ಕೋಟಾದಲ್ಲೇ ಏಕೆ ಹೆಚ್ಚು ವಿದ್ಯಾರ್ಥಿ ಆತ್ಮಹತ್ಯೆ? : ಸುಪ್ರೀಂ ಕಿಡಿ

KannadaprabhaNewsNetwork | Updated : May 24 2025, 05:22 AM IST
: ಕೋಚಿಂಗ್ ಹಬ್ ಅಂತಲೇ ಖ್ಯಾತಿ ಪಡೆದಿದ್ದ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸಾಲು ಸಾಲು ಆತ್ಮಹತ್ಯೆ ಪ್ರಕರಣ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ರಾಜಸ್ಥಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
Follow Us

 ನವದೆಹಲಿ: ಕೋಚಿಂಗ್ ಹಬ್ ಅಂತಲೇ ಖ್ಯಾತಿ ಪಡೆದಿದ್ದ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಸಾಲು ಸಾಲು ಆತ್ಮಹತ್ಯೆ ಪ್ರಕರಣ ಬೆನ್ನಲ್ಲೇ ಸುಪ್ರೀಂ ಕೋರ್ಟ್‌ ರಾಜಸ್ಥಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ‘ಒಂದು ರಾಜ್ಯವಾಗಿ ನೀವೇನು ಮಾಡುತ್ತಿದ್ದೀರಿ? ಕೋಟಾದಲ್ಲಿಯೇ ವಿದ್ಯಾರ್ಥಿಗಳು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಯೋಚಿಸಿಲ್ಲವೇ?’ ಎಂದು ಚಾಟಿ ಬೀಸಿದೆ. ಜೊತೆಗೆ ಇದು ಗಂಭೀರವಾದದ್ದು ಎಂದು ಕಳವಳ ವ್ಯಕ್ತಪಡಿಸಿದೆ.

ಈ ವರ್ಷ ಕೋಟಾದಲ್ಲಿ 14 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಎಫ್‌ಐಆರ್‌ ವಿಳಂಬಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ ಒಂದು ರಾಜ್ಯವಾಗಿ ನೀವು ಏನು ಮಾಡುತ್ತಿದ್ದೀರಿ? ಈ ವಿದ್ಯಾರ್ಥಿಗಳು ಆತ್ಮಹತ್ಯೆ ಸಾಯುತ್ತಿದ್ದಾರೆ. ಅದರಲ್ಲಿಯೂ ಕೋಟಾದಲ್ಲಿಯೇ ಇಂತಹ ಪ್ರಕರಣಗಳು ಯಾಕೆ ನಡೆಯುತ್ತಿದೆ? ಸರ್ಕಾರವಾಗಿ ನಿಮಗೆ ಇದರ ಬಗ್ಗೆ ಯೋಚಿಸಿಲ್ಲವೇ’ ಎಂದಿದೆ.ಅಲ್ಲದೇ ವಿದ್ಯಾರ್ಥಿಗಳ ಸಾವಿನ ಸರಣಿ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪೀಠ, ‘ಈ ವರ್ಷ 14 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಯಾಕೆ ಸತ್ತರು? ಇವುಗಳನ್ನುಹಗರವಾಗಿ ಎಂದಿಗೂ ತೆಗೆದುಕೊಳ್ಳಬೇಡಿ. ಇವು ತುಂಬಾ ಗಂಭೀರವಾದ ವಿಷಯ’ ಎಂದಿದೆ. ಸ್ಥಿತಿ ಬಗ್ಗೆ ಜುಲೈ 14 ರಂದು ವಿವರಿಸಲು ಪೊಲೀಸರಿಗೆ ಸಮನ್ಸ್‌ ನೀಡಿದೆ.

ಚಿಪ್ಸ್‌ ಕದ್ದ ಆರೋಪ: ಕೀಟನಾಶಕ ಸೇವಿಸಿ 12ರ ಬಾಲಕ ಆತ್ಮಹತ್ಯೆ

ಕೋಲ್ಕತಾ : ಅಂಗಡಿಯಿಂದ ಚಿಪ್ಸ್ ಕದ್ದಿದ್ದಾನೆಂದು ಆರೋಪಿಸಿ ಮಾಲೀಕ ಕಪಾಳಮೋಕ್ಷ, ಬೈದ ಕಾರಣಕ್ಕೆ ಮನನೊಂದು 12 ವರ್ಷದ ಬಾಲಕ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ಪನ್ಸ್ಕುರಾದಲ್ಲಿ ನಡೆದಿದೆ. 

7ನೇ ತರಗತಿಯ ಕ್ರಿಶೇಂದು ದಾಸ್ ಮೃತ ಬಾಲಕ. ಈತ ಇಲ್ಲಿನ ಗೋಸೈಬರ್‌ ಎನ್ನುವ ಬಜಾರ್‌ನಲ್ಲಿ ಚಿಪ್ಸ್‌ ಪ್ಯಾಕೆಟ್‌ವೊಂದನ್ನು ತೆಗೆದುಕೊಂಡಿದ್ದಾನೆ. ಆದರೆ ಆ ಸಂದರ್ಭದಲ್ಲಿ ಅಲ್ಲಿ ಮಾಲೀಕ ಇರಲಿಲ್ಲ. ಮಾಲೀಕ ಶುಭಾಂಕರ್ ದೀಕ್ಷಿತ್‌ಗೆ ‘ಚಿಪ್ಸ್‌ ತೆಗೆದುಕೊಂಡಿದ್ದೇನೆ’ ಜೋರಾಗಿ ಕೂಗಿದರೂ ಆತ ಆತ ಪ್ರತಿಕ್ರಿಯೆ ನೀಡಿರಲಿಲ್ಲ. ಬಾಲಕ ಚಿಪ್ಸ್ ತೆಗೆದುಕೊಂಡು ಅಂಗಡಿಯಿಂದ ಹೊರ ಬಂದಿದ್ದ.ಆ ಬಳಿಕ ಮಾಲೀಕ, ಬಾಲಕನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದ. 

ಮಾತ್ರವಲ್ಲದೇ ಕಪಾಳಮೋಕ್ಷ ಮಾಡಿ, ಸಾರ್ವಜನಿಕವಾಗಿ ಬೈದಿದ್ದ. ಹುಡುಗನ ತಾಯಿಯನ್ನೂ ಸ್ಥಳಕ್ಕೆ ಕರೆಸಿದ್ದ. ಆಗ ಬಾಲಕನ ತಾಯಿ ಮಗನಿಗೆ ಗದರಿಸಿ, ಕಪಾಳಮೋಕ್ಷ ಮಾಡಿದ್ದಳು. ಬಳಿಕ ಮನೆಗೆ ಹಿಂದಿರುಗಿದ ಬಾಲಕ ಮನನೊಂದು ತನ್ನ ರೂಂನಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಕೆಲ ಹೊತ್ತಿನ ಬಳಿಕ ಬಾಲಕನ ತಾಯಿ ನೆರೆ ಮನೆಯವರ ಸಹಾಯದಿಂದ ಬಾಗಿಲು ತೆರೆದಾಗ ಆತ್ಮಹತ್ಯೆ ವಿಚಾರ ಬೆಳಕಿಗೆ ಬಂದಿದೆ.

ನಾನು ಕಳ್ಳ ಅಲ್ಲ- ಬಾಲಕನ ಪತ್ರ:

ಇನ್ನು ಸಾವಿಗೂ ಮುನ್ನ ಬಾಲಕ ಡೆತ್‌ ನೋಟ್‌ ಬರೆದಿದ್ದು ಆತನ ಕೊಠಡಿಯಲ್ಲಿ ಪತ್ತೆಯಾಗಿದೆ. ಅದರಲ್ಲಿ ‘ಅಮ್ಮ ನಾನು ಕಳ್ಳ ಅಲ್ಲ. ನಾನು ಕದ್ದಿಲ್ಲ. ನಾನು ಕಾಯುತ್ತಿದ್ದಾಗ ಅಂಕಲ್ (ಅಂಗಡಿಯವನು) ಅಲ್ಲಿರಲಿಲ್ಲ. ಹಾಗಾಗಿ ಬಿದ್ದಿದ್ದ ಕುರ್ಕುರೆ ತೆಗೆದುಕೊಂಡು ಬಂದೆ. ನನಗೆ ಕರ್ಕುರೆ ಅಂದರೆ ಇಷ್ಟ’ ಎಂದು ಬರೆದಿದ್ದಾನೆ.

ಕೇಂದ್ರಕ್ಕೆ ಆರ್‌ಬಿಐನಿಂದ ₹2.69 ಲಕ್ಷ ಕೋಟಿ ಲಾಭಾಂಶ

ಮುಂಬೈ: 2025ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರಕ್ಕೆ 2.69 ಲಕ್ಷ ಕೋಟಿ ರು. ಲಾಭಾಂಶ ನೀಡಲಾಗುವುದು ಎಂದು ಭಾರತದ ರಿಸರ್ವ್‌ ಬ್ಯಾಂಕ್‌ ಘೋಷಿಸಿದೆ. ಆರ್‌ಬಿಐ ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ನಿರ್ದೇಶಕರ ಮಂಡಳಿಯ 616ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ಕಳೆದ ಬಾರಿಗೆ ಹೋಲಿಸಿದರೆ ಕೇಂದ್ರಕ್ಕೆ ಸಂದಾಯವಾಗಲಿರುವ ಲಾಭ ಶೇ.27.4ರಷ್ಟು ಹೆಚ್ಚಳವಾಗಿದೆ. ಅಮೆರಿಕದಿಂದ ಆಮದು ತೆರಿಗೆ ಬೆದರಿಕೆ, ಪಾಕಿಸ್ತಾನದ ಜತೆಗಿನ ಸಂಘರ್ಷದಿಂದ ರಕ್ಷಣಾ ವೆಚ್ಚದಲ್ಲಿ ಹೆಚ್ಚಳವಾಗಿರುವ ಹೊತ್ತಿನಲ್ಲೇ ಈ ಘೋಷಣೆ ಮಹತ್ವ ಪಡೆದುಕೊಂಡಿದೆ.2023-24ರಲ್ಲಿ ಕೇಂದ್ರಕ್ಕೆ 2.1 ಲಕ್ಷ ಕೋಟಿ ರು. ಮತ್ತು 2022-23ರಲ್ಲಿ 87,416 ಕೋಟಿ ರು. ಲಾಭಾಂಶ ನೀಡಲಾಗಿತ್ತು.

Read more Articles on