ಕೊಚ್ಚಿ: ಮೇ 26ರಂದು ವಾಯುದಾಳಿಗೆ ತುತ್ತಾಗಿದ್ದ ನೌಕೆಯೊಂದರ ಇಂಧನ ಟ್ಯಾಂಕ್‌ನಲ್ಲಿ ಸ್ಫೋಟಿಸದೆ ಇದ್ದ ಕ್ಷಿಪಣಿಯ ಸಿಡಿತಲೆಯನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ಹೊರತೆಗೆದಿದೆ.
ಯುಎಇಯಿಂದ ತೈಲ ಹೊತ್ತು ಕೇರಳದ ಕೊಚ್ಚಿ ಕಡೆ ಹೊರಟಿದ್ದ ಮಾರ್ಶಲ್ ದ್ವೀಪದ ಧ್ವಜವಿದ್ದ ಎಂಪಿ ಒಲಿಂಪಿಕ್ ಲೈಫ್ ಹಡಗಿನ ಮೇಲೆ ಒಮಾನ್ ಕರಾವಳಿಯಲ್ಲಿ ದಾಳಿಯಾಗಿತ್ತು. ಕ್ಷಿಪಣಿಯೊಂದು ಹಲವು ವಿಭಾಗಗಳನ್ನು ಭೇದಿಸಿ ಇಂಧನ ಸಂಗ್ರಹಿಸಿಟ್ಟಿದ್ದ ವಿಭಾಗವನ್ನು ಹೊಕ್ಕಿತ್ತು. ಇದರ ಹೊರತಾಗಿಯೂ ನೌಕೆ 2 ಸಾವಿರ ಕಿ.ಮೀ. ಪ್ರಯಾಣಿಸಿ ಕೊಚ್ಚಿಯನ್ನು ತಲುಪಿತ್ತು.
ಇಲ್ಲಿ ವಿಶೇಷ ಸ್ಫೋಟಕ ವಿಲೇವಾರಿ ತಂಡದ ಸಿಬ್ಬಂದಿ ಸಿಡಿತಲೆಯನ್ನು ಜತನದಿಂದ ಹೊರತೆಗೆದು ನಿಷ್ಕ್ರಿಯಗೊಳಿಸಿದ್ದಾರೆ. ಈ ಬಗ್ಗೆ ರಕ್ಷಣಾ ಸಚಿವಾಲಯ ಜೂ.11ರಂದು ಮಾಹಿತಿ ನೀಡಿದ್ದು, ‘ವಿಶೇಷ ಕಾಳಜಿಯಿಂದ ಯೋಜಿಸಿ ಕೈಗೊಳ್ಳಲಾದ ಅಪಾಯಕಾರಿ ಕಾರ್ಯಾಚರಣೆ’ ಎಂದು ಇದನ್ನು ಬಣ್ಣಿಸಿದೆ.