ಸಿರಿಯಾದೊಳಗೆ ನುಗ್ಗಿ ಕ್ಷಿಪಣಿ ಘಟಕ ನಾಶಪಡಿಸಿದ ಇಸ್ರೇಲ್‌! ಇದೀಗ ಮಾಹಿತಿ ಬಹಿರಂಗ

KannadaprabhaNewsNetwork |  
Published : Jan 04, 2025, 12:32 AM ISTUpdated : Jan 04, 2025, 04:52 AM IST
ಸಿರಿಯಾ | Kannada Prabha

ಸಾರಾಂಶ

ಜೆರುಸಲೇಂ: ವಿದೇಶಗಳಿಗೆ ನುಗ್ಗಿ ಅಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುವುದಕ್ಕೆ ಖ್ಯಾತಿ ಹೊಂದಿರುವ ಇಸ್ರೇಲ್‌ ಮತ್ತೆ ಅಂಥದ್ದೇ ಕಾರ್ಯಾಚರಣೆ ನಡೆಸಿದೆ.

ಜೆರುಸಲೇಂ: ವಿದೇಶಗಳಿಗೆ ನುಗ್ಗಿ ಅಲ್ಲಿ ರಹಸ್ಯ ಕಾರ್ಯಾಚರಣೆ ನಡೆಸುವುದಕ್ಕೆ ಖ್ಯಾತಿ ಹೊಂದಿರುವ ಇಸ್ರೇಲ್‌ ಮತ್ತೆ ಅಂಥದ್ದೇ ಕಾರ್ಯಾಚರಣೆ ನಡೆಸಿದೆ. 6 ತಿಂಗಳ ಹಿಂದೆ 100 ಕಮಾಂಡೋಗಳು ಸಿರಿಯಾದೊಳಗೆ ನುಗ್ಗಿ ಅಲ್ಲಿನ ರಹಸ್ಯ ಕ್ಷಿಪಣಿ ತಯಾರಿಕಾ ಘಟಕವೊಂದರ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿದ ಘಟನೆ ಕುರಿತು ಇಸ್ರೇಲ್‌ ಇದೀಗ ಮಾಹಿತಿ ಬಹಿರಂಗ ಮಾಡಿದೆ.

ಏನಿದು ಪ್ರಕರಣ?:

ಇಸ್ರೇಲ್‌ ಮೇಲೆ ದಾಳಿಗೆಂದೇ ಕ್ಷಿಪಣಿ ತಯಾರಿಸಲು ಬೆಟ್ಟಗುಡ್ಡಗಳ ಪ್ರದೇಶದಲ್ಲಿ ನೆಲದಾಳದಲ್ಲಿ ಸಿರಿಯಾ ರಹಸ್ಯ ಘಟಕ ತೆರೆದಿತ್ತು. ಇದಕ್ಕೆ ಇರಾನ್‌ ಹಣಕಾಸು ನೆರವು ನೀಡಿತ್ತು. 2017ರಲ್ಲೇ ಇದರ ಮಾಹಿತಿ ಪಡೆದಿದ್ದ ಇಸ್ರೇಲ್‌, ಅಂದಿನಿಂದಲೂ ಅದರ ಮೇಲೆ ನಿಗಾ ಇಟ್ಟಿತ್ತು.

ದಾಳಿಗೆ ಸಿದ್ಧತೆ:

ಘಟಕದ ಮೇಲೆ ದಾಳಿಗೆ ಬಹಳ ಹಿಂದಿನಿಂದಲೇ ಇಸ್ರೇಲ್‌ ಯೋಜಿಸಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಅದರೆ ಇತ್ತೀಚೆಗೆ ತನ್ನ ಮೇಲೆ ಇರಾನ್‌, ಲೆಬನಾನ್‌, ಹಮಾಸ್‌ ಏಕಕಾಲಕ್ಕೆ ದಾಳಿ ನಡೆಸಿದ ಬಳಿಕ ಈ ಕ್ಷಿಪಣಿ ಘಟಕದ ಮೇಲೆ ದಾಳಿಗೆ ಇಸ್ರೇಲ್‌ ನಿರ್ಧರಿಸಿತ್ತು.

ದಾಳಿ ಹೇಗೆ?:

ಸೆ.8ರಂದು 2 ಯುದ್ಧ ಹೆಲಿಕಾಪ್ಟರ್‌ಗಳು, 21 ಯುದ್ಧ ವಿಮಾನ, 5 ಡ್ರೋನ್‌, 14 ಗುಪ್ತಚರ ವಿಮಾನಗಳೊಂದಿಗೆ 100 ಶಾಲ್ದಾಗ್ ಕಮಾಂಡೋಗಳು ಸಿರಿಯಾದ ರೆಡಾರ್‌ಗಳ ಕಣ್ತಪ್ಪಿಸಿ ಮೆಡಿಟರೇನಿಯನ್‌ ಸಮುದ್ರದ ಮೇಲೆ ಕೆಳಮಟ್ಟದಲ್ಲಿ ಹಾರಾಟ ನಡೆಸಿ ಸಿರಿಯಾದ ಕ್ಷಿಪಣಿ ಉತ್ಪಾದನಾ ಘಟಕದ ಬಳಿ ಬಂದಿಳಿದರು.

ಈ ವೇಳೆ ಸಿರಿಯಾದ ಗಮನ ಬೇರೆಡೆ ಸೆಳೆಯಲು, ಇಸ್ರೇಲಿ ಸೇನಾ ಪಡೆ ಸಿರಿಯಾದ ಇತರೆ ಭಾಗಗಳ ಮೇಲೆ ರಾಕೆಟ್‌ ದಾಳಿ ನಡೆಸಿತ್ತು. ಹೀಗೆ ಸಿರಿಯಾದ ಗಮನ ಬೇರೆಡೆ ಹೋದಾಗ ಇಸ್ರೇಲಿ ಕಮಾಂಡೋಗಳು ನೆಲದಾಳದಲ್ಲಿ ಇರುವ ಘಟಕದೊಳಗೆ ನುಗ್ಗಿ ಅದರೊಳಗೆ ಪರೀಕ್ಷೆ ನಡೆಸಿದ್ದಾರೆ. ಬಳಿಕ ಅದರೊಳಗೆ 1 ಟನ್‌ನಷ್ಟು ಸ್ಫೋಟಕ ಇಟ್ಟು ಹೊರಗೆ ಬಂದು ಹೊರಗಿಂದಲೇ ಸ್ಫೋಟ ನಡೆಸಿ ಇಡೀ ಘಟಕವನ್ನೇ ಕೆಲವೇ ಕ್ಷಣಗಳಲ್ಲಿ ಧ್ವಂಸಗೊಳಿಸಿ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ಈ ಇಡೀ ಕಾರ್ಯಾಚರಣೆ ಕೇವಲ 3 ಗಂಟೆಯಲ್ಲಿ ಮುಗಿದಿದೆ.ಕ್ಷಿಪಣಿ ಘಟಕದಲ್ಲೇನಿತ್ತು?:

ಕುದುರೆಯ ಲಾಳದಂತಿದ್ದ ಕಟ್ಟಡಕ್ಕೆ 3 ದ್ವಾರಗಳಿದ್ದು, ಪರ್ವತದ ಕಡೆಗಿದ್ದ ಬಾಗಿಲನ್ನು ಕಚ್ಚಾ ವಸ್ತು ತರಲು, ಇನ್ನೊಂದನ್ನು ಮಿಸೈಲ್‌ಗಳನ್ನು ಕೊಂಡೊಯ್ಯಲು ಹಾಗೂ ಮತ್ತೊಂದನ್ನು ಸರಕು ಸಾಗಣೆ ಹಾಗೂ ಅಧಿಕಾರಿಗಳ ಓಡಾಟಕ್ಕೆ ಬಳಸಲಾಗುತ್ತಿತ್ತು. ಕಟ್ಟಡದೊಳಗೆ ರಾಕೆಟ್‌ ಇಂಧನ ಮಿಶ್ರಣ ಯಂತ್ರ, ಕ್ಷಿಪಣಿ ನಿರ್ಮಾಣ ವಿಭಾಗ ಹಾಗೂ ಪೇಂಟ್‌ ಮಾಡುವ ಸ್ಥಳ ಸೇರಿದಂತೆ 16 ಕೋಣೆಗಳಿದ್ದವು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ