13 ವರ್ಷಗಳಿಂದ ಕೋಮಾದಲ್ಲಿದ್ದವೆ ಪ್ಯಾಸಿವ್‌ ಯೂಥನೇಷಿಯಾ ಶುರು

ನವದೆಹಲಿ: 13 ವರ್ಷಗಳ ಹಿಂದೆ 4ನೇ ಮಹಡಿಯಿಂದ ಬಿದ್ದ ಪರಿಣಾಮ ಮೆದುಳಿಗೆ ಪೆಟ್ಟಾಗಿ ಕೋಮಾಗೆ ಜಾರಿದ್ದ ಹರೀಶ್‌(32) ರಾಣಾಗೆ ದಯಾಮರಣ ನೀಡಲು ಸುಪ್ರೀಂ ಕೋರ್ಟ್‌ ಅನುಮತಿಸಿದ ಬೆನ್ನಲ್ಲೇ ಪ್ಯಾಸಿವ್‌ ಯೂಥನೇಷಿಯಾ (ಜೀವನಾಧಾರಗಳನ್ನು ಹಿಂಪಡೆಯುವ) ಪ್ರಕ್ರಿಯೆಯನ್ನು ಶನಿವಾರದಿಂದ ಆರಂಭಿಸಲಾಗಿದೆ.

ಈ ಪ್ರಕ್ರಿಯೆಗಾಗಿ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿದೆ. ಅಲ್ಲಿ ವಿಶೇಷ ವೈದ್ಯರ ತಂಡವು ರಾಣಾಗೆ ದಯಾಮರಣ ಕೊಡುವ ವೈದ್ಯಕೀಯ ಪ್ರಕ್ರಿಯೆಯನ್ನು ಶುರು ಮಾಡಿದ್ದಾರೆ. ಇದು ಮುಗಿಯುವ ವರೆಗೂ ರಾಣಾ ಅವರ ಆರೈಕೆಯಲ್ಲೇ ಇರಲಿದ್ದಾರೆ. ಕರ್ನಾಟಕದ ಅರುಣಾ ಶಾನ್ಭಾಗ್‌ ಪ್ರಕರಣದಲ್ಲಿ ದಯಾಮಣವನ್ನು ನಿರಾಕರಿಸಿದ್ದ ಸುಪ್ರೀಂ ಕೋರ್ಟ್‌, ಅದಕ್ಕೆ ಅನುಮತಿಸಿದ ಮೊದಲ ಕೇಸ್‌ ಇದಾಗಿದೆ. ಪ್ರಕ್ರಿಯೆ ಹೇಗೆ?:

ದಯಾಮರಣದಲ್ಲಿ ಆ್ಯಕ್ಟಿವ್‌ (ಇಂಜೆಕ್ಷನ್‌ ಮೂಲಕ ಸಾವಿಗೆ ಎಡೆಮಾಡಿಕೊಡುವುದು) ಮತ್ತು ಪ್ಯಾಸಿವ್‌ (ಜೀವನಾಧಾರ ತೆಗೆಯುವುದು) ಎಂಬೆರಡು ವಿಧಾನಗಳಿದ್ದು, ರಾಣಾರನ್ನು ಎರಡನೇ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ರೋಗಿಯ ಆರೋಗ್ಯದಲ್ಲಿ ಚೇತರಿಕೆಯು ಸಾಧ್ಯವೇ ಇಲ್ಲ ಎಂಬ ಸ್ಥಿತಿಯನ್ನು ತಲುಪಿದಾಗ ಪ್ಯಾಸಿವ್‌ ಯೂಥನೇಷಿಯಾ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತದೆ. ಇದರಡಿಯಲ್ಲಿ ರೋಗಿಯನ್ನು ಜೀವಂತವಾಗಿಡಲು ನೀಡಲಾಗಿದ್ದ ವೆಂಟಿಲೇಟರ್‌, ಆಹಾರದ ಟ್ಯೂಬ್‌, ಔಷಧಿ ನೀಡುವ ಟ್ಯೂಬ್‌ ಇತ್ಯಾದಿ ಆಧಾರಗಳನ್ನು ಒಂದೊಂದಾಗಿ ಹಿಂಪಡೆಯಲಾಗುತ್ತದೆ.


==ಕೋಮಾಗೆ ಜಾರಿದ್ದು ಹೇಗೆ?:

2013ರಲ್ಲಿ ಪಂಜಾಬ್‌ ವಿವಿಯ ವಿದ್ಯಾರ್ಥಿಯಾಗಿದ್ದ ರಾಣಾ, ತಾವು ಉಳಿದುಕೊಂಡಿದ್ದ ಪಿ.ಜಿ.ಯ 4ನೇ ಮಹಡಿಯಿಂದ ಬಿದ್ದಿದ್ದರು. ಪರಿಣಾಮ ಅವರ ಮೆದುಳಿಗೆ ಗಂಭೀರ ಏಟು ಬಿದ್ದಿದ್ದು, ಕೋಮಾಗೆ ಜಾರಿದ್ದರು. ಅಂದಿನಿಂದ ಇಂದಿನ ವರೆಗೆ ನಿಸ್ತೇಜವಾಗಿ ಮಲಗಿದ್ದ ರಾಣಾಗೆ ಈ ಸಾವು-ಬದುಕಿನ ನಡುವಿನ ಹೋರಾಟದಿಂದ ಮುಕ್ತಿ ಕೊಡಿಸುವ ಉದ್ದೇಶದಿಂದ ಅವರ ಪರಿವಾರ ದಯಾಮರಣಕ್ಕೆ ಅನುಮತಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಇದಕ್ಕೊಪ್ಪಿದ ನ್ಯಾಯಾಲಯ, ರಾಣಾಗೆ ಘನತೆಯಿಂದ ಸಾಯುವ ಹಕ್ಕನ್ನು ನೀಡುವ ಮೂಲಕ ಪ್ಯಾಸಿವ್‌ ಯೂಥನೇಷಿಯಾಗೆ ಅನುಮತಿಸಿತ್ತು.

==

ಎಲ್ಲರನ್ನೂ ಕ್ಷಮಿಸು, ಹೊರಡುವ ಸಮಯ ಬಂದಿದೆ....

ಬ್ರಹ್ಮಕುಮಾರಿ ಸಹೋದರಿಯಿಂದ ಅಂತಿಮ ವಿದಾಯ

ಗಾಜಿಯಾಬಾದ್‌: ಕೋಮಾದಲ್ಲಿರುವ ಹರೀಶ್‌ ರಾಣಾ ಚೇತರಿಸಿಕೊಳ್ಳುವುದಿಲ್ಲ ಎಂದು ತಿಳಿದಿದ್ದರೂ ಕಳೆದ 13 ವರ್ಷಗಳಿಂದ ಮಗುವಿನಂತೆ ಆರೈಕೆ ಮಾಡಿದ್ದ ಪರಿವಾರ, ಶನಿವಾರ ಅವರಿಗೆ ಅಂತಿಮ ವಿದಾಯ ಹೇಳಿದೆ.ಯೂಥನೇಷಿಯಾಗಾಗಿ ಗಾಜಿಯಾಬಾದ್‌ನಿಂದ ದೆಹಲಿಗೆ ಕರೆದೊಯ್ಯುವ ಮುನ್ನ ರಾಣಾರ ಪರಿವಾರವೆಲ್ಲಾ ಅವರ ಸುತ್ತ ಸೇರಿತ್ತು. ಬ್ರಹ್ಮಾಕುಮಾರಿ ಸಹೋದರಿಯೊಬ್ಬರು ರಾಣಾರ ಹಣೆಗೆ ತಿಲಕವಿಟ್ಟು, ‘ಎಲ್ಲರನ್ನೂ ಕ್ಷಮಿಸಿ ಹಾಗೂ ಎಲ್ಲರಿಂದಲೂ ಕ್ಷಮೆ ಯಾಚಿಸಿ ಮಲಗು. ಇಲ್ಲಿಂದ ಹೊರಡುವ ಸಮಯ ಬಂದಿದೆ’ ಎಂದು ತಲೆ ನೇವರಿಸುತ್ತಾ ಅಂತಿಮ ವಿದಾಯ ಹೇಳಿದರು. ಈ ಮೂಲಕ ಇಹಲೋಕದಿಂದ ಪರಲೋಕದ ಯಾತ್ರೆಗೆ ಅವರನ್ನು ಅಣಿಗೊಳಿಸಿದರು. ಬಳಿಕ ರಾಣಾರನ್ನು ದೆಹಲಿಗೆ ಸಾಗಿಸಲಾಯಿತು.