ಹೈದರಾಬಾದ್: ಪಕ್ಕದ ಮನೆಗೆ ಕ್ರಿಕೆಟ್ ಬ್ಯಾಟ್ ಕಳ್ಳತನಕ್ಕೆ ಹೋದ 14 ವರ್ಷದ ಹುಡುಗನೊಬ್ಬ, ಕಳ್ಳತನಕ್ಕೆ ಅಡ್ಡಿಪಡಿಸಿದ 10 ವರ್ಷದ ಬಾಲಕಿಯನ್ನು 21 ಬಾರಿ ಚಾಕುವಿನಿಂದ ಇರಿದು ಹತ್ಯೆಗೈದ ಆಘಾತಕಾರಿ ಘಟನೆ ಹೈದರಾಬಾದ್‌ನ ಕುಕಟಪಲ್ಲಿಯಲ್ಲಿ ನಡೆದಿದೆ. ವಿಚಾರಣೆ ವೇಳೆ ಅಪಘಾತದ ರೀತಿ ಆಕಸ್ಮಿವಾಗಿ ಘಟನೆ ನಡೆದು ಹೋಯಿತು ಎಂದು ಬಾಲಕ ಹೇಳಿಕೊಂಡಿದ್ದಾನೆ. ಘಟನೆ ಸಂಬಂಧ ಆರೋಪಿ ಬಾಲಕ ಹಾಗೂ ಆತನ ಪೋಷಕರನ್ನು ವಶಕ್ಕೆ ಪಡೆದು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಲಾಗಿದೆ.
ಬಾಲಕ ಎಂಆರ್‌ಎಫ್ ಕಂಪನಿಯ ಕ್ರಿಕೆಟ್ ಬ್ಯಾಟ್ ಕಳ್ಳತನಕ್ಕೆಂದು ಪಕ್ಕದ ಮನೆಗೆ ಹೋಗಿದ್ದ. ಈ ವೇಳೆ ಬ್ಯಾಟ್ ಎತ್ತಿಕೊಂಡು ಹೋಗಲು ಯತ್ನಿಸಿದಾಗ ಮನೆಯಲ್ಲಿದ್ದ ಸಂತ್ರಸ್ತ ಬಾಲಿ ಸಹಸ್ರಾ ಅಡ್ಡಿಪಡಿಸಿದ್ದಾಳೆ. ಈ ವೇಳೆ ಬಾಲಕ ತನ್ನ ಬಳಿ ಇದ್ದ ಸಣ್ಣ ಚೂರಿಯಿಂದ ಇರಿದು ಪರಾರಿಯಾಗಿದ್ಧಾನೆ. ಘಟನೆ ನಡೆದಾಗ ಬಾಲಕಿಯ ತಂದೆ, ತಾಯಿ ಕೆಲಸಕ್ಕೆ ಹೋಗಿದ್ದರೆ, ಅಣ್ಣ ಶಾಲೆಗೆ ಹೋಗಿದ್ದ. ಹೀಗಾಗಿ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಬಾಲಕಿ ಮನೆಯಲ್ಲೇ ಸಾವನ್ನಪ್ಪಿದ್ದಾಳೆ. ಮರಣೋತ್ತರ ಪರೀಕ್ಷೆ ವೇಳೆ ಬಾಲಕಿಯ ಕುತ್ತಿಗೆಗೆ 14 ಬಾರಿ ಹಾಗೂ ಹೊಟ್ಟೆಗೆ 7 ಬಾರಿ ಇರಿದಿರುವುದು ದೃಢಪಟ್ಟಿದೆ.
ಭಾರೀ ಪ್ಲ್ಯಾನ್:
ಆರೋಪಿ ಬಾಲಕ ಮೊಬೈಲ್‌ನಲ್ಲಿ ಅಪರಾಧ ಸಂಬಂಧಿ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಿದ್ದ ಎಂದು ಕಂಡುಬಂದಿದೆ. ಇದಕ್ಕೆ ಪೂರಕ ಎಂಬಂತೆ ಆತನ ಮನೆಯಲ್ಲಿ ದಾಳಿ ಹೇಗೆ ನಡೆಸಬೇಕು ಎಂದು ಯೋಜನೆ ರೂಪದಲ್ಲಿ ಬರೆದಿಟ್ಟಿದ್ದ ಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ‘ಮೊದಲು ಮನೆಗೆ ಹೋಗು. ಗ್ಯಾಸ್ ಪೈಪ್ ಕತ್ತರಿಸಿ ಬೆಂಕಿ ಹಚ್ಚು. ಹಣ ತೆಗೆದುಕೊಂಡು ಹೊರಗೆ ಬಂದು ಮನೆಗೆ ಕೀಲಿ ಹಾಕು’ ಎಂದು ಬರೆದಿದ್ದಾನೆ. ಘಟನೆ ದಾಳಿ ನಡೆಸಿದ ಅಂಥ ಯಾವುದೇ ಕೃತ್ಯವನ್ನು ಆತ ಎಸಗಿಲ್ಲ. ಮನೆಯಿಂದ ಬ್ಯಾಟ್ ಸೇರಿದಂತೆ ಯಾವುದೇ ವಸ್ತುಗಳನ್ನು ಕಳ್ಳತನ ಕೂಡಾ ಮಾಡಿಲ್ಲ. ಹತ್ಯೆ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.