ನವದೆಹಲಿ : ಆಡಳಿತಾರೂಡ ಎನ್‌ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ನಡುವೆ ಭಾರೀ ವಾಕ್ಸಮರಕ್ಕೆ ವೇದಿಕೆಯಾಗುವ ಎಲ್ಲಾ ಸಾಧ್ಯತೆಗಳಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ನ.25ರ ಸೋಮವಾರ ಚಾಲನೆ ಸಿಗಲಿದೆ.
ಅಧಿವೇಶನದಲ್ಲಿ ಒಟ್ಟು 16 ಮಸೂದೆ ಮಂಡಿಸಲು ಸರ್ಕಾರ ಸಿದ್ಧತೆ ನಡೆದಿದೆ. ಇದರಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ಖಚಿತವಾಗಿದೆ. ಆದರೆ ಸರ್ಕಾರದ ಇನ್ನೊಂದು ಪ್ರಮುಖ ಯೋಜನೆಯಾದ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ ಕುರಿತು ಸರ್ಕಾರ ಪ್ರಸ್ತಾಪ ಮಾಡದೇ ಇದ್ದರೂ ಅದನ್ನು ಕೂಡಾ ಯಾವುದೇ ಹಂತದಲ್ಲಿ ಮಂಡನೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಸುಗಮ ಕಲಾಪದ ನಿಟ್ಟಿನಲ್ಲಿ ವಿಪಕ್ಷಗಳ ಸಹಕಾರ ಕೋರಲು ಸರ್ಕಾರ ಭಾನುವಾರ ಸರ್ವಪಕ್ಷಗಳ ಸಭೆ ಆಯೋಜಿಸಿತ್ತು. ಇದರಲ್ಲೇ ವಿಪಕ್ಷಗಳು, ಅಧಿವೇಶನದ ಅವಧಿಯಲ್ಲಿ ಅದಾನಿ ಹಗರಣದ ಕುರಿತು ತನಿಖೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸುವ ಮೂಲಕ ಮುಂದಿನ ಅಧಿವೇಶನ ಎತ್ತ ಸಾಗಬಹುದು ಎಂಬ ಸುಳಿವು ನೀಡಿವೆ.ಇದರ ಜೊತೆಗೆ ಇತ್ತೀಚಿನ ಮಣಿಪುರ ಗಲಭೆ ವಿಷಯ, ಆಹಾರ ಧಾನ್ಯಗಳ ಬೆಲೆ ಏರಿಕೆ ಮತ್ತಿತರೆ ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಹೀಗಾಗಿ ಮೊದಲ ದಿನದಿಂದಲೇ ಕಲಾಪಗಳು ಕಾವೇರುವ ನಿರೀಕ್ಷೆ ಇದೆ.
ಅದಾನಿ ಗದ್ದಲ:
ಅದಾನಿ ಅವರು ತಮ್ಮ ಕಂಪನಿ ಉತ್ಪಾದಿಸಿದ ಸೌರ ವಿದ್ಯುತ್ ಮಾರಾಟಕ್ಕೆ ಕೆಲವು ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ 2100 ಕೋಟಿ ರು. ಲಂಚ ನೀಡಿದರು ಎಂದು ಅಮೆರಿಕದಲ್ಲಿ ದೋಷಾರೋಪ ಹೊರಿಸಲಾಗಿದೆ. ಹೀಗಾಗಿ ಅದಾನಿಗೆ ಪ್ರಧಾನಿ ನರೇಂದ್ರ ಮೋದಿ ಶ್ರೀರಕ್ಷೆ ಇದೆ ಎಂದು ಆರೋಪಿಸಿ ವಿಪಕ್ಷಗಳು ಗದ್ದಲ ಎಬ್ಬಿಸುವ ಸಂಭವವಿದೆ.
ಇದರ ಜೊತೆಗೆ ಇತ್ತೀಚೆಗೆ ಮಣಿಪುರ ಮತ್ತೆ ಹಿಂಸಾಸಾರ ಭುಗಿಲೆದ್ದಿರುವ, ಕಳೆದ ಒಂದು ವರ್ಷದಲ್ಲಿ ಪ್ರಧಾನಿ ಮೋದಿ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡದೇ ಇರುವ, ಹಿಂಸಾಚಾರ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಲು ಸಜ್ಜಾಗಿವೆ.ಇನ್ನು ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಈ ಅಧಿವೇಶನದಲ್ಲಿ ಸರ್ಕಾರ ಯತ್ನಿಸಲಿದೆ ಎಂದು ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ವಿಪಕ್ಷಗಳ ವಿರೋಧ ಇರುವ ಕಾರಣ ಸದನ ರಣರಂಗವಾದರೂ ಅಚ್ಚರಿಯಿಲ್ಲ ಎನ್ನಲಾಗಿದೆ.
ನಾಳೆ ವಿಶೇಷ ಜಂಟಿ ಕಲಾಪ
ನ.26ರಂದು ದೇಶವು ಸಂವಿಧಾನವನ್ನು ಸ್ವೀಕರಿಸಿ 75 ವರ್ಷಗಳಾಗಲಿದ್ದು, ಅಂದು ಸಂಸತ್ತಿನ ಜಂಟಿ ಅಧಿವೇಶನ ನಡೆಯಲಿದೆ. ಬಳಿಕ ನಿಯಮಿತ ಕಲಾಪಗಳು ನಡೆಯಲಿದ್ದು, ಡಿ.20ರಂದು ಅಧಿವೇಶನ ಮುಕ್ತಾಯಗೊಳ್ಳಲಿದೆ.
ಮಂಡನೆ/ಅಂಗೀಕಾರಆಗಲಿರುವ ಮಸೂದೆ
1. ವಕ್ಫ್ ತಿದ್ದುಪಡಿ ಮಸೂದೆ
2. ಮುಸಲ್ಮಾನ್ ವಕ್ಫ್ ರದ್ದತಿ ಮಸೂದೆ
3. ಕರಾವಳಿ ನೌಕಾಯಾನ ಮಸೂದೆ
4. ಒಂದು ದೇಶ ಒಂದು ಚುನಾವಣೆ
5. ಭಾರತೀಯ ವಾಯುಯಾನ ಮಸೂದೆ
6. ಮರ್ಚಂಟ್ ಶಿಪ್ಪಿಂಗ್ ಮಸೂದೆ
7. ಸಹಕಾರ ವಿವಿ ಸ್ಥಾಪನೆ ಮಸೂದೆ
8. ಪಂಜಾಬ್ ನ್ಯಾಯಾಲಯಗಳ ಮಸೂದೆ
9. ರೈಲ್ವೆ ತಿದ್ದುಪಡಿ ಮಸೂದೆ
10. ಬ್ಯಾಂಕಿಂಗ್ ತಿದ್ದುಪಡಿ ಮಸೂದೆ