ರಾಜ್ಯಪಾಲರ ಸಹಿ ಇಲ್ಲದಿದ್ರೂ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರದಲ್ಲಿ 10 ಬಿಲ್‌ ಜಾರಿ

KannadaprabhaNewsNetwork |  
Published : Apr 13, 2025, 02:04 AM ISTUpdated : Apr 13, 2025, 06:22 AM IST
Tamil Nadu Chief Minster MK Stalin (File Photo/ANI)

ಸಾರಾಂಶ

ರಾಜ್ಯಪಾಲರ ಅಂಕಿತವಿಲ್ಲದೇ 10 ವಿಧೇಯಕಗಳನ್ನು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಕಾನೂನಾಗಿ ಪರಿವರ್ತಿಸಿದೆ. ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಸಹಿಯಿಲ್ಲದೆ ವಿಧೇಯಕ ಕಾನೂನಾಗಿ ಪರಿವರ್ತನೆಯಾಗುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲಾಗಿದೆ.

ಚೆನ್ನೈ: ರಾಜ್ಯಪಾಲರ ಅಂಕಿತವಿಲ್ಲದೇ 10 ವಿಧೇಯಕಗಳನ್ನು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಕಾನೂನಾಗಿ ಪರಿವರ್ತಿಸಿದೆ. ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಸಹಿಯಿಲ್ಲದೆ ವಿಧೇಯಕ ಕಾನೂನಾಗಿ ಪರಿವರ್ತನೆಯಾಗುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲಾಗಿದೆ.

ತಮಿಳುನಾಡು ರಾಜ್ಯಪಾಲ ಎನ್‌.ಆರ್‌.ರವಿ ಅವರು 10 ವಿಧೇಯಕಗಳನ್ನು ಇಟ್ಟುಕೊಂಡು ಕಾಲಹರಣ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ಯಾವುದೇ ವಿಧೇಯಕಗಳ ಕುರಿತು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡಿತ್ತು. ಜತೆಗೆ, ‘ತಮಿಳುನಾಡು ಸರ್ಕಾರದ 10 ವಿಧೇಯಕಗಳನ್ನು ರಾಜ್ಯಪಾಲರಿಗೆ ಎರಡನೇ ಬಾರಿ ಅಂಗೀಕಾರಕ್ಕಾಗಿ ಕಳುಹಿಸಿಕೊಡಲಾಗಿದೆ. ಹಲವು ಸಮಯದಿಂದ ರಾಜ್ಯಪಾಲರು ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅದಕ್ಕೆ ಅಂಗೀಕಾರ ಸಿಕ್ಕಂತಾಗಿದೆ ಎಂದೇ ಭಾವಿಸಬಹುದು’ ಎಂದು ಹೇಳಿತ್ತು.

ಈ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ ಇದೀಗ ಆ 10 ವಿಧೇಯಕಗಳ ಕುರಿತು ಸರ್ಕಾರವು ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ. ಇದರಿಂದ ಆ ವಿಧೇಯಕಗಳು ಕಾನೂನಾಗಿ ಬದಲಾವಣೆಯಾದಂತಾಗಿದೆ.

ರಾಜ್ಯದ ವ್ಯಾಪ್ತಿಯ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ವಿಚಾರದಲ್ಲಿ ರಾಜ್ಯಪಾಲರ ಅಧಿಕಾರ ಕಡಿತಗೊಳಿಸುವುದು ಸೇರಿದಂತೆ 10 ವಿಧೇಯಕಗಳು ಈಗ ಕಾನೂನಾಗಿ ಬದಲಾಗಿವೆ.

ಗೌರ್ನರ್‌ ಅಂಕಿತ ಏಕಿಲ್ಲ?

ರಾಜ್ಯಪಾಲರು 10 ವಿಧೇಯಕಗಳಿಗೆ ಅಂಗೀಕಾರ ನೀಡದೇ ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎಂದು ತಮಿಳ್ನಾಡು ಸುಪ್ರೀಂಕೊರ್ಟ್‌ ಮೆಟ್ಟಿಲೇರಿತ್ತು

ಈ ಕುರಿತು ಇತ್ತೀಚೆಗೆ ತೀರ್ಪು ಪ್ರಕಟಿಸಿದ್ದ ಸುಪ್ರೀಂಕೋರ್ಟ್‌, ರಾಜ್ಯಪಾಲರು 3 ತಿಂಗಳಲ್ಲಿ ವಿಧೇಯಕ ಬಗ್ಗೆ ತೀರ್ಮಾನ ಪ್ರಕಟಿಸುವುದು ಕಡ್ಡಾಯ ಎಂದಿತ್ತು

ಒಂದು ವೇಳೆ 3 ತಿಂಗಳಲ್ಲಿ ಗೌರ್ನರ್‌ ಯಾವುದೇ ನಿರ್ಧಾರ ಪ್ರಕಟಿಸದೇ ಇದ್ದರೆ ಅದನ್ನು ಅನುಮೋದನೆ ಎಂದು ತಿಳಿಯಬಹುದು ಎಂದು ಸ್ಪಷ್ಟಪಡಿಸಿತ್ತು

ಹೀಗಾಗಿ ರಾಜ್ಯಪಾಲರು ತಮ್ಮ ಬಳಿಯೇ ಉಳಿಸಿಕೊಂಡಿದ್ದ 10 ವಿಧೇಯಕಕ್ಕೆ ಗೌರ್ನರ್‌ ಅನುಮೋದನೆ ಸಿಕ್ಕಿದೆ ಎಂದು ಭಾವಿಸಿ ಸರ್ಕಾರದಿಂದ ಅಧಿಸೂಚನೆ

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ