ಭೋಪಾಲ್: ಮಧ್ಯಪ್ರದೇಶದ ಹರ್ದಾದಲ್ಲಿರುವ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಮಂಗಳವಾರ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಸಿಲುಕಿ 9 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅಲ್ಲದೇ ಕಾರ್ಖಾನೆಯೊಳಗೆ ಮತ್ತಷ್ಟು ಜನ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ರಾಜಧಾನಿ ಭೋಪಾಲ್‌ನಿಂದ 150 ಕಿ.ಮೀ. ದೂರದಲ್ಲಿರುವ ಹರ್ದಾ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ.
ಪಟಾಕಿ ಸ್ಪೋಟಗೊಳ್ಳುತ್ತಿರುವ ಹಾಗೂ ಪ್ರಾಣ ಉಳಿಸಿಕೊಳ್ಳಲು ಜನ ಓಡುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರಿ ಪ್ರಮಾಣದ ಸ್ಪೋಟದಿಂದಾಗಿ ಇಡೀ ಪ್ರದೇಶವನ್ನು ದಟ್ಟ ಹೊಗೆ ಆವರಿಸಿದೆ. ಬೆಂಕಿ ನಂದಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಿಷಿ ಗಾರ್ಗ್ ಹೇಳಿದ್ದಾರೆ.
4 ಲಕ್ಷ ರು. ಪರಿಹಾರ ಘೋಷಣೆ:
ಘಟನೆಯ ಬೆನ್ನಲ್ಲೇ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಮೋಹನ್ ಯಾದವ್, ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರು. ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೇ ಗಾಯಾಳುಗಳ ಸಂಪೂರ್ಣ ಆಸ್ಪತ್ರೆ ವೆಚ್ಚವನ್ನು ಸರ್ಕಾರದ ವತಿಯಿಂದಲೇ ಭರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಭಾರತೀಯ ಸೇನೆಯೊಂದಿಗೂ ಮಾತುಕತೆ ನಡೆಸಿದ್ದು, ಹೆಲಿಕಾಪ್ಟರ್ ಸೇವೆ ಒದಗಿಸಲು ಕೋರಲಾಗಿದೆ.
ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ಸಕಲ ವ್ಯವಸ್ಥೆ: 100ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸುಟ್ಟಗಾಯಗಳಿಗೆ ಚಿಕಿತ್ಸೆ ಒದಗಿಸಲು ಸಕಲ ವ್ಯವಸ್ಥೆಗಳನ್ನು ಕೈಗೊಳ್ಳಲು ಇಂದೋರ್, ಭೋಪಾಲ್ ಮತ್ತು ಏಮ್ಸ್ ಆಸ್ಪತ್ರೆಗಳಲ್ಲಿ ಕೈಗೊಳ್ಳಲಾಗಿದೆ. ಅಲ್ಲದೇ ಸುತ್ತಲಿನ ಆಸ್ಪತ್ರೆಗಳಿಂದ ಸ್ಥಳಕ್ಕೆ 14 ಮಂದಿ ವೈದ್ಯರನ್ನು ಕಳುಹಿಸಲಾಗಿದೆ. 50 ಹೆಚ್ಚು ಆ್ಯಂಬುಲೆನ್ಸ್‌ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಮೋದಿ ಸೇರಿ ಗಣ್ಯರ ಸಂತಾಪ: ಪಟಾಕಿ ದುರಂತ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಧಾನಮಂತ್ರಿ ವಿಪತ್ತು ನಿರ್ವಹಣಾ ನಿಧಿಯಿಂದ 2 ಲಕ್ಷ ರು. ಪರಿಹಾರ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಕಾರ್ಯಾಲಯ, ‘ಮಧ್ಯಪ್ರದೇಶದ ಹರ್ದಾದಲ್ಲಿ ನಡೆದ ಪಟಾಕಿ ದುರಂತದಲ್ಲಿ ಸಂಭವಿಸಿದ ಪ್ರಾಣಹಾನಿಯಿಂದ ಆಘಾತವಾಗಿದೆ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ ನಮ್ಮ ಸಂತಾಪಗಳು. ಗಾಯಗೊಂಡವರು ಶೀಘ್ರ ಗುಣವಾಗಲಿ’ ಎಂದು ಹೇಳಿದೆ.
ತಿಂಡಿ ಕೊಡಲು ಬಂದ ಬಾಲಕ ಕಾಣೆ: ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ತಿಂಡಿ ಕೊಡಲು ಬಂದಿದ್ದ 8 ವರ್ಷದ ಬಾಲಕ ಕಾಣೆಯಾಗಿರುವುದಾಗಿ ಆತನ ತಂದೆ ದುಃಖ ತೋಡಿಕೊಂಡಿದ್ದಾರೆ.
‘ನನ್ನ ಮಗ ಟಿಫಿನ್ ಬಾಕ್ಸ್ ಹಿಡಿದು ನನ್ನೆಡೆಗೆ ಬರುತ್ತಿದ್ದ ಈ ಸಮಯದಲ್ಲಿ ಭಾರಿ ಸ್ಫೋಟ ಸಂಭವಿಸಿತು. ಇದಾದ ಬಳಿಕ ನನ್ನ ಮಗ ಕಾಣೆಯಾಗಿದ್ದಾನೆ. ಅವನಿಗೆ ಏನಾಗಿದೆಯೋ ಎಂದು ಭಯವಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಬಹಳ ದೂರದವರೆಗೆ ಸ್ಫೋಟಕಗಳ ಸಿಡಿತ: ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಪಟಾಕಿಗಳು ಬಹಳ ದೂರದವರೆಗೆ ಹಾರಿ ಬಿದ್ದು ಸ್ಪೋಟಗೊಳ್ಳುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಕಾರ್ಖಾನೆಯಲ್ಲಿ ಸುಮಾರು 150 ಮಂದಿ ಕೆಲಸಗಾರರಿದ್ದ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಕಾರ್ಖಾನೆ ಹಾಗೂ ಸುತ್ತಮುತ್ತ ಇದ್ದವರು ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಓಡಿದ್ದಾರೆ. ಅಕ್ಕಪಕ್ಕದ ಮನೆಗಳ ಮೇಲೂ ಪಟಾಕಿಗಳು ಬಿದ್ದು ಸ್ಪೋಟಗೊಂಡಿವೆ ಎಂದು ಅವರು ಹೇಳಿದ್ದಾರೆ.