ಕರ್ನಾಟಕದ 6 ಜಿಲ್ಲೆಗಳಲ್ಲಿ ಪ್ರಧಾನಿ ಧನಧಾನ್ಯ ಯೋಜನೆ : ರೈತರಿಗೆ ಲಾಭ

KannadaprabhaNewsNetwork |  
Published : Oct 12, 2025, 01:00 AM ISTUpdated : Oct 12, 2025, 04:53 AM IST
ರೈತರೊಂದಿಗೆ ಮೋದಿ ಸಂವಾದ | Kannada Prabha

ಸಾರಾಂಶ

ಕೃಷಿಯಲ್ಲಿ ಹಿಂದುಳಿದಿರುವ ಕರ್ನಾಟಕದ 6 ಸೇರಿದಂತೆ 100 ಜಿಲ್ಲೆಗಳಲ್ಲಿ ಕೃಷಿ ಉತ್ತೇಜನ ಮತ್ತು ಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುವ 35,440 ಕೋಟಿ ರು. ವೆಚ್ಚದ ಎರಡು ಮಹತ್ವಕಾಂಕ್ಷಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಚಾಲನೆ ನೀಡಿದರು.  

  ನವದೆಹಲಿ :  ಕೃಷಿಯಲ್ಲಿ ಹಿಂದುಳಿದಿರುವ ಕರ್ನಾಟಕದ 6 ಸೇರಿದಂತೆ 100 ಜಿಲ್ಲೆಗಳಲ್ಲಿ ಕೃಷಿ ಉತ್ತೇಜನ ಮತ್ತು ಕಾಳು ಉತ್ಪಾದನೆಯಲ್ಲಿ ಆತ್ಮನಿರ್ಭರತೆ ಸಾಧಿಸುವ 35,440 ಕೋಟಿ ರು. ವೆಚ್ಚದ ಎರಡು ಮಹತ್ವಕಾಂಕ್ಷಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿ ಚಾಲನೆ ನೀಡಿದರು. ಇದೇ ವೇಳೆ ದೇಶೀಯ ಮತ್ತು ಜಾಗತಿಕ ಬೇಡಿಕೆಗೆ ಅನುಗುಣವಾಗಿ ಉತ್ಪಾದಕತೆ ಹೆಚ್ಚಿಸುವಂತೆ ದೇಶದ ರೈತಾಪಿ ಸಮುದಾಯಕ್ಕೆ ಪ್ರಧಾನಿ ಕರೆ ನೀಡಿದರು.

ರಾಜಧಾನಿಯ ಪುಸಾ ಕ್ಯಾಂಪಸ್‌ನಲ್ಲಿ 24,000 ಕೋಟಿ ರು.ವೆಚ್ಚದ ‘ಪ್ರಧಾನ ಮಂತ್ರಿ ಧನಧಾನ್ಯ ಕೃಷಿ ಯೋಜನೆ’ ಮತ್ತು 11400 ಕೋಟಿ ರು. ವೆಚ್ಚದ ‘ಕಾಳು ಆತ್ಮನಿರ್ಭರತೆ ಯೋಜನೆ’ ಹೆಸರಿನ ಕೃಷಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಮೋದಿ, ‘2047ರ ವೇಳೆಗೆ ವಿಕಸಿತ ಭಾರತದ ಕನಸು ನನಸು ಮಾಡುವಲ್ಲಿ ರೈತರ ಪಾತ್ರ ಅತ್ಯಂತ ಮಹತ್ವದ್ದು, ಈ ಎರಡೂ ಯೋಜನೆಗಳು ದೇಶದ ಲಕ್ಷಾಂತರ ರೈತರ ಜೀವನದ ಗುಣಮಟ್ಟ ಹೆಚ್ಚಿಸಲಿವೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಇದೆ ವೇಳೆ ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ವಲಯದಲ್ಲಿನ 5450 ಕೋಟಿ ರು. ಮೌಲ್ಯದ ಯೋಜನೆಗಳಿಗೆ ಚಾಲನೆ ಹಾಗೂ 815 ಕೋಟಿ ರು. ಮೊತ್ತದ ಇತರೆ ಕೆಲ ಯೋಜನೆಗಳಿಗೆ ಶಂಕುಸ್ಥಾಪನೆ ಕೂಡಾ ನೆರವೇರಿಸಿದರು.

ಕಳೆದ 11 ವರ್ಷಗಳಲ್ಲಿ ತಮ್ಮ ಸರ್ಕಾರ ಕೈಗೊಂಡ ಹಲವು ರೈತಾಪಿ ಸಮುದಾಯದ ಪರವಾದ ಯೋಜನೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಸರ್ಕಾರದ ಯೋಜನೆಗಳ ಫಲವಾಗಿ ರಫ್ತು ದ್ವಿಗುಣಗೊಂಡಿದೆ, ಆಹಾರ ಧಾನ್ಯಗಳ ಉತ್ಪಾದನೆ 900 ಲಕ್ಷ ಟನ್‌ ತಲುಪಿದೆ, ತರಕಾರಿ ಮತ್ತು ಹಣ್ಣುಗಳ ಉತ್ಪಾದನೆ 640 ಲಕ್ಷ ಟನ್‌ ತಲುಪಿದೆ. ಇತ್ತೀಚೆಗೆ ಮಾಡಲಾದ ಜಿಎಸ್ಟಿ ದರ ಕಡಿತದ ಹೆಚ್ಚಿನ ಲಾಭ ರೈತರಿಗೆ ತಲುಪಲಿದೆ ಎಂದು ಹೇಳಿದರು.

ಧನ ಧಾನ್ಯ ಯೋಜನೆ

ಕೃಷಿ ಉತ್ಪಾದಕತೆಯಲ್ಲಿ ಹಿಂದುಳಿದಿರುವ ವಿವಿಧ ರಾಜ್ಯಗಳ 100 ಮಹತ್ವಕಾಂಕ್ಷಿ ಜಿಲ್ಲೆಗಳನ್ನು ಗುರುತಿಸಿ ಅಲ್ಲಿ ಕೃಷಿ ಉತ್ಪಾದಕತೆ ಹೆಚ್ಚಿಸುವ, ಕೃಷಿ ವೈವಿಧ್ಯೀಕರಣಕ್ಕೆ ಒತ್ತು ನೀಡುವ, ನೀರಾವರಿ ಸವಲತ್ತು ಹೆಚ್ಚಿಸುವ, ಸಂಗ್ರಹಾಗಾರಗಳನ್ನು ಅಭಿವೃದ್ಧಿಪಡಿಸುವ ಮತ್ತು ಆಯ್ದ ಜಿಲ್ಲೆಗಳಲ್ಲಿ ಸಾಲ ಸೌಲಭ್ಯ ಖಾತರಿಪಡಿಸುವ ಅಂಶಗಳನ್ನು ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆ ಹೊಂದಿದೆ.

ಬೇಳೆ ಕಾಳು ಆತ್ಮನಿರ್ಭರತೆ

ಪ್ರಸಕ್ತ 252.38 ಲಕ್ಷ ಟನ್‌ನಷ್ಟಿರುವ ದೇಶದ ಬೇಳೆ ಕಾಳು ಉತ್ಪಾದನೆಯನ್ನು 2030-31ರ ವೇಳೆಗೆ 350 ಲಕ್ಷ ಟನ್‌ಗೆ ಹೆಚ್ಚಿಸುವ ಗುರಿಯನ್ನು ಈ ಯೋಜನೆಯ ಮೂಲಕ ತಲುಪಲು ಸರ್ಕಾರ ಉದ್ದೇಶಿಸಿದೆ.

ರಾಜ್ಯದ 6 ಜಿಲ್ಲೆಗಳಲ್ಲಿ ಜಾರಿ

ಧನ ಧಾನ್ಯ ಕೃಷಿ ಯೋಜನೆಗೆ ಕರ್ನಾಟಕದ ಹಾವೇರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಕೊಪ್ಪಳ, ಗದಗ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಈ ಜಿಲ್ಲೆಗಳ ರಾಗಿ, ಜೋಳ, ಕಬ್ಬು, ಬೇಳೆ ಕಾಳುಗಳ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಳ್ಳಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಗದ್ದಲದ ಮಧ್ಯೆಯೇ ‘ಜಿ ರಾಮ್‌ ಜಿ’ ವಿಧೇಯಕ ಲೋಕಸಭೇಲಿ ಮಂಡನೆ
ಆಳಸಮುದ್ರ ಡ್ರೋನ್‌ ಬಳಸಿದ ಉಕ್ರೇನ್‌ : ರಷ್ಯಾ ಸಬ್‌ಮರೀನ್‌ ಧ್ವಂಸ