ಕೀವ್: 4 ವರ್ಷಗಳಿಂದ ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧವು ರಷ್ಯಾದ ಯೋಧರನ್ನು ನರಭಕ್ಷಕರಾಗಿಸುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಉಕ್ರೇನ್‌ನ ಯೋಧರೊಬ್ಬರು ತಮ್ಮ ಉನ್ನತಾಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡುತ್ತಿರುವ ಧ್ವನಿಮುದ್ರಣ ದೊರಕಿದೆ.
‘ರಷ್ಯಾದ ಒಬ್ಬ ಸೈನಿಕ ತನ್ನಿಬ್ಬರು ಜತೆಗಾರರನ್ನು ಕೊಂದು, ಒಬ್ಬನ ಕಾಲನ್ನು ಕತ್ತರಿಸಿ ತಿನ್ನಲು ಮುಂದಾಗಿದ್ದ. ಅವನಿದ್ದ ಸ್ಥಳಕ್ಕೆ ಹೋದಾಗ, ಮಾಂಸ ಗ್ರೈಂಡರ್ ಇಟ್ಟುಕೊಂಡು ಏನೋ ಮಾಡುತ್ತಿದ್ದ. ಕೊನೆಗೆ ಅವನನ್ನು ಕೊಲ್ಲಲಾಯಿತು’ ಎಂದು ಉಕ್ರೇನ್ ಯೋಧರೊಬ್ಬರು ಹೇಳಿರುವ ಆಡಿಯೋ ಲಭಿಸಿದೆ. ಅದರಲ್ಲಿ ಅವರು, ‘ನಮ್ಮ ಯೋಧರು ಕೂಡ ನರಪೇತಲಗಳಾಗುತ್ತಿದ್ದಾರೆ. ಮುಂದೊಂದು ದಿನ ಒಬ್ಬರನ್ನೊಬ್ಬರು ತಿನ್ನಲು ಶುರು ಮಾಡಬಹುದು’ ಎಂದೂ ಎಚ್ಚರಿಕೆ ನೀಡಿದ್ದನ್ನು ಕೇಳಬಹುದು.
ಉಕ್ರೇನ್‌ನ ಗುಪ್ತಚರ ಮಾಹಿತಿಯ ಪ್ರಕಾರ, ಈವರೆಗೆ ರಷ್ಯಾದ 5 ಯೋಧರು ತಮ್ಮ ಸಹೋದ್ಯೋಗಿಗಳನ್ನು ಅಥವಾ ಶವಗಳನ್ನು ತಿಂದ ಪ್ರಕರಣಗಳು ಬೆಳಕಿಗೆ ಬಂದಿವೆ. ಸುದೀರ್ಘ ಕದನದಿಂದಾಗಿ ಸರಿಯಾಗಿ ಊಟ ಸಿಗದ ಕಾರಣ ಯೋಧರು ಈ ಸ್ಥಿತಿ ತಲುಪಿದ್ದಾರೆ ಎನ್ನಲಾಗುತ್ತಿದೆ.
ತಮ್ಮ ಸೈನಿಕರ ಬಗ್ಗೆ ಮಾಡಲಾಗುತ್ತಿರುವ ಹೇಯ ಆರೋಪಗಳನ್ನು ಅಲ್ಲಗಳೆದಿರುವ ರಷ್ಯಾ, ‘ಇದು ಉಕ್ರೇನ್ ಗುಪ್ತಚರ ಸಂಸ್ಥೆಯ ತಂತ್ರವಾಗಿದೆ. ಇದರಲ್ಲಿ ಹುರುಳಿಲ್ಲ’ ಎಂದಿದೆ.