ಏ.1ರಿಂದ ಆಶಾಗೆ ₹10000 - ಆಶಾ ಕಾರ್ಯಕರ್ತೆಯರ ಬಹುತೇಕ ಬೇಡಿಕೆಗೆ ಸರ್ಕಾರ ಒಪ್ಪಿಗೆ

Published : Jan 11, 2025, 09:38 AM IST
ASHA Workers

ಸಾರಾಂಶ

ರಾಜ್ಯದ ಎಲ್ಲೆಡೆಯಿಂದ ಆಗಮಿಸಿ ನಗರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಮಾಸಿಕ 10,000 ರು. ಗೌರವಧನ ನೀಡುವುದು ಸೇರಿ ಬಹುತೇಕ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ.

ಬೆಂಗಳೂರು : ರಾಜ್ಯದ ಎಲ್ಲೆಡೆಯಿಂದ ಆಗಮಿಸಿ ನಗರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಮಾಸಿಕ 10,000 ರು. ಗೌರವಧನ ನೀಡುವುದು ಸೇರಿ ಬಹುತೇಕ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ಕಾರ್ಯಕರ್ತೆಯರು ಹಿಂಪಡೆದಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಇಲಾಖೆಯ ಅಧಿಕಾರಿಗಳು ಹಾಗೂ ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸಂಜೆ ಸಭೆ ನಡೆಸಿ, ಪ್ರತಿ ತಿಂಗಳು 5,000 ರು. ಹಾಗೂ ಕೇಂದ್ರ ಸರ್ಕಾರದ 34 ಸೇವೆಗಳಿಗೆ ನೀಡುವ ಗೌರವಧನ ಸೇರಿ ಒಟ್ಟು 10 ಸಾವಿರ ರು. ಅನ್ನು ಏ.1ರಿಂದ ನೀಡಲಾಗುವುದು ಎಂದು ಘೋಷಿಸಿದರು.

ಇನ್ನು ಆರೋಗ್ಯ ಸೇವೆಗಳ ಕುರಿತಾದ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಇರುವ ಪೋರ್ಟಲ್‌ ಸಮಸ್ಯೆಯನ್ನು ಪರಿಹರಿಸಬೇಕು. ಆರೋಗ್ಯ ಸಮಸ್ಯೆ ಎದುರಾದರೆ ಪ್ರತಿ ತಿಂಗಳು ಸಿಗುವ ರಜೆ ಕ್ರೋಡೀಕರಿಸಿ, ಗರಿಷ್ಠ ಮೂರು ತಿಂಗಳವರೆಗೆ ಗೌರವಧನ ನಿಲ್ಲಿಸದೆ ರಜೆ ಮಂಜೂರು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಿಎಂ, ಬಜೆಟ್ ಪೂರ್ವದಲ್ಲಿ ಆಶಾ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.

ಸಭೆ ಬಳಿಕ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ, ಪ್ರತಿ ತಿಂಗಳು 10,000 ರು. ನಿಗದಿತ ಗೌರವಧನ ನೀಡುವ ಭರವಸೆ ಸಿಕ್ಕಿದೆ. ಅದರ ನಂತರ ಹೆಚ್ಚಿನ ಕೆಲಸ ಮಾಡುವವರಿಗೆ ಪ್ರೋತ್ಸಾಹಧನ ರೂಪದಲ್ಲಿ ಪ್ರತಿ ತಿಂಗಳು 4,000 ರು.ವರೆಗೆ ದುಡಿಯಲು ಅವಕಾಶವಿದೆ. ಅನಾರೋಗ್ಯ ಮತ್ತು ವಿಶ್ರಾಂತಿಗಾಗಿ ರಜೆ ನೀಡಲಾಗುತ್ತದೆ. ನಿವೃತ್ತಿ ಸಂದರ್ಭದಲ್ಲಿ 5 ಲಕ್ಷ ರು. ಇಡಗಂಟು ನೀಡುವ ವಿಚಾರವಾಗಿ ಬೇರೆ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಅಧ್ಯಯನ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಯವರು ನೀಡಿದ್ದಾರೆ ಎಂದು ತಿಳಿಸಿದರು.

ನ್ಯಾಯಯುತ ಬೇಡಿಕೆಗಳಿಗಾಗಿ ನಾಲ್ಕು ದಿನಗಳಿಂದ ಸಾವಿರಾರು ಆಶಾ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆಗೆ ಸರ್ಕಾರ ಧನಾತ್ಮಕವಾಗಿ ಸ್ಪಂದಿಸಿರುವುದಕ್ಕೆ ಬಹಳ ಸಂತೋಷವಾಗಿದೆ. ಬೇಡಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿಯವರಿಗೆ ಹಾಗೂ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಡಿ.ನಾಗಲಕ್ಷ್ಮೀ ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!