ರೆಮಲ್ ಚಂಡಮಾರುತದಿಂದ ಹಲವು ರಾಜ್ಯಗಳಲ್ಲಿ ಭಾರೀ ಮಳೆಐಜ್ವಾಲ್, ಗುವಾಹಟಿ: ರೆಮಲ್ ಚಂಡಮಾರುತ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರೀ ಅನಾಹುತ ಸೃಷ್ಟಿಸಿದ ಮಾದರಿಯಲ್ಲೇ ದೇಶದ ಈಶಾನ್ಯ ರಾಜ್ಯಗಳಾದ ಮಿಜೋರಂ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯದಲ್ಲೂ ಭಾರೀ ಸಾವು ನೋವಿಗೆ ಕಾರಣವಾಗಿದೆ. ಮಳೆ ಸಂಬಂಧಿ ಘಟನೆಗಳಿಗೆ 4 ರಾಜ್ಯದಲ್ಲಿ ಒಂದೇ ದಿನ 31 ಜನ ಸಾವನ್ನಪ್ಪಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ. ಜೊತೆಗೆ ಭಾರೀ ಪ್ರಮಾಣದಲ್ಲಿ ಅಸ್ತಿಪಾಸ್ತಿಗೂ ಹಾನಿಯಾಗಿದೆ.ಮಿಜೋರಂ ರಾಜಧಾನಿ ಐಜ್ವಾಲ್‌ನ ಹೊರವಲಯವಾದ ಮೆಲ್ತುಮ್ ಮತ್ತು ಹ್ಲಿಮೆನ್ ಪ್ರದೇಶದ ನಡುವಿನ ಕಲ್ಲು ಕ್ವಾರಿಯಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆ ವೇಳೆಗೆ ಕುಸಿತ ಸಂಭವಿಸಿದೆ. ಈ ವೇಳೆ 4 ವರ್ಷದ ಬಾಲಕ, 6 ವರ್ಷದ ಬಾಲಕಿ ಸೇರಿ 13 ಜನರು ಸಾವನ್ನಪ್ಪಿದ್ದಾರೆ. ಇಬ್ಬರನ್ನು ಘಟನಾ ಸ್ಥಳದಿಂದ ರಕ್ಷಿಸಲಾಗಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.ಇದಲ್ಲದೆ ರಾಜ್ಯದ ಇತರೆ ಹಲವು ಭಾಗಗಳಲ್ಲಿ ಭೂಕುಸಿತ, ರಸ್ತೆ ಕುಸಿತ, ಕಟ್ಟಡ ಕುಸಿತದ ಘಟನೆಗಳಿಗೆ 9 ಜನರು ಬಲಿಯಾಗಿದ್ದಾರೆ.ಇನ್ನೊಂದೆಡೆ ನಾಗಾಲ್ಯಾಂಡ್‌ನಲ್ಲಿ ಮಳೆ ಸಂಬಂಧಿ ಘಟನೆಗಳಿಗೆ 4 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿದೆ. ಅದೇ ರೀತಿ ಅಸ್ಸಾಂನಲ್ಲಿ 3 ಮಂದಿ ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ. ಮೇಘಾಲಯಲ್ಲಿ ಮಳೆ ಸಂಬಂಧಿ ಅನಾಹುತಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ.