ಹಿಜ್ಬುಲ್ಲಾ ಬಾಸ್‌ ಜತೆ 20 ಉಗ್ರರೂ ಫಿನಿಷ್‌! ನಸ್ರಲ್ಲಾ ಜತೆ ಸಭೆ ನಡೆಸುತ್ತಿದ್ದವರೆಲ್ಲ ಹತ್ಯೆ

ಸಾರಾಂಶ

ಲೆಬನಾನ್‌ನ ಹಿಜ್ಬುಲ್ಲಾ ಉಗ್ರ ಸಂಘಟನೆಯ ಮುಖ್ಯಸ್ಥ ಹಸನ್‌ ನಸ್ರಲ್ಲಾನನ್ನು ಗುರಿಯಾಗಿಸಿ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಆತನ ಜೊತೆಗೆ 20ಕ್ಕೂ ಹೆಚ್ಚು ಆಪ್ತರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.  

ಜೆರುಸಲೇಂ: ಲೆಬನಾನ್‌ನ ಹಿಜ್ಬುಲ್ಲಾ ಉಗ್ರ ಸಂಘಟನೆಯ ಮುಖ್ಯಸ್ಥ ಹಸನ್‌ ನಸ್ರಲ್ಲಾನನ್ನು ಗುರಿಯಾಗಿಸಿ ಇಸ್ರೇಲ್‌ ಶುಕ್ರವಾರ ನಡೆಸಿದ ದಾಳಿಯಲ್ಲಿ ಆತನ ಜೊತೆಗೆ ಆತನ 20ಕ್ಕೂ ಹೆಚ್ಚು ಆಪ್ತರು ಕೂಡಾ ಸಾವನ್ನಪ್ಪಿರುವ ವಿಷಯ ಬೆಳಕಿಗೆ ಬಂದಿದೆ. ಅಷ್ಟಕ್ಕೇ ಸುಮ್ಮನಾಗದ ಇಸ್ರೇಲ್‌ ಶನಿವಾರ ನಡೆಸಿದ ಮತ್ತೊಂದು ದಾಳಿಯಲ್ಲಿ ಹಿಜ್ಬುಲ್ಲಾ ಉಗ್ರ ಸಂಘಟನೆಯ ಕೇಂದ್ರೀಯ ಮಂಡಳಿಯ ಉಪಮುಖ್ಯಸ್ಥನನ್ನೇ ಬಲಿಪಡೆದಿದೆ.

ಇದರೊಂದಿಗೆ ಹಿಜ್ಬುಲ್ಲಾ ಉಗ್ರ ಸಂಘಟನೆಯ ಹಲವು ಟಾಪ್ ನಾಯಕರನ್ನು ಇಸ್ರೇಲ್‌ ಒಂದೇ ಏಟಿಗೆ ಹೊಡೆದುರುಳಿಸಿದಂತಾಗಿದೆ. ಈ ಪೈಕಿ ಕೆಲವರ ಸಾವನ್ನು ಹಿಜ್ಬುಲ್ಲಾ ಸಂಘಟನೆ ಖಚಿತಪಡಿಸಿದರೆ, ಇನ್ನು ಕೆಲವರ ಬಗ್ಗೆ ಮೌನವಹಿಸಿದೆ.

ಶುಕ್ರವಾರ ನಡೆದ ದಾಳಿಯಲ್ಲಿ ಮೃತರಾದವರ ಪೈಕಿ ಅಲಿ ಕರಾಕಿ (ದಕ್ಷಿಣ ವಿಭಾಗದ ಕಮಾಂಡರ್‌), ಇಬ್ರಾಹಿಂ ಹುಸ್ಸೇನ್‌ (ನಸ್ರಲ್ಲಾನ ಖಾಸಗಿ ಭದ್ರತಾ ವಿಭಾಗದ ಮುಖ್ಯಸ್ಥ), ಸಮೀರ್‌ ತೌಫೀಖ್‌ (ನಸ್ರಲ್ಲಾನ ಸಲಹೆಗಾರ), ಅಬ್ದದದ ಅಲ್‌ ಅಮೀರ್‌ (ಹಿಜ್ಬುಲ್ಲಾ ಸಂಘಟನಾ ಚತುರ), ಅಲಿ ನಯೇಫ್‌ (ಹಿಜ್ಬುಲ್ಲಾ ಬೆಂಕಿ ಚೆಂಡು) ಸೇರಿದ್ದಾರೆ ಎನ್ನಲಾಗಿದೆ.

ಇನ್ನು ಶನಿವಾರದ ದಾಳಿಯಲ್ಲಿ ಹಿಜ್ಬುಲ್ಲಾ ಉಗ್ರ ಸಂಘಟನೆಯ ನಬೀಲ್‌ ಕಾವೋಕ್‌ ಹತನಾಗಿದ್ದಾನೆ ಎಂದು ಇಸ್ರೇಲ್‌ ಸೇನೆ ಹೇಳಿಕೊಂಡಿದೆ. ಆದರೆ ಹಿಜ್ಬುಲ್ಲಾ ಉಗ್ರ ಸಂಘಟನೆ ಇದನ್ನು ಖಚಿತಪಡಿಸಿಲ್ಲ. ಕಾವೋಕ್‌ ಹಿಜ್ಬುಲ್ಲಾ ಸಂಘಟನೆಯಲ್ಲಿ 1980ರಿಂದ ಗುರುತಿಸಿಕೊಂಡಿದ್ದ. ಈ ಹಿಂದೆ ದಕ್ಷಿಣ ಲೆಬನಾನ್‌ನಲ್ಲಿ ಈತ ಹಿಜ್ಬುಲ್ಲಾಗಳ ಮಿಲಿಟರಿ ಕಮಾಂಡರ್‌ ಆಗಿದ್ದ. 2020ರಲ್ಲಿ ಈತನ ಮೇಲೆ ವಿಶ್ವಸಂಸ್ಥೆ ದಿಗ್ಬಂಧನ ವಿಧಿಸಿತ್ತು.

ಪ್ಯಾಲೆಸ್ತೀನ್‌ನ ಹಮಾಸ್‌ ಮೇಲಿನ ದಾಳಿ ಖಂಡಿಸಿ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರು ಕೂಡ ಇಸ್ರೇಲ್‌ ಮೇಲೆ ದಾಳಿಗೆ ಇಳಿದಿದ್ದಾರೆ. ಹೀಗಾಗಿ ಕಳೆದ ಕೆಲವು ವಾರಗಳಿಂದ ಹಿಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಇಸ್ರೆಲ್‌ ಪೇಜರ್‌, ವಾಕಿ-ಟಾಕಿ ಸ್ಫೋಟ, ಬಾಂಬ್‌ ದಾಳಿಗಳನ್ನು ನಡೆಸುತ್ತಿದೆ. ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಸೇರಿ ಆ ಸಂಘಟನೆಯ ಪ್ರಮುಖ ಕಮಾಂಡರ್‌ಗಳೇ ಹತರಾಗಿದ್ದಾರೆ.

ನಮಗೆ ಬೆದರಿಕೆ  ಒಡ್ಡಿದವರ ಬಿಡಲ್ಲ

ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ಮೇಲೆ ನಮ್ಮ ದಾಳಿ ಮುಂದುವರೆಯಲಿದೆ. ಅವರ ಕಮಾಂಡರ್‌ಗಳನ್ನೆಲ್ಲ ಮುಗಿಸುತ್ತೇವೆ. ಇಸ್ರೇಲ್‌ಗೆ ಬೆದರಿಕೆ ಒಡ್ಡಿದ ಯಾರನ್ನೂ ಬಿಡುವುದಿಲ್ಲ. ಹಮಾಸ್‌ ಉಗ್ರರ ಮೇಲೂ ದಾಳಿ ನಿಲ್ಲಿಸುವುದಿಲ್ಲ. ಅತ್ತ ಯೆಮನ್‌ನಲ್ಲಿ ಹೌತಿ ಉಗ್ರರ ಮೇಲೂ ದಾಳಿ ನಡೆಸುತ್ತೇವೆ.

- ಇಸ್ರೇಲ್‌ ರಕ್ಷಣಾ ಪಡೆ

Share this article