80ನೇ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ, ಶನಿವಾರ ಪ್ರಧಾನಿ ನರೇಂದ್ರ ಮೋದಿ ಸತತ 13ನೇ ಬಾರಿಗೆ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ನವದೆಹಲಿ: 80ನೇ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ, ಶನಿವಾರ ಪ್ರಧಾನಿ ನರೇಂದ್ರ ಮೋದಿ ಸತತ 13ನೇ ಬಾರಿಗೆ ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ಬೆಳಗ್ಗೆ 7.30ಕ್ಕೆ ಧ್ವಜಾರೋಹಣ ಮಾಡಿ, ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇತ್ತೀಚೆಗೆ ಜೆನ್ ಝಿ ಪ್ರತಿಭಟನೆ ದೇಶಾದ್ಯಂತ ಸಂಚಲನ ಮೂಡಿಸಿದ ಕಾರಣ, ಪ್ರಧಾನಿ ತಮ್ಮ ಭಾಷಣದಲ್ಲಿ ಯುವ ಸಮುದಾಯದ ಬೇಡಿಕೆಗಳು, ಉದ್ಯೋಗ ಹಾಗೂ ಅವರ ಕುಂದುಕೊರತೆಗಳ ಕುರಿತು ಹೇಗೆ ಸ್ಪಂದಿಸಲಿದ್ದಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.
ಈ ಹಿಂದಿನ ಸ್ವಾತಂತ್ರ್ಯ ದಿನದ ವೇಳೆ ಮೋದಿ, ವಿಕಸಿತ ಭಾರತ, ಆಪರೇಷನ್ ಸಿಂದೂರ, ಸ್ವಚ್ಛ ಭಾರತ ಸೇರಿ ಹಲವು ವಿಷಯಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಈ ಸಲ ಯುವ ಜನತೆಯೇ ಅವರ ಭಾಷಣದಲ್ಲಿ ಪ್ರಾಧಾನ್ಯತೆ ಪಡೆಯಲಿದೆ ಎನ್ನಲಾಗದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಸಚಿವ ಸಂಜಯ್ ಸೇಠ್ ಹಾಗೂ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಕೆಂಪುಕೋಟೆಯಲ್ಲಿ ಪ್ರಧಾನಿಯನ್ನು ಬರಮಾಡಿಕೊಳ್ಳಲಿದ್ದಾರೆ. ನಂತರ ಸೇನೆ, ನೌಕಾದಳ ಹಾಗೂ ವಾಯುಪಡೆಯ ಮುಖ್ಯಸ್ಥರು ಸ್ವಾಗತ ಕೋರಲಿದ್ದಾರೆ. ಮೋದಿ ಬೆಳಿಗ್ಗೆ ಸುಮಾರು 7:30ಕ್ಕೆ ಧ್ವಜಾರೋಹರಣ ನೆರವೇರಿಸಲಿದ್ದಾರೆ.ಸೇನೆ, ವಾಯುಪಡೆ ಗೌರವ:
ರಾಷ್ಟ್ರಧ್ವಜಾರೋಹಣದ ಸಂದರ್ಭದಲ್ಲಿ ಪ್ರಧಾನಿಗೆ ಕ್ಯಾಪ್ಟನ್ ಸೋನಿಯಾ ಸಿಂಗ್ ಚೌಹಾಣ್ ನೆರವಾಗಲಿದ್ದಾರೆ. ಧ್ವಜಾರೋಹಣದ ಸಮಯದಲ್ಲೇ, ಭಾರತೀಯ ಸೇನೆಯ 1721 ಫೀಲ್ಡ್ ಬ್ಯಾಟರಿ ಘಟಕವು ದೇಸಿ ನಿರ್ಮಿತ 105-ಎಂಎಂ ಲೈಟ್ ಫೀಲ್ಡ್ ಗನ್‌ಗಳ ಮೂಲಕ 21 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಿದೆ. ಇದೇ ವೇಳೆ ವಾಯುಪಡೆಯ 2 ಎಂಐ-17 ಹೆಲಿಕಾಪ್ಟರ್‌ಗಳು ಪುಷ್ಪವೃಷ್ಟಿ ಮಾಡಲಿವೆ. ಇವುಗಳಲ್ಲಿ ಒಂದು ಹೆಲಿಕಾಪ್ಟರ್ ರಾಷ್ಟ್ರಧ್ವಜವನ್ನು ಹಾಗೂ ಇನ್ನೊಂದು ‘ವಂದೇ ಮಾತರಂ’ ಸಂದೇಶವನ್ನು ಬಿಂಬಿಸುವ ಧ್ವಜವನ್ನು ಹೊತ್ತು ಸಾಗಲಿವೆ.
ಪ್ರಥಮ ಬಾರಿಗೆ ‘ವಂದೇ’ ನಾದ:
ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಪೂರ್ಣಗೊಂಡಿರುವ ಸವಿನೆನಪಿಗಾಗಿ, ಕೆಂಪುಕೋಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಗೀತೆಯನ್ನು ಹಾಡಲಾಗುತ್ತಿದೆ. ಮೋದಿ ಆಗಮಿಸಿದ ತಕ್ಷಣ ಸೇನಾ ಬ್ಯಾಂಡ್‌ನಿಂದ ಗೀತೆಯ ನಾದ ಮೊಳಗಲಿದೆ. ಪ್ರಧಾನಿಯವರ ಭಾಷಣ ಮುಗಿದ ನಂತರ ಎನ್‌ಸಿಸಿ ಕೆಡೆಟ್‌ಗಳು ಮತ್ತು ‘ಮೈ ಭಾರತ್’ ಸ್ವಯಂಸೇವಕರು ರಾಷ್ಟ್ರೀಯ ಗೀತೆಯನ್ನು ವೃಂದಗಾಯನ ಮಾಡಲಿದ್ದಾರೆ.
ಯುವಶಕ್ತಿಯ ಆಕರ್ಷಣೆ:
ಜ್ಞಾನಪಥದಲ್ಲಿ ಸುಮಾರು 2,500 ಎನ್‌ಸಿಸಿ ಕೆಡೆಟ್‌ಗಳು ಮತ್ತು ಯುವ ಸ್ವಯಂಸೇವಕರು ‘ವಂದೇ ಮಾತರಂ’ ಆಕಾರದಲ್ಲಿ ಕುಳಿತು ವಿಶೇಷ ಕಲಾಕೃತಿ ಮೂಡಿಸಲಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಯಾಡ್ ವಿಜೇತ ಯುವ ಸಾಧಕರಿಗೆ ಕೆಂಪುಕೋಟೆಯ ಪ್ರಮುಖ ವೇದಿಕೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
5,000 ಸಾಧಕರಿಗೆ ಆಹ್ವಾನ:
ಕಾರ್ಯಕ್ರಮಕ್ಕೆ ನವೋದ್ಯಮಿಗಳು, ನೈರ್ಮಲ್ಯ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ರೈತರು, ರಕ್ಷಣೆ ಮತ್ತು ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ವಿವಿಧ ಕ್ಷೇತ್ರದ 5,000 ನೈಜ ಸಾಧಕರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ವಿಐಪಿ ಸಂಸ್ಕೃತಿಯನ್ನು ಬದಿಗೊತ್ತಿ, ಜಲ ಸಂರಕ್ಷಣೆಯ ಸಂದೇಶ ಸಾರಲು ಆಸನ ವ್ಯವಸ್ಥೆಯ ವಿಭಾಗಗಳಿಗೆ ಚಿಲ್ಕಾ, ಲೋಕ್ಟಾಕ್, ಪಂಗಾಂಗ್ ತ್ಸೋ, ವುಲಾರ್ ಮತ್ತು ಹುಸೇನ್ ಸಾಗರದಂತಹ ದೇಶದ ಪ್ರಮುಖ ಸರೋವರಗಳ ಹೆಸರುಗಳನ್ನು ಇಡಲಾಗಿದೆ.
- ಜೆನ್‌ಝೀ ಪ್ರತಿಭಟನೆ ಸಂಚಲನ ಹಿನ್ನೆಲೆ । ಜೆನ್‌ಝೀಗೆ ಭಾಷಣದಲ್ಲಿ ಪ್ರಾಮುಖ್ಯ?: ಕುತೂಹಲ
-ರೈತರು, ನೈರ್ಮಲ್ಯ ಕಾರ್ಮಿಕರು ಸೇರಿ 5000 ಜನಕ್ಕೆ ಆಹ್ವಾನ, ವಿಐಪಿ ಸಂಸ್ಕೃತಿಗಿಲ್ಲ ಮಣೆ
- ವಂದೇ ಮಾತರಂಗೆ 150 ವರ್ಷ ಹಿನ್ನೆಲೆ । ಮೊದಲ ಬಾರಿ ಕೆಂಪುಕೋಟೆ ಮೇಲೆ ವಂದೇ ಗಾಯನ