ದಾಳಿಗೆ ಗಡಿಯತ್ತ 15000 ತಾಲಿಬಾನ್‌ ಉಗ್ರ ಹೆಜ್ಜೆ : ತಾನು ಸಾಕಿ ಬೆಳೆಸಿದ ಹಾವೇ ಇದೀಗ ಪಾಕಿಸ್ತಾನಕ್ಕೆ ದುಸ್ವಪ್ನ

KannadaprabhaNewsNetwork | Updated : Dec 27 2024, 04:56 AM IST

ಸಾರಾಂಶ

ತಾನು ಸಾಕಿ ಬೆಳೆಸಿದ ಹಾವೇ ಇದೀಗ ಪಾಕಿಸ್ತಾನಕ್ಕೆ ದುಸ್ವಪ್ನವಾಗಿ ಕಾಡಲು ಶುರುವಾಗಿದೆ. ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ನಿರ್ಮೂಲನೆಗೆ ಅಫ್ಘಾನಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ಗುರಿಯಾಗಿರಿಸಿ ಪಾಕ್‌ ಸೇನೆ ನಡೆಸಿದ ವೈಮಾನಿಕ ದಾಳಿ  

ನವದೆಹಲಿ: ತಾನು ಸಾಕಿ ಬೆಳೆಸಿದ ಹಾವೇ ಇದೀಗ ಪಾಕಿಸ್ತಾನಕ್ಕೆ ದುಸ್ವಪ್ನವಾಗಿ ಕಾಡಲು ಶುರುವಾಗಿದೆ. ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ನಿರ್ಮೂಲನೆಗೆ ಅಫ್ಘಾನಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ಗುರಿಯಾಗಿರಿಸಿ ಪಾಕ್‌ ಸೇನೆ ನಡೆಸಿದ ವೈಮಾನಿಕ ದಾಳಿ ತಾಲಿಬಾನ್ ಆಕ್ರೋಶಕ್ಕೆ ಕಾರಣ‍ವಾಗಿದೆ. ಈ ದಾಳಿಗೆ ಪ್ರತೀಕಾರ ತೀರಿಸಲು ಮುಂದಾಗಿರುವ ತಾಲಿಬಾನ್‌, ತನ್ನ 15 ಸಾವಿರ ಹೋರಾಟಗಾರರನ್ನು ಪಾಕ್‌ ಗಡಿಯತ್ತ ಕಳುಹಿಸಿದೆ ಎನ್ನಲಾಗಿದೆ.

15 ಸಾವಿರ ತಾಲಿಬಾನ್‌ ಹೋರಾಟಗಾರರು ಕಾಬೂಲ್‌, ಕಂದಾಹಾರ್‌, ಹೇರತ್‌ನಿಂದ ಇದೀಗ ಮಿರ್‌ ಅಲಿ ಗಡಿಯತ್ತ ಹೊರಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಂದು ವೇಳೆ ಇದು ಖಚಿತವಾದಲ್ಲಿ, ಮುಂದಿನ ದಿನಗಳಲ್ಲಿ ಪಾಕ್‌ ಮತ್ತು ಆಫ್ಘಾನಿಸ್ತಾನದಲ್ಲಿರುವ ತಾಲಿಬಾನ್‌ ಉಗ್ರರ ನಡುವೆ ಘೋರ ಕದನ ನಡೆಯುವುದು ಖಚಿತವಾಗಿದೆ. ಜೊತೆಗೆ ಈಗಾಗಲೇ ಅರ್ಥಿಕ ಸಂಕಷ್ಟದಲ್ಲಿ ಇರುವ ಪಾಕಿಸ್ತಾನ ಮತ್ತಷ್ಟು ಸಂಕಷ್ಟದ ಮಡುವಿಗೆ ಬೀಳುವುದು ಖಚಿತವಾಗಲಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ತೆಹ್ರೀಕ್‌ ಎ ಪಾಕಿಸ್ತಾನ್‌ ತಾಲಿಬಾನ್‌ ಸಂಘಟನೆ ಪಾಕ್‌ ಗಡಿ ಪ್ರದೇಶದ ಮೇಲೆ 1000ಕ್ಕೂ ಹೆಚ್ಚು ದಾಳಿ ನಡೆಸಿ 500ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಪಾಕ್‌ ಸೇನೆ ಆಫ್ಘಾನಿಸ್ತಾನದ 7 ಹಳ್ಳಿಗಳ ವ್ಯಾಪ್ತಿಯ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಮಹಿಳೆಯರು, ಮಕ್ಕಳು, ಉಗ್ರರು ಸೇರಿ 46 ಜನರು ಸಾವನ್ನಪ್ಪಿದ್ದರು.

ಅದರ ಬೆನ್ನಲ್ಲೇ ಇದೀಗ ಸಾವಿರಾರು ಉಗ್ರರು ಪಾಕ್‌ ಗಡಿಯತ್ತ ಹೊರಟಿರುವುದು ಪಾಕಿಸ್ತಾನದ ಪಾಲಿಗೆ ಭಾರೀ ಸಮಸ್ಯೆ ತಂದೊಡ್ಡಿದೆ ಎಂದು ವರದಿಗಳು ತಿಳಿಸಿವೆ.

ಈ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಉಗ್ರರು ಅಧಿಕಾರಕ್ಕೇರಿದಾಗ ಅದನ್ನು ''ಆಶೀರ್ವಾದ'' ಎಂದು ಅಂದಿನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿಕೆ ನೀಡಿದ್ದರು. ಇದೀಗ ಅದೇ ತಾಲಿಬಾನ್‌ ಪಾಕಿಸ್ತಾನದ ಪಾಲಿಗೆ ಶಾಪವಾಗಿ ಪರಿಣಮಿಸುತ್ತಿದೆ.

Share this article