;Resize=(412,232))
ನವದೆಹಲಿ: ಇ-ಕಾಮರ್ಸ್ ಕಂಪನಿಗಳ 10 ನಿಮಿಷದ ಡೆಲಿವರಿ ಸೌಲಭ್ಯದಿಂದಾಗಿ ಡೆಲಿವರಿ ಬಾಯ್‌ಗಳ ಜೀವಕ್ಕೇ ಅಪಾಯವಾಗುತ್ತದೆ ಎಂಬ ಆತಂಕದ ನಡುವೆಯೇ ಅಂಥ ವ್ಯವಸ್ಥೆ ನಿಲ್ಲಿಸುವಂತೆ ಎಲ್ಲ ಕಂಪನಿಗಳಿಗೆ ಕೇಂದ್ರ ಸರ್ಕಾರ ಖಡಕ್ ಮೌಖಿಕ ಸೂಚನೆ ನೀಡಿದೆ.
ಇದರ ಬೆನ್ನಲ್ಲೇ ‘10 ಮಿನಿಟ್ಸ್’ ಡೆಲಿವರಿ ವ್ಯವಸ್ಥೆಯನ್ನು ಬ್ಲಿಂಕಿಟ್ ತೆಗೆದುಹಾಕಿದೆ. ಅತ್ತ ಸ್ವಿಗ್ಗಿ, ಝೊಮೆಟೋ, ಝೆಪ್ಟೋ ಕೂಡ ಇದನ್ನು ಅಳವಡಿಸಿಕೊಳ್ಳುವ ನಿರೀಕ್ಷೆಯಿದೆ.
ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರು ಕಂಪನಿಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಈ ವೇಳೆ 10 ಮಿನಿಟ್ಸ್ ಡೆಲಿವರಿ ಸೌಲಭ್ಯವನ್ನು ತೆಗೆದುಹಾಕುವಂತೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಬ್ಲಿಂಕಿಟ್, ‘10,000ಕ್ಕೂ ಹೆಚ್ಚು ಉತ್ಪನ್ನಗಳನ್ನು 10 ನಿಮಿಷಗಳಲ್ಲಿ ತಲುಪಿಸಲಾಗಿದೆ’ ಎಂದಿದ್ದ ತನ್ನ ಟ್ಯಾಗ್‌ಲೈನ್‌ಅನ್ನು ‘30,000ಕ್ಕೂ ಹೆಚ್ಚು ಉತ್ಪನ್ನಗಳನ್ನು ನಿಮ್ಮ ಮನೆ ಬಾಗಿಲಿಗೆ ಮುಟ್ಟಿಸಿದ್ದೇವೆ’ ಎಂದು ಬದಲಿಸಿದೆ.
ಈ ನಡೆಯನ್ನು ಆಪ್ ಸಂಸದ ರಾಘವ್ ಚಡ್ಢಾ ಸ್ವಾಗತಿಸಿದ್ದು, ‘ಕೇಂದ್ರ ಸರ್ಕಾರದ ಸಕಾಲಿಕ ಹಸ್ತಕ್ಷೇಪದಿಂದ ಸಂತಸವಾಗಿದೆ’ ಎಂದಿದ್ದಾರೆ. ಇವರು ಸೋಮವಾರ 1 ದಿನದ ಮಟ್ಟಿಗೆ ಬ್ಲಿಂಕಿಟ್‌ನ ಡೆಲಿವರಿ ಬಾಯ್ ಆಗಿ ಅನುಭವ ಪಡೆದಿದ್ದರು.
ಗ್ರಾಹಕರನ್ನು ಸೆಳೆಯುವ ಸಲುವಾಗಿ ಇ-ಕಾಮರ್ಸ್ ಕಂಪನಿಗಳು ಆರ್ಡರ್ ಮಾಡಿದ ವಸ್ತುಗಳು/ತಿಂಡಿ-ತಿನಿಸು/ತರಕಾರಿ/ದಿನಸಿಗಳನ್ನು 10 ನಿಮಿಷಗಳೊಳಗಾಗಿ ತಲುಪಿಸುವ ಭರವಸೆ ನೀಡುತ್ತಿದ್ದವು. ಇದನ್ನು ಪಾಲಿಸುವ ಅವಸರದಲ್ಲಿ ಎಷ್ಟೋ ಬಾರಿ ಡೆಲಿವರು ಬಾಯ್‌ಗಳ ಪ್ರಾಣಕ್ಕೇ ಅಪಾಯ ಉಂಟಾಗುತ್ತಿತ್ತು. ಇದರ ವಿರುದ್ಧ ಅವರು ಡಿ.25 ಮತ್ತು 31ರಂದು ದೇಶವ್ಯಾಪಿ ಪ್ರತಿಭಟನೆಗೂ ಕರೆ ನೀಡಿದ್ದರು. ಇದೀಗ 10 ಮಿನಿಟ್ಸ್ ಡೆಲಿವರಿ ವ್ಯವಸ್ಥೆಯನ್ನು ಕೈಬಿಡಲಾಗಿದೆ.
- ಆರ್ಡರ್ ಮಾಡಿದ ಹತ್ತೇ ನಿಮಿಷದಲ್ಲಿ ಮನೆಗೆ ವಸ್ತುಗಳನ್ನು ತಲುಪಿಸುವ ಸೇವೆ ಇದು
- 10 ನಿಮಿಷದಲ್ಲಿ ಗುರಿ ಮುಟ್ಟುವ ಧಾವಂತದಲ್ಲಿ ಡೆಲಿವರಿ ಬಾಯ್‌ಗಳಿಗೆ ಅಪಘಾತ
- ಹೀಗಾಗಿ 10 ಮಿನಿಟ್ಸ್ ಸೇವೆ ನಿಲ್ಲಿಸಲು ಕೇಂದ್ರ ಸರ್ಕಾರದಿಂದ ಕಂಪನಿಗಳಿಗೆ ಸೂಚನೆ