ಭಾಗವತ್‌ ಕೆನಡಾ ಭೇಟಿಗೆ ಅಲ್ಲಿನ 100 ಸಂಘಟನೆಗಳ ಭಾರಿ ಬೆಂಬಲ

Published : Aug 21, 2026, 08:08 AM IST
mohan bhagwat

ಸಾರಾಂಶ

ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗವತ್‌ ಅವರ ಪ್ರಸ್ತಾವಿತ ಕೆನಡಾ ಭೇಟಿಯನ್ನು ಬೆಂಬಲಿಸಿ, ಕೆನಡಾದ 100ಕ್ಕೂ ಅಧಿಕ ಸಂಸ್ಥೆಗಳು ಹಾಗೂ ನಾಗರಿಕ ಹಕ್ಕು ಸಂಘಟನೆಗಳು ಪ್ರಧಾನಿ ಮಾರ್ಕ್‌ ಕಾರ್ನಿ ಹಾಗೂ ಹಿರಿಯ ಸಚಿವರಿಗೆ ಪತ್ರ ಬರೆದಿವೆ.

ಒಟ್ಟಾವಾ: ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್‌ ಭಾಗವತ್‌ ಅವರ ಪ್ರಸ್ತಾವಿತ ಕೆನಡಾ ಭೇಟಿಯನ್ನು ಬೆಂಬಲಿಸಿ, ಕೆನಡಾದ 100ಕ್ಕೂ ಅಧಿಕ ಸಂಸ್ಥೆಗಳು ಹಾಗೂ ನಾಗರಿಕ ಹಕ್ಕು ಸಂಘಟನೆಗಳು ಪ್ರಧಾನಿ ಮಾರ್ಕ್‌ ಕಾರ್ನಿ ಹಾಗೂ ಹಿರಿಯ ಸಚಿವರಿಗೆ ಪತ್ರ ಬರೆದಿವೆ. ಜತೆಗೆ, ಭಾಗ್ವತ್‌ ಭೇಟಿಯನ್ನು ವಿರೋಧಿಸುತ್ತಿರುವ ಶಕ್ತಿಗಳ ಹಿಂದಿನ ಷಡ್ಯಂತ್ರವನ್ನು ಖಂಡಿಸಿವೆ.

‘ಭಾಗ್ವತ್‌ ದ್ವೇಷ ಭಾಷಣದ ಇತಿಹಾಸ

‘ಭಾಗ್ವತ್‌ ದ್ವೇಷ ಭಾಷಣದ ಇತಿಹಾಸ ಹೊಂದಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ಪ್ರತಿಪಾದಿಸುತ್ತಾರೆ ಹಾಗೂ ಅವರಿಗೆ ಬೆದರಿಕೆ ಹಾಕುತ್ತಾರೆ. ಹಾಗಾಗಿ ಭಾಗ್ವತ್‌ರ ಭೇಟಿಯನ್ನು ನಿರ್ಬಂಧಿಸಬೇಕು’ ಎಂದು ಎನ್‌ಡಿಪಿ ಸಂಸದರಾದ ಜೆನ್ನಿ ಕ್ವಾನ್, ಹೀದರ್ ಮೆಕ್‌ಫರ್ಸನ್ ಮತ್ತು ಇತರ ಸಂಘಟನೆಗಳು ಆಗ್ರಹಿಸಿದ್ದವು.

ಇದಕ್ಕೆ ಪ್ರತಿಯಾಗಿ ಪ್ರಧಾನಿಗೆ ಪತ್ರ ಬರೆದಿರುವ ಸಂಘಟನೆಗಳು, ‘ಕೆನಡಾದಲ್ಲಿ 19 ಲಕ್ಷಕ್ಕೂ ಅಧಿಕ ಹಿಂದೂಗಳಿದ್ದಾರೆ. ಅವರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಭಾಗ್ವತ್‌ ಕೆನಡಾಕ್ಕೆ ಬರುತ್ತಿದ್ದಾರೆ. ಹಾಗಾಗಿ ಅವರ ಭೇಟಿಗೆ ಅವಕಾಶ ಕೊಡಬೇಕು ಹಾಗೂ ವಿರೋಧಿ ಶಕ್ತಿಗಳ ಅಪಸ್ವರಕ್ಕೆ ಮಣೆ ಹಾಕಬಾರದು’ ಎಂದು ಮನವಿ ಮಾಡಿವೆ. ಜತೆಗೆ, ಭಾಗ್ವತ್‌ ಮೇಲೆ ಮಾಡಿರುವ ಆರೋಪಗಳಿಗೆ ಸೂಕ್ತ ಪುರಾವೆ ಒದಗಿಸುವಂತೆ ಆಗ್ರಹಿಸಿವೆ. ಅಮೆರಿಕದಲ್ಲೂ ವಿರೋಧ:

ಈ ನಡುವೆ ‘ಧಾರ್ಮಿಕ ಅಲ್ಪಸಂಖ್ಯಾತ ವಿರೋಧಿ ಸಂಘಟನೆ ಆರ್‌ಎಸ್‌ಎಸ್ ಮೇಲೆ ನಿರ್ಬಂಧ ವಿಧಿಸಬೇಕು ಹಾಗೂ ಅದರ ನಾಯಕರಿಗೆ ಯಾವುದೇ ರಾಜತಾಂತ್ರಿಕ ಗೌರವಗಳನ್ನು ನೀಡಬಾರದು’ ಎಂದು ಧಾರ್ಮಿಕ ಸ್ವಾತಂತ್ರ್ಯದ ಕುರಿತಾದ ಅಮೆರಿಕದ ಸಲಹಾ ಮಂಡಳಿಯೊಂದರ ಅಧಿಕಾರಿಗಳು ಅಮೆರಿಕ ಸರ್ಕಾರವನ್ನು ಕೋರಿದ್ದಾರೆ.

ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ

‘ಆರ್‌ಎಸ್‌ಎಸ್‌ನ ಅಂಗಸಂಸ್ಥೆಗಳು ಕ್ರೈಸ್ತರು ಮತ್ತು ಮುಸ್ಲಿಮರಂತಹ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿಗಳನ್ನು ನಡೆಸಿವೆ. ಇದೀಗ ಆರ್‌ಎಸ್‌ಎಸ್ ಮುಖ್ಯಸ್ಥ ಭಾಗ್ವತ್‌ ಅಮೆರಿಕ ಭೇಟಿಗೆ ಯೋಜಿಸುತ್ತಿದ್ದಾರೆ. ಅವರನ್ನು ಉನ್ನತ ಸಭೆ ಅಥವಾ ರಾಜತಾಂತ್ರಿಕ ಶಿಷ್ಟಾಚಾರಗಳ ಮೂಲಕ ಗೌರವಿಸಬಾರದು. ಬದಲಿಗೆ, ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗೆ ಕಾರಣವಾದ ಆರ್‌ಎಸ್‌ಎಸ್ ಸದಸ್ಯರ ಮೇಲೆ ನಿರ್ಬಂಧ ವಿಧಿಸುವತ್ತ ಸರ್ಕಾರ ಗಮನಹರಿಸಬೇಕು’ ಎಂದು ಯುಎಸ್‌ಸಿಐಆರ್‌ಎಫ್‌ ಆಯೋಗದ ಅಧ್ಯಕ್ಷ ಆಸಿಫ್ ಮಹಮೂದ್ ಆಗ್ರಹಿಸಿದ್ದಾರೆ.

ಆರ್‌ಎಸ್‌ಎಸ್‌ನ ಶತಮಾನೋತ್ಸವದ ನಿಮಿತ್ತ ವಿದೇಶಿ ಸಂಪರ್ಕದ ಭಾಗವಾಗಿ ಆ.25ರಿಂದ ಅಮೆರಿಕ, ಕೆನಡಾ ಮತ್ತು ಯುಕೆಗೆ ಭಾಗ್ವತ್‌ ಭೇಟಿ ನೀಡಲಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಶುದ್ಧೀಕರಣ’ ವಿವಾದದಲ್ಲಿ ಸ್ವಪಕ್ಷದಿಂದಲೇ ಬೆಂಬಲ ಸಿಗಲಿಲ್ಲ: ಖರ್ಗೆ ಬೇಸರ
ಆನ್‌ಲೈನ್‌ ಕೋಚಿಂಗ್‌: ಮೋದಿ ಭರವಸೆ ಬೆನ್ನಲ್ಲೇ ಜೋಶಿ ಕಣಕ್ಕೆ