- ಸೇತುವೆ ಸ್ಲ್ಯಾಬ್ ಕುಸಿದು ವಾಹನ ನದಿಗೆ
- ಮೋರ್ಬಿ ದುರಂತ ಬಳಿಕ ಇನ್ನೊಂದು ಘಟನೆ--
- ಶಿಥಿಲವಾಗಿದ್ದರೂ ವಾಹನ ಸಂಚಾರಕ್ಕೆ ಬ್ರಿಡ್ಜ್ ಮುಕ್ತವಾಗಿತ್ತು- ಹೊಸ ಬ್ರಿಡ್ಜ್‌ಗೆ ಸರ್ಕಾರ ಒಪ್ಪಿದ್ದರೂ ಹಳೇ ಸೇತುವೆ ಬಳಕೆ
- ಸೇತುವೆ ಅಲುಗಾಡುತ್ತಿದ್ದರೂ ವಾಹನ ಸಂಚಾರ ನಿಲ್ಲಿಸಿರಲಿಲ್ಲ- ಈ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ: ಸ್ಥಳೀಯರ ಆಕ್ರೋಶ--
ವಡೋದರಾ: 4 ದಶಕಗಳ ಹಳೆಯ ಸೇತುವೆಯೊಂದು ಕುಸಿದ ಪರಿಣಾಮ ವಾಹನ ಸಮೇತ ನದಿಗೆ ಬಿದ್ದ ಇಬ್ಬರು ಮಕ್ಕಳು ಸೇರಿ 11 ಜನರು ಸಾವನ್ನಪ್ಪಿದ ಭೀಕರ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಅದೃಷ್ಟವಶಾತ್ ವಾಹನಗಳಲ್ಲಿದ್ದ 9 ಜನರನ್ನು ರಕ್ಷಿಸುವಲ್ಲಿ ಸ್ಥಳೀಯ ಜನತೆ ಮತ್ತು ರಕ್ಷಣಾ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.3 ವರ್ಷಗಳ ಹಿಂದೆ ಗುಜರಾತ್‌ನ ಮೋರ್ಬಿಯಲ್ಲಿ ಸೇತುವೆಯೊಂದು ಕುಸಿದು 135 ಜನರು ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಈ ದುರ್ಘಟನೆ ಸಂಭವಿಸಿದೆ.
ಘಟನೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿಯಾಗಿ ಗಣ್ಯರು ಕಂಬನಿ ಮಿಡಿದಿದ್ದಾರೆ.ಏನಾಯ್ತು?:
ಮಧ್ಯ ಗುಜರಾತ್ ಅನ್ನು ಸೌರಾಷ್ಟ್ರದೊಂದಿಗೆ ಬೆಸೆಯುವ ಮಹಿಸಾಗರ್ ನದಿಗೆ ಅಡ್ಡಲಾಗಿ 4 ದಶಕಗಳ ಹಿಂದೆ ಗಂಭೀರಾ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ಮಧ್ಯಭಾಗದಲ್ಲಿ ಬರುವ 10-15 ಮೀ. ಉದ್ದದ ಸ್ಲ್ಯಾಬ್ ಬುಧವಾರ ಬೆಳಗ್ಗೆ 7.30ರ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದೆ. ಪರಿಣಾಮ ಆ ಜಾಗದಲ್ಲಿ ಸಾಗುತ್ತಿದ್ದ 2 ಟ್ರಕ್, 2 ವ್ಯಾನ್, 1 ಆಟೋ ಸೇರಿ ಹಲವು ವಾಹನಗಳು ನದಿಗೆ ಉರುಳಿವೆ. ಇನ್ನೂ 2 ವಾಹನಗಳು ಅಪಾಯದ ಅಂಚಿನಲ್ಲಿದ್ದವಾದರೂ, ಚಾಲಕರ ಸಮಯಪ್ರಜ್ಞೆ ಮತ್ತು ಚಾಕಚಕ್ಯತೆಯಿಂದ ಸುರಕ್ಷಿತ ಸ್ಥಳಕ್ಕೆ ತೆರಳಿ ಬಚಾವಾಗಿವೆ. ಅತ್ತ ನೀರಿಗೆ ಬಿದ್ದ ದ್ವಿಚಕ್ರ ವಾಹನದಲ್ಲಿದ್ದ 11 ಜನರು ಸಾವನ್ನಪ್ಪಿದ್ದರೆ, ಮೂವರು ಈಜಿ ದಡ ತಲುಪಿದ್ದಾರೆ. 9 ಜನರನ್ನು ರಕ್ಷಿಸಲಾಗಿದೆ.ತನಿಖೆಗೆ ಆದೇಶ:
ಸೇತುವೆ ಕುಸಿತದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ರಸ್ತೆ ಮತ್ತು ಕಟ್ಟಡಗಳ ಇಲಾಖೆಗೆ ಸಿಎಂ ಭೂಪೇಂದ್ರ ಪಟೇಲ್ ಆದೇಶಿಸಿದ್ದಾರೆ. ಜತೆಗೆ, ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಕೇಂದ್ರದಿಂದ 2 ಲಕ್ಷ ರು. ಮತ್ತು ರಾಜ್ಯ ಸರ್ಕಾರದಿಂದ 4 ಲಕ್ಷ ರು. ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳಿಗೆ 50,000 ಪರಿಹಾರ ನೀಡಲಾಗುವುದು.==
ಶಿಥಿಲವಾಗಿದ್ದರೂ ವಾಹನಸಂಚಾರಕ್ಕೆ ಮುಕ್ತವಾಗಿತ್ತು
ಗಂಭೀರಾ ಸೇತುವೆಗೆ 40 ವರ್ಷವಾಗಿದೆ. ಇದಕ್ಕೆ ಪರ್ಯಾಯವಾಗಿ ಹೊಸ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಒಪ್ಪಿಗೆಯನ್ನು ನೀಡಿದ್ದರೂ, ಈಗಿರುವ ಸೇತುವೆಯನ್ನೇ ರಿಪೇರಿ ಮಾಡಿ ಬಳಸಲಾಗುತ್ತಿತ್ತು. ಸೇತುವೆ ಮೇಲೆ ವಾಹನ ಚಲಿಸುವಾಗ ಅದು ಭೀಕರವಾಗಿ ಅಲುಗಾಡುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.==
ನಡುನೀರಲ್ಲಿ ಮಕ್ಕಳಿಗಾಗಿಕಣ್ಣೀರಿಟ್ಟು ಗೋಗರೆದ ತಾಯಿ
ಸೇತುವೆ ಕುಸಿದಾಗ ನದಿಗೆ ಬಿದ್ದ ಕಾರೊಂದರಲ್ಲಿದ್ದ ಮಹಿಳೆಯೊಬ್ಬರು ಕಿಟಕಿಯ ಗಾಜು ಒಡೆದು ಹೊರಬಂದು, ತಾವು ನಡುನೀರಿನಲ್ಲಿರುವುದನ್ನೂ ಲೆಕ್ಕಿಸದೆ, ಲಾಕ್ ಆಗಿದ್ದ ಕಾರ್‌ನ ಒಳಗಿದ್ದ ಮಕ್ಕಳಿಗಾಗಿ ಕಣ್ಣೀರಿಡುತ್ತಾ, ಅವರನ್ನು ರಕ್ಷಿಸುವಂತೆ ಗೋಗರೆಯುತ್ತಿರುವ ಮನಕಲಕುವ ದೃಶ್ಯವೊಂದು ಹರಿದಾಡುತ್ತಿದೆ. ಕಾರಿನಲ್ಲಿ ಮಹಿಳೆಯ ಪತಿ, ಪುತ್ರ, ಪುತ್ರಿ ಮತ್ತು ಅಳಿಯ ಸಿಲುಕಿದ್ದರು.==
ಮೋರ್ಬಿ ದುರಂತ ಮೆಲುಕು2022ರ ಅ.10ರಂದು ನಡೆದ ಭೀಕರ ಮೋರ್ಬಿ ದುರಂತವು 135 ಜನರನ್ನು ಬಲಿಪಡೆದಿತ್ತು. ಘಟನೆಯಲ್ಲಿ 56 ಮಂದಿ ಗಾಯಗೊಂಡಿದ್ದರು. ಮಚ್ಚು ನದಿಗೆ ಅಡ್ಡಲಾಗಿರುವ 230 ಮಿ. ಉದ್ದ ಮತ್ತು 1.25 ಮೀ. ಅಗಲವಿರುವ ಈ ತೂಗುಸೇತುವೆಯನ್ನು 1879ರಲ್ಲಿ ನಿರ್ಮಿಸಲಾಗಿತ್ತು. ಇದರ ವಯರ್‌ಗಳು ತುಕ್ಕು ಹಿಡಿದಿದ್ದಿ, ಕುಸಿತಕ್ಕೆ ಕಳಪೆ ನಿರ್ವಹಣೆ ಕಾರಣ ಎನ್ನಲಾಗಿತ್ತು.