ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹೇಳದೆ ಕೇಳದೆ ವಿದೇಶ ಯಾತ್ರೆಗೆ ಹೋಗುತ್ತಾರೆ ಎಂದು ಅವರ ಭದ್ರತೆಯ ಹೊಣೆ ಹೊತ್ತಿರುವ ಸಿಆರ್‌ಪಿಎಫ್ (ಕೇಂದ್ರೀಯ ಮೀಸಲು ಪೊಲೀಸ್ ಪಡೆ)ಯು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಮುಖೇನ ದೂರು ನೀಡಿದೆ.
‘ರಾಹುಲ್ ಗಾಂಧಿ ಅವರು ಯಾರಿಗೂ ತಿಳಿಸದೆ ವಿದೇಶ ಪ್ರವಾಸ ಮಾಡುತ್ತಿದ್ದಾರೆ. ಅವರು ತಮ್ಮ ಭದ್ರತಾ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈ ಮೂಲಕ ಭದ್ರತಾ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ’ ಎಂದು ಸಿಆರ್‌ಪಿಎಫ್ ವಿವಿಐಪಿ ಭದ್ರತಾ ವಿಭಾಗದ ಮುಖ್ಯಸ್ಥ ಸುನಿಲ್ ಆರೋಪಿಸಿದ್ದಾರೆ.ರಾಹುಲ್ ಗಾಂಧಿ ಅವರ ಇಟಲಿ (ಡಿ.30 ರಿಂದ ಜ. 9), ವಿಯೆಟ್ನಾಂ (ಮಾರ್ಚ್ 12 ರಿಂದ 17), ದುಬೈ (ಏಪ್ರಿಲ್ 17 ರಿಂದ 23), ಕತಾರ್ (ಜೂನ್ 11 ರಿಂದ 18), ಲಂಡನ್ (ಜೂನ್ 25 ರಿಂದ ಜುಲೈ 6) ಮತ್ತು ಮಲೇಷ್ಯಾ (ಸೆ.4 ರಿಂದ 8) ಪ್ರವಾಸಗಳನ್ನು ಸುನೀಲ್ ಉಲ್ಲೇಖಿಸಿದ್ದಾರೆ. ಸಿಆರ್‌ಪಿಎಫ್‌ನ ‘ಶಿಷ್ಟಾಚಾರ ಪುಸ್ತಕ’ದಲ್ಲಿ ಉಲ್ಲೇಖಿಸಲಾದ ಶಿಷ್ಟಾಚಾರಗಳನ್ನು ರಾಹುಲ್ ಉಲ್ಲಂಘಿಸುತ್ತಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.2019ರಲ್ಲಿ ಕೇಂದ್ರ ಸರ್ಕಾರವು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಲಾಗಿದ್ದ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಭದ್ರತೆಯನ್ನು ಹಿಂತೆಗೆದುಕೊಂಡಿತ್ತು. ಆ ಭದ್ರತಾ ವ್ಯವಸ್ಥೆಯನ್ನು ಸಿಆರ್‌ಪಿಎಫ್‌ಗೆ ಬದಲಾಯಿಸಿತು. ಸುಮಾರು 10-12 ಕಮಾಂಡೋಗಳು ಸದಾ ಈ ಭದ್ರತೆ ಪಡೆದವರ ರಕ್ಷಣೆಗೆ ಇರುತ್ತಾರೆ.ಆದರೆ, ಭದ್ರತೆ ಪಡೆದಿರುವವರು ತಾವು ಹೋಗುವ ಸ್ಥಳದ ಬಗ್ಗೆ ಮೊದಲೇ ಸಿಆರ್‌ಪಿಎಫ್‌ಗೆ ತಿಳಿಸಬೇಕು. ಅವರು ಸ್ಥಳೀಯ ಪೊಲೀಸರ ಸಹಾಯದಿಂದ ಗಣ್ಯರ ಭೇಟಿಗೂ ಮುನ್ನ ಆ ಸ್ಥಳದ ತಪಾಸಣೆ ಮಾಡುತ್ತಾರೆ.ಸಿಆರ್‌ಪಿಎಫ್ ರಾಹುಲ್ ಗಾಂಧಿ ಅವರಿಗೆ ಭದ್ರತಾ ಉಲ್ಲಂಘನೆ ಕುರಿತು ಪತ್ರ ಈ ಹಿಂದೆ ಪತ್ರವನ್ನೂ ಬರೆದಿತ್ತು. 2020ರಿಂದ 113 ಬಾರಿ ಭದ್ರತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು 2022ರಲ್ಲಿ ಸಿಆರ್‌ಪಿಎಫ್ ಹೇಳಿತ್ತು. ಇದರಲ್ಲಿ ಪಕ್ಷದ ಭಾರತ್ ಜೋಡೋ ಯಾತ್ರೆ ಕೂಡ ಸೇರಿತ್ತು.