‘ನಾನೂ ಸಿಎಂ’ ರೇಸಿಗೆ ಇನ್ನೂ 2 ಕಾಂಗ್ರೆಸ್ಸಿಗರು!

KannadaprabhaNewsNetwork | Published : Sep 10, 2024 1:34 AM

ಸಾರಾಂಶ

ಕಾಂಗ್ರೆಸ್‌ ನ ಹಿರಿಯ ಮುಖಂಡ ಆರ್‌.ವಿ.ದೇಶಪಾಂಡೆ, ಸಚಿವರಾದ ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ ಬಳಿಕ ಪಕ್ಷದ ಮತ್ತಿಬ್ಬರು ಮುಖಂಡರಿಂದ ಸಿಎಂ ಕೂಗು ಕೇಳಿ ಬಂದಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ/ಯಾದಗಿರಿಕಾಂಗ್ರೆಸ್‌ ನ ಹಿರಿಯ ಮುಖಂಡ ಆರ್‌.ವಿ.ದೇಶಪಾಂಡೆ, ಸಚಿವರಾದ ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ ಬಳಿಕ ಪಕ್ಷದ ಮತ್ತಿಬ್ಬರು ಮುಖಂಡರಿಂದ ಸಿಎಂ ಕೂಗು ಕೇಳಿ ಬಂದಿದೆ. ‘ನಾನು ಕಾಂಗ್ರೆಸ್‌ನಲ್ಲಿಯೇ ಹಿರಿಯ ಲಿಂಗಾಯತ ಶಾಸಕ. ಕಲ್ಯಾಣ ಕರ್ನಾಟಕದಲ್ಲಿಯೂ ನಾನೇ ಹಿರಿಯ ಶಾಸಕ. ಹೀಗಾಗಿ, ನಾನೇಕೆ ಮುಖ್ಯಮಂತ್ರಿ ಆಗಬಾರದು? ನಾನೂ ಸಹ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೇ’ ಎಂದು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ. ಇದೇ ವೇಳೆ, ಯಾದಗಿರಿಯಲ್ಲಿ ಮಾತನಾಡಿದ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ‘ನನಗೂ ಸಿಎಂ ಆಗುವ ಆಸೆಯಿದೆ. ನಾಳೆ ಹೈಕಮಾಂಡ್‌ ಸಿಎಂ ಆಗು ಅಂದರೆ ನನಗೂ ಸಿಎಂ ಆಗೋ ಆಸೆ ಇರೋದಿಲ್ವೆ?’ ಎಂದಿದ್ದಾರೆ.ಯಾದಗಿರಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ದರ್ಶನಾಪುರ, ಸಿಎಂ ಆಗೋ ಆಸೆ ಯಾರಿಗಿರಲ್ಲ ಹೇಳಿ? ನಾಳೆ ಹೈಕಮಾಂಡ್‌ ಸಿಎಂ ಆಗು ಅಂದ್ರೆ ನಂಗೂ ಸಿಎಂ ಆಗೋ ಆಸೆ ಇರೋದಿಲ್ವೆ? ಕಾಂಗ್ರೆಸ್‌ನ 136 ಶಾಸಕರಿಗೂ ಸಿಎಂ ಆಗುವ ಯೋಗ್ಯತೆ ಇದೆ. ನಿಯಮಗಳ ಪ್ರಕಾರ 33 ಶಾಸಕರಿಗೆ ಸಚಿವ ಸ್ಥಾನ ಕೊಡಲಾಗುತ್ತದೆ, ಸಿಎಂ ಆಗುವವರು ಒಬ್ಬರೇ ಇರ್ತಾರೆ. 150 ಜನ ಸಿಎಂ ಆಕಾಂಕ್ಷಿ ಇದ್ದರೂ ಒಬ್ಬರೇ ಸಿಎಂ ಆಗುತ್ತಾರೆ ಎಂದು ಸಿಎಂ ಸ್ಥಾನಾಕಾಂಕ್ಷಿಗಳಿಗೆ ಟಾಂಗ್‌ ನೀಡಿದರು.

ಆದರೆ, ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿಯಿಲ್ಲ. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯುತ್ತಾರೆ. ಎಲ್ಲಾ ಶಾಸಕರು, ಹೈಕಮಾಂಡ್‌ ಬೆಂಬಲ ಅವರಿಗಿದೆ. ನನ್ನ ಬೆಂಬಲ ಕೂಡ ಸಿದ್ದರಾಮಯ್ಯನವರಿಗಿದೆ ಎಂದರು.ನಾನು ಹಿರಿಯ ಲಿಂಗಾಯತ ಶಾಸಕ:

ಇದೇ ವೇಳೆ, ಕೊಪ್ಪಳದಲ್ಲಿ ಮಾತನಾಡಿದ ರಾಯರಡ್ಡಿ, ಲಿಂಗಾಯತ ಸಮುದಾಯದ ಶಾಸಕರಲ್ಲಿ ನಾನು ಎಲ್ಲರಿಗಿಂತಲೂ ಹಿರಿಯನಿದ್ದೇನೆ. ಜಾತಿ ಪ್ರಸ್ತಾಪ ಮಾಡಬಾರದು, ಆದರೆ, ಪಕ್ಷದ ಹೈಕಮಾಂಡ್ ಜಾತಿ ಆಧಾರದಲ್ಲಿ ಹಂಚಿಕೆ ಮಾಡಿ, ಲಿಂಗಾಯತ ಸಮುದಾಯಕ್ಕೆ ಸಿಎಂ ನೀಡುವುದಾದರೆ ಆಗ ನನಗೆ ಹೆಚ್ಚು ಅವಕಾಶವಿದೆ ಎಂದು ಪ್ರಸ್ತಾಪ ಮಾಡುತ್ತೇನೆ. ಕಲ್ಯಾಣ ಕರ್ನಾಟಕದಲ್ಲಿಯೂ ನಾನೇ ಹಿರಿಯ ಶಾಸಕನಿದ್ದು, ಆದ್ಯತೆ ದೊರೆಯಲಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಇದಕ್ಕೆ ಪಕ್ಷದ ವರಿಷ್ಠರ, ಹೈಕಮಾಂಡ್ ನಾಯಕರ ಅಭಿಪ್ರಾಯ ಮುಖ್ಯವಾಗಿರುತ್ತದೆ. ಇದಕ್ಕಿಂತ ಮುಖ್ಯವಾಗಿ ಸಿಎಂ ಸಿದ್ದರಾಮಯ್ಯ ಅವರ ಆಶೀರ್ವಾದ ದೊರೆತರೆ ಮಾತ್ರ ಇದು ಸಾಧ್ಯ. ಯಾರಿಗೆ, ಯಾವಾಗ ಲಾಟರಿ ಹೊಡೆಯುತ್ತದೆ ಎಂದು ಗೊತ್ತಾಗುವುದಿಲ್ಲ. ಹಾಗೆಯೇ ನನಗೂ ಲಾಟರಿ ಹೊಡೆದರೆ ಮುಖ್ಯಮಂತ್ರಿ ಆಗುತ್ತೇನೆ ಎಂದರು.

ಆದರೆ, ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ಇನ್ನು ಮೂರೂವರೆ ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಅವರು ಸಿಎಂ ಆಗಿರುವುದರಿಂದ ನನಗೇನೂ ಲಾಭ ಇಲ್ಲ. ಆದರೆ, ರಾಜ್ಯದ ಅಭಿವೃದ್ಧಿಗಾಗಿ, ರಾಜ್ಯದ ಹಿತಕ್ಕಾಗಿ ಅವರೇ ಸಿಎಂ ಆಗಿರಬೇಕು ಎನ್ನುವುದು ನನ್ನ ಕಳಕಳಿ. ಮುಡಾ ಸಂಬಂಧದ ಪ್ರಾಸಿಕ್ಯೂಷನ್‌ನಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಅವರು ಸಿಎಂ ಆಗಿಯೇ ಮುಂದುವರಿಯುತ್ತಾರೆ ಎಂದರು.ಆದರೂ, ನಾನು ಸಿಎಂ ಆಗಬೇಕು ಎನ್ನುವ ಕುರಿತು ನನ್ನ ಕ್ಷೇತ್ರದವರು ಪ್ರೀತಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ. ನನಗೂ ಸಿಎಂ ಆಗುವ ಬಯಕೆ ಇರುವುದರಲ್ಲಿ ತಪ್ಪೇನಿದೆ?, ನೀವೇ ಹೇಳಿ ಎಂದು ಸುದ್ದಿಗಾರರನ್ನೇ ಪ್ರಶ್ನೆ ಮಾಡಿದರು.

ಹಿರಿಯರಾದ ಆರ್.ವಿ. ದೇಶಪಾಂಡೆ, ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಅವರು ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ. ಒಕ್ಕಲಿಗರಲ್ಲಿ ಸಿಎಂ ಸ್ಥಾನಕ್ಕೆ ಅನೇಕರು ಪೈಪೋಟಿ ಇದ್ದರೂ ಫ್ರಂಟ್‌ಲೈನ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಇದ್ದಾರೆ ಎಂದರು.

==ಈಗ ರಾಯರಡ್ಡಿ ಪರ ಅಭಿಯಾನಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಪರ ಸಿಎಂ ಅಭಿಯಾನದ ಬೆನ್ನಲ್ಲೇ, ಈಗ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸಿಎಂ ಆಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಾರಂಭಿಸಲಾಗಿದೆ.ಜೆಡಿಎಸ್ ಮುಖಂಡ ಮಲ್ಲನಗೌಡ ಕೋನನಗೌಡ್ರ, ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ರಾಜ್ಯದಲ್ಲಿಯೇ ಅತಿ ಹಿಂದುಳಿದ ತಾಲೂಕಿನ ಶಾಸಕರಾಗಿರುವ ಮತ್ತು ಅತ್ಯಂತ ಹಿರಿಯರಾಗಿರುವ ಬಸವರಾಜ ರಾಯರಡ್ಡಿ ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಇದನ್ನು ಹಲವರು ಶೇರ್ ಮಾಡಿದ್ದಾರೆ. ಮತ್ತೆ ಕೆಲವರು ಇದಕ್ಕೆ ಧ್ವನಿಗೂಡಿಸಿ, ರಾಯರಡ್ಡಿ ಸಿಎಂ ಆಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ.

==

ಸಿಎಂ ಹೇಳಿಕೆಗೆ ಬ್ರೇಕ್‌ ಹಾಕಿ: ಖರ್ಗೆಗೆ ಪತ್ರಬೆಂಗಳೂರು: ‘ಕೆಲ ಸಚಿವರು ಹಾಗೂ ಪಕ್ಷದ ಹಿರಿಯ ನಾಯಕರು ಪಕ್ಷದ ನಿಯಮ ಉಲ್ಲಂಘಿಸಿ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎನ್ನುತ್ತಿರುವುದರಿಂದ ಸರ್ಕಾರ ಅಭದ್ರಗೊಳ್ಳುವ ಸಾಧ್ಯತೆಯಿದೆ. ಇಂತಹ ಹೀಗಾಗಿ ಹೇಳಿಕೆಗಳಿಗೆ ತಡೆಯೊಡ್ಡಿ ಸಂಬಂಧಪಟ್ಟವರಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹಾಗೂ ವಿಧಾನಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.

Share this article