ಸಂಸತ್‌ ದಾಳಿಗೆ 24 ವರ್ಷ: ಹುತಾತ್ಮರಿಗೆ ಗಣ್ಯರ ಗೌರವ

KannadaprabhaNewsNetwork |  
Published : Dec 14, 2025, 03:00 AM IST
ನಮನ | Kannada Prabha

ಸಾರಾಂಶ

2001ರಲ್ಲಿ ಸಂಸತ್ ಭವನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 8 ಸಮವಸ್ತ್ರಧಾರಿ ಸಿಬ್ಬಂದಿ ಸೇರಿ 10 ಜನರಿಗೆ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ನೇತೃತ್ವದಲ್ಲಿ ಸಂಸದರು ಶನಿವಾರ ಪುಷ್ಪನಮನ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದರು.

-ಉಪರಾಷ್ಟ್ರಪತಿ ರಾಧಾಕೃಷ್ಣನ್, ಮೋದಿ ಪುಷ್ಪನಮನ

ನವದೆಹಲಿ: 2001ರಲ್ಲಿ ಸಂಸತ್ ಭವನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಪ್ರಾಣ ಕಳೆದುಕೊಂಡ 8 ಸಮವಸ್ತ್ರಧಾರಿ ಸಿಬ್ಬಂದಿ ಸೇರಿ 10 ಜನರಿಗೆ ಉಪರಾಷ್ಟ್ರಪತಿ ಸಿ. ಪಿ. ರಾಧಾಕೃಷ್ಣನ್ ನೇತೃತ್ವದಲ್ಲಿ ಸಂಸದರು ಶನಿವಾರ ಪುಷ್ಪನಮನ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಿದ್ದರು.

ದಾಳಿ ನಡೆದು 24 ವರ್ಷಗಳಾದ ಹಿನ್ನೆಲೆ ಹಳೆಯ ಸಂಸತ್​​ ಭವನದ ಹೊರಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸಿಬ್ಬಂದಿ ಹುತಾತ್ಮರಿಗೆ ಸಮ್ಮಾನ್‌ ಗಾರ್ಡ್‌ ಮೂಲಕ ಗೌರವ ಸಲ್ಲಿಸಿದರು. ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಕೇಂದ್ರ ಸಚಿವರಾದ ಕಿರಣ್‌ ರಿಜಿಜು, ಜಿತೇಂದ್ರ ಸಿಂಗ್‌ ಇನ್ನಿತರರು ಉಪಸ್ಥಿತರಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತ್ಯೇಕವಾಗಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.2001ರ ಡಿ.13ರಂದು ಸಂಸತ್ತಿನ ಮೇಲೆ ಐವರು ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯನ್ನು ವಿಫಲಗೊಳಿಸಲು ಹೋರಾಡುವ ವೇಳೆ 6 ದೆಹಲಿ ಪೊಲೀಸರು, ಇಬ್ಬರು ಸಂಸತ್ ಭದ್ರತಾ ಸೇವಾ ಅಧಿಕಾರಿಗಳು, ಒಬ್ಬ ತೋಟದ ಮಾಲಿ ಮತ್ತು ಟಿವಿ ವಿಡಿಯೋ ಪತ್ರಕರ್ತ ಸೇರಿ ಒಟ್ಟು 10 ಮಂದಿ ಹುತಾತ್ಮರಾಗಿದ್ದರು.

==

ಮೋದಿ ಮಾಡಿದ್ದೆಲ್ಲಾ ತಪ್ಪಲ್ಲ: ಕೈ ಮಾಜಿ ನಾಯಕ ಅಶ್ವನಿ

ಕಾಂಗ್ರೆಸ್‌ನಲ್ಲಿ ಆತ್ಮಾವಲೋಕನ, ಪುನರುಜ್ಜೀವನ ಅಗತ್ಯ: ಸಲಹೆ

ನವದೆಹಲಿ: ‘ಕಾಂಗ್ರೆಸ್‌ನಲ್ಲಿ ಆತ್ಮಾವಲೋಕನದ ಅವಶ್ಯಕತೆಯಿದೆ. ಸರ್ಕಾರ ಅಥವಾ ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನುವುದು ಅರಿಯಲ್ಲ. ಪಕ್ಷವು ಸಂಕುಚಿತ ಮನೋಭಾವವನ್ನು ಬಿಟ್ಟು ಉದಾರ ಮನಃಸ್ಥಿತಿ ಬೆಳೆಸಿಕೊಳ್ಳಬೇಕು’ ಎಂದು ಕೇಂದ್ರದ ಮಾಜಿ ಸಚಿವ, ಮಾಜಿ ಕಾಂಗ್ರೆಸ್ಸಿಗ ಅಶ್ವನಿ ಕುಮಾರ್‌ ಹೇಳಿದ್ದಾರೆ. ಈ ಮೂಲಕ, ಇತ್ತೀಚೆಗೆ ಸ್ವ-ಪಕ್ಷದ ವಿರುದ್ಧ ಅಪಸ್ವರ ಎತ್ತಿದವರ ಸಾಲಿಗೆ ಸೇರಿಕೊಂಡಿದ್ದಾರೆ.

ಶುಕ್ರವಾರವಷ್ಟೇ, ಪಕ್ಷದ ರಾಷ್ಟ್ರೀಯ ನಾಯಕತ್ವದಲ್ಲೇ ಬದಲಾವಣೆ ಆಗಬೇಕು ಎಂದು ಮಾಜಿ ಕಾಂಗ್ರೆಸ್‌ ಶಾಸಕ ಮೊಹಮ್ಮದ್ ಮೊಕಿಮ್ ಆಗ್ರಹಿಸಿದ್ದರು. ಅದಕ್ಕೂ ಮೊದಲು, ಕಾಂಗ್ರೆಸ್‌ ಸಂಸದ ಮನೀಷ್‌ ತಿವಾರಿ ಅವರು ಕಡ್ಡಾಯ ವಿಪ್‌ ಜಾರಿಯ ವಿರುದ್ಧ ವೈಯಕ್ತಿಕ ಮಸೂದೆ ಮಂಡಿಸಿದ್ದರು. ಈಗ ಅಶ್ವನಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪ್ರತಿ ನಡೆಯನ್ನು ಟೀಕಿಸುವ ಕಾಂಗ್ರೆಸ್‌ಗೆ ಪರೋಕ್ಷವಾಗಿ ತಿವಿದಿದ್ದಾರೆ.ತಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಶ್ವನಿ, ‘ಆಡಳಿತ ಪಕ್ಷ ಅಥವಾ ಪ್ರಧಾನಿಯಾಗಿರುವವರು ಏನೇ ಮಾಡಿದರೂ ತಪ್ಪು ಎನ್ನುವ ಧೋರಣೆ ಸರಿಯಲ್ಲ. ಕಾಂಗ್ರೆಸ್‌ ಇಲ್ಲದೆ ದೇಶದಲ್ಲಿ ಉತ್ತಮ ವಿಪಕ್ಷವಿರಲು ಸಾಧ್ಯವಿಲ್ಲ. ಅದು ಇನ್ನೂ ಪ್ರಭಾವಿಯಾಗಿದೆಯಾದರೂ, ಕರ್ನಾಟಕ ಸೇರಿದಂತೆ ಕೆಲವು ಕಡೆಗಳಲ್ಲಿ ನೆಲೆ ಕಳೆದುಕೊಂಡಿದೆ. ಅದರ ಪುನರುಜ್ಜೀವನ ಅಗತ್ಯ. ಅನ್ಯ ಪಕ್ಷಗಳಲ್ಲಿನ ಹುಳುಕನ್ನು ನೋಡುವ ಬದಲು ತನ್ನಲ್ಲಿನ ಸಮಸ್ಯೆಗಳತ್ತ ಗಮನಹರಿಸಿ, ಬಲವರ್ಧನೆ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಸ್ತುತ ಚರ್ಚೆಯಲ್ಲಿರುವ ಮತಗಳವಿನ ಬಗ್ಗೆ ಪ್ರತಿಕ್ರಿಯಿಸಿ, ‘ನನಗೆ ಆ ಬಗ್ಗೆ ಜಾಸ್ತಿ ತಿಳಿದಿಲ್ಲ. ಆದರೆ ವಿಪಕ್ಷ ನನ್ನಾದರೂ ಹೇಳುತ್ತಿದ್ದರೆ ಅದನ್ನು ಅಗತ್ಯವಾಗಿ ಪರಿಗಣಿಸಬೇಕು’ ಎಂದರು.

==

ರಾಹುಲ್‌ ಗಾಂಧಿ ಎದುರು ದೊಡ್ಡ ದೊಡ್ಡವರಿಗೂ ಜ್ವರ ಬರತ್ತೆ: ಶಾಗೆ ಕೈ ಟಾಂಗ್‌

ಜ್ವರ ಇದ್ದಿದ್ದಕ್ಕೆ ಶಾ ಕೈ ನಡುಕ ಎಂದಿದ್ದಕ್ಕೆ ವ್ಯಂಗ್ಯ

ನವದೆಹಲಿ: ‘ರಾಹುಲ್‌ ಗಾಂಧಿ ಎದುರು ನಿಂತುಕೊಂಡರೆ ದೊಡ್ಡದೊಡ್ಡವರಿಗೂ ಜ್ವರ ಬರುತ್ತದೆ’ ಎಂದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

ಮತಗಳವಿನ ಬಗ್ಗೆ ಲೋಕಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಶಾ ಅವರ ಕೈಗಳು ನಡುಗುತ್ತಿದ್ದವು, ಮಾತು ತೊದಲುತ್ತಿತ್ತು ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದರು. ಆದರೆ ಆ ನಡುಕಕ್ಕೆ ಕಾರಣ ಶಾ ಅವರಿಗಿದ್ದ 102 ಡಿಗ್ರಿ ಜ್ವರ. ಅದಕ್ಕಾಗಿ ಅವರು ಔಷಧಿಯನ್ನು ತೆಗೆದುಕೊಂಡು ಸದನಕ್ಕೆ ಬಂದಿದ್ದರು ಎಂದು ಬಿಜೆಪಿ ಮೂಲಗಳು ತಿಳಿಸಿದ್ದವು.ಇದಕ್ಕೆ ಎಕ್ಸ್‌ನಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರೀನೇತ್‌, ‘ರಾಹುಲ್‌ ಎದುರು ಎಷ್ಟೇ ದೊಡ್ಡವರು ನಿಂತರೂ ಜ್ವರ ಬಂದುಬಿಡುತ್ತದೆ. ಅದರಲ್ಲೂ ಮತಗಳವು ಮಾಡಿ, ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಕೊಂಡು ಆ ಬಗ್ಗೆ ಚರ್ಚಿಸಬೇಕು ಎಂದರೆ ಜ್ವರ ಬರುವುದು ಸಹಜ’ ಎಂದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದುಡಿಯುವ ಸ್ತ್ರೀಗೆ ಪತಿ ಜೀವನಾಂಶ ಕೊಡಬೇಕಿಲ್ಲ: ಅಲಹಾಬಾದ್‌ ‘ಹೈ’
ನಿರ್ಮಲಾ ಭಾರತದ ನಂ.1 ಪ್ರಭಾವಿ ಮಹಿಳೆ!