ ಜಗತ್ತಿನಲ್ಲಿ ಶಿಕ್ಷಣ ಅನಿವಾರ್ಯ. ಶಿಕ್ಷಣ ಭವಿಷ್ಯಕ್ಕೆ ಭದ್ರ ಬುನಾದಿ. ಶಿಕ್ಷಣ, ಸಂಸ್ಕ್ರತಿ ಇಲ್ಲದ ಮನುಷ್ಯನಿಗೆ ಸಮಾಜದಲ್ಲಿ ಬೆಲೆ ಇಲ್ಲ ಎಂದು ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಹೇಳಿದರು.

ಕನ್ನಡಪ್ರಭ ವಾರ್ತೆ ಶೃಂಗೇರಿ

ಇಂದಿನ ಮುಂದುವರಿದ ಸ್ಪರ್ದಾತ್ಮಕ ಜಗತ್ತಿನಲ್ಲಿ ಶಿಕ್ಷಣ ಅನಿವಾರ್ಯ. ಶಿಕ್ಷಣ ಭವಿಷ್ಯಕ್ಕೆ ಭದ್ರ ಬುನಾದಿ. ಶಿಕ್ಷಣ, ಸಂಸ್ಕ್ರತಿ ಇಲ್ಲದ ಮನುಷ್ಯನಿಗೆ ಸಮಾಜದಲ್ಲಿ ಬೆಲೆ ಇಲ್ಲ ಎಂದು ಶೃಂಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಹೇಳಿದರು.

ಶೃಂಗೇರಿ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚಾರಣೆ ಹಾಗೂ ಶಿಕ್ಷಣ ತಜ್ಞ ಮೌಲಾನ ಅಬ್ದುಲ್ ಕಲಾಂ ಆಜಾದ್ ಜನ್ಮದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿ ಮೌಲಾ ಆಜಾದ್ ರವರು ದೇಶದ ಶಿಕ್ಷಣ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು.

ನಮ್ಮ ಶಿಕ್ಷಣ ವ್ಯವಸ್ಥೆ ಬ್ರಿಟಿಷರ ಬಳುವಳಿಯಾಗಿದೆ. ಬ್ರಿಟಿಷರು ಭಾರತ ಬಿಟ್ಟುಹೋದ ನಂತರ ಅವರ ಶಿಕ್ಷಣ ವ್ಯವಸ್ಥೆಯನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.ದೇಶಕ್ಕೆ ಸ್ವಾತಂತ್ರ ಬಂದ ನಂತರ ಮೊದಲ ಶಿಕ್ಷಣ ಸಚಿವರಾದ ಆಜಾದ್‌ರವರು ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ಬದಲಾವಣೆ ಮಾಡಿದರು ಎಂದರು.

ಕಡ್ಡಾಯ ಶಿಕ್ಷಣ ಜಾರಿ, ವಯಸ್ಕರ ಶಿಕ್ಷಣ, ಮಹಿಳಾ ಶಿಕ್ಷಣ ನೀತಿಗಳು ಹೀಗೆ ಹಲವಾರು ಯೋಜನೆಗಳ ಮೂಲಕ ಶಿಕ್ಷಣದ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಿದರು.ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಗೆ ಪ್ರಾಮುಖ್ಯತೆ ನೀಡಬೇಕು.ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಬೇಕು.ಜೀವ ಹಾಗೂ ಜೀವನ ಎರಡೂ ಮುಖ್ಯ.ನೈತಿಕ.ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಕನ್ನಡ ಉಪನ್ಯಾಸಕ ಎಂ.ಮರಿಸ್ವಾಮಿ ವಿಶೇಷ ಉಪನ್ಯಾಸ ನೀಡಿ, ಮೌಲಾನ ಆಜಾದ್‌ರವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಗೊಳಿಸಿದರು. ತಿಲಕರು ಸ್ವರಾಜ್ಯ ನನ್ನ ಅಜನ್ಮ ಸಿದ್ದ ಹಕ್ಕು ಎಂದರು. ಮೌಲಾನಾ ಆಜಾದ್‌ರವರು ಶಿಕ್ಷಣ ನನ್ನ ಅಜನ್ಮ ಸಿದ್ದ ಹಕ್ಕು ಎಂಬ ಘೋಷಣೆ ಮೊಳಗಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡ ಇವರು ಅನೇಕ ಬಾರಿ ಜೈಲು ಶಿಕ್ಷೆಗೂ ಗುರಿಯಾಗಿದ್ದರು. ಖಿಲಾಫತ್ ಚಳವಳಿ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಸೇರಿದಂತೆ ಅನೇಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು ಎಂದರು.

ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಸಚಿವರಾಗಿ ದೇಶದ ಶಿಕ್ಷಣ ವ್ಯವಸ್ಥೆಯ ದಿಕ್ಕನ್ನೇ ಬದಲಾಯಿಸಿದರು. ಅನೇಕ ಯೋಜನೆಗಳನ್ನು ರೂಪಿಸಿದರು. ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಚಾಣಕ್ಯರಾಜ್, ಉಪನ್ಯಾಸಕರಾದ ಕೆ.ಎನ್.ಚೇತನ್, ಎನ್.ಯು.ಅಬೂಬಕರ್ ಮತ್ತಿತರರು ಹಾಜರಿದ್ದರು. ಚಾಣಕ್ಯರಾಜ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.