ಸಂಬಂಧಿ ಜತೆ ಫೋನ್‌ನಲ್ಲಿ ಮಾತಾಡಲು 26/11 ಉಗ್ರ ರಾಣಾಗೆ ಕೋರ್ಟ್‌ ಒಪ್ಪಿಗೆ

KannadaprabhaNewsNetwork |  
Published : Jun 10, 2025, 07:11 AM ISTUpdated : Jun 10, 2025, 08:33 AM IST
ರಾಣಾ | Kannada Prabha

ಸಾರಾಂಶ

26/11 ಮುಂಬೈ ದಾಳಿಯ ಪ್ರಮುಖ ರೂವಾರಿ ತಹಾವುರ್ ರಾಣಾನಿಗೆ ತನ್ನ ಸಂಬಂಧಿಕರ ಜೊತೆ ಫೋನ್‌ನಲ್ಲಿ ಮಾತನಾಡಲು ವಿಶೇಷ ನ್ಯಾಯಾಲಯ ಅನುಮತಿ ಕೊಟ್ಟಿದೆ. ನ್ಯಾ। ಚಂದ್ರಜಿತ್‌ ಸಿಂಗ್‌ ಅವರು ರಾಣಾನಿಗೆ ಕೇವಲ ಒಂದೇ ಬಾರಿ ಮಾತನಾಡುವಂತೆ ಸೂಚಿಸಿದ್ದಾರೆ.

ನವದೆಹಲಿ: 26/11 ಮುಂಬೈ ದಾಳಿಯ ಪ್ರಮುಖ ರೂವಾರಿ ತಹಾವುರ್ ರಾಣಾನಿಗೆ ತನ್ನ ಸಂಬಂಧಿಕರ ಜೊತೆ ಫೋನ್‌ನಲ್ಲಿ ಮಾತನಾಡಲು ವಿಶೇಷ ನ್ಯಾಯಾಲಯ ಅನುಮತಿ ಕೊಟ್ಟಿದೆ. ನ್ಯಾ। ಚಂದ್ರಜಿತ್‌ ಸಿಂಗ್‌ ಅವರು ರಾಣಾನಿಗೆ ಕೇವಲ ಒಂದೇ ಬಾರಿ ಮಾತನಾಡುವಂತೆ ಸೂಚಿಸಿದ್ದಾರೆ.

ಜೊತೆಗೆ ತಿಹಾರ್‌ ಜೈಲಾಧಿಕಾರಿಗಳಿಗೆ ರಾಣಾನ ಆರೋಗ್ಯ ಸ್ಥಿತಿಗತಿಗಳ ಬಗ್ಗೆ 10 ದಿನಗಳ ಒಳಗಾಗಿ ವರದಿ ನೀಡುವಂತೆ ಆದೇಶ ಹೊರಡಿಸಿದ್ದು, ಜೊತೆಗೆ ಫೋನ್‌ನಲ್ಲಿ ಮಾತನಾಡುವ ಬಗ್ಗೆ ಜೈಲಾಧಿಕಾರಿಗಳ ನಿಲುವಿನ ಬಗ್ಗೆಯೂ ತಿಳಿಸುವಂತೆ ಸೂಚನೆ ಹೊರಡಿಸಿದೆ.

ಗಾಜಾಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತೆ ಗ್ರೆಟಾ ವಶಕ್ಕೆ

ಜೆರುಸಲೇಂ: ಮೊದಲೇ ನೀಡಿದ್ದ ಎಚ್ಚರಿಕೆಯಂತೆ, ಗಾಜಾ ಪ್ರವೇಶಿಸಲು ಯತ್ನಿಸಿದ ಪರಿಸರ ಹಾಗೂ ಸಾಮಾಜಿಕ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್‌ ಮತ್ತು ಅವರ ಜತೆಗಿದ್ದ ಇತರರನ್ನು ಇಸ್ರೇಲ್‌ ಪಡೆ ವಶಕ್ಕೆ ತೆಗೆದುಕೊಂಡಿದೆ. ಇದೇ ವಳೆ ನೆರವನ್ನು ಹೊತ್ತ ಫ್ರೀಡಂ ಫ್ಲೊಟಿಲ್ಲಾ ನೌಕೆಯನ್ನು ವಶಕ್ಕೆ ಪಡೆದಿದೆ. ಈ ಮೂಲಕ, ಪ್ಯಾಲೆಸ್ತೀನ್ ಮೇಲಿನ ತನ್ನ ದಿಗ್ಬಂಧನವನ್ನು ಮುರಿಯಲು ಬಿಡುವುದಿಲ್ಲ ಎಂಬ ಸಂದೇಶ ಸಾರಿದೆ.ಗಾಜಾ ಪಟ್ಟಿಯಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಮತ್ತು ನೆರವಿನ ಪ್ರವೇಶದ ಮೇಲಿನ ನಿರ್ಬಂಧದ ವಿರುದ್ಧ ಪ್ರತಿಭಟಿಸಲು ಗ್ರೆಟಾ ಮತ್ತು ಕಾರ್ಯಕರ್ತರು ಹಡಗಿನಲ್ಲಿ ಹೊರಟಿದ್ದರು. ಆಗ ಅವರನ್ನು ಸಮುದ್ರದ ಮಧ್ಯದಲ್ಲೇ ತಡೆದು ವಶಕ್ಕೆ ತೆಗೆದುಕೊಳ್ಳಲಾಗಿದೆ.ಆದರೆ ಅವರು ಗಾಜಾದಿಂದ 200 ಕಿ.ಮೀ. ದೂರದಲ್ಲಿ ಅಂತಾರಾಷ್ಟ್ರೀಯ ಜಲಗಡಿಯಲ್ಲಿದ್ದಾಗಲೇ ಇಸ್ರೇಲ್‌ ಸೇನೆ ಅಪಹರಿಸಿದೆ ಎಂದು ಪ್ರಯಾಣವನ್ನು ಆಯೋಜಿಸಿದ್ದ ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ ಆರೋಪಿಸಿದೆ.

ಆದರೆ ಇಸ್ರೇಲ್‌, ಹಮಾಸ್‌ಗಳು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದನ್ನು ತಡೆಯುಲು ಹೀಗೆ ಮಾಡಿರುವುದಾಗಿ ಸಮರ್ಥನೆ ನೀಡಿದೆ.

ಮತ್ತೆ ಆಸ್ಪತ್ರೆಗೆ ಸೋನಿಯಾ ಗಾಂಧಿ: ವೈದ್ಯಕೀಯ ತಪಾಸಣೆ

ನವದೆಹಲಿ: ಶಿಮ್ಲಾದಲ್ಲಿ ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆ ಸೇರಿ ಡಿಸ್ಚಾರ್ಜ್‌ ಆಗಿದ್ದ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸೋಮವಾರ ದೆಹಲಿಯ ಸರ್‌ ಗಂಗಾ ರಾಮ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡರು.ಇತ್ತೀಚೆಗಷ್ಟೇ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸಿದ್ದ ಸೋನಿಯಾ ಗಾಂಧಿ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಈ ಬೆನ್ನಲ್ಲೇ ಸೋಮವಾರ ಗಂಗಾರಾಮ ಆಸ್ಪತ್ರೆಗೆ ಭೇಟಿ ನೀಡಿ ಹಲವು ಪರೀಕ್ಷೆಗಳನ್ನು ಮಾಡಿಸಿಕೊಂಡರು. ಕಳೆದ ಫೆಬ್ರವರಿಯಲ್ಲಿಯೂ ಸೋನಿಯಾ ಗಾಂಧಿ ಗಂಗಾರಾಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.

ಕೇರಳದ ವಿಳಿಂಜಂಗೆ ಬಂದ ವಿಶ್ವದ ಅತಿದೊಡ್ಡ ಕಂಟೇನರ್‌ ಹಡಗು

ತಿರುವನಂತಪುರಂ: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಕೇರಳದ ವಿಳಿಂಜಂ ಅಂತರಾಷ್ಟ್ರೀಯ ಬಂದರಿಗೆ ವಿಶ್ವದ ಅತಿದೊಡ್ಡ ಕಂಟೇನರ್‌ ಹಡಗು ‘ಎಂಎಸ್‌ಸಿ ಐರಿನಾ’ ಆಗಮಿಸಿ ಲಂಗರು ಹಾಕಿದೆ. ದಕ್ಷಿಣ ಏಷ್ಯಾಗೆ ಇದು ಆಗಮಿಸಿದ್ದು ಇದು ಮೊದಲನೇ ಸಲ.ಸೋಮವಾರ 24,346 ಟಿಇಯು ಸಾಮರ್ಥ್ಯದ ಐರಿನಾ ಹಡಗು ವಿಳಿಂಜಂಗೆ ಬಂದಿಳಿದಿದ್ದು, ಮಂಗಳವಾರದವರೆಗೆ ಅಲ್ಲಿಯೇ ತಂಗುವ ನಿರೀಕ್ಷೆಯಿದೆ. ಈ ಹಡಗು 399.9 ಮೀ ಉದ್ದ ಮತ್ತು 61.3 ಮೀ. ಅಗಲವನ್ನು ಹೊಂದಿದ್ದು ಫಿಫಾ ನಿಗದಿ ಪಡಿಸಿರುವ ಫುಟ್ಬಾಲ್ ಮೈದಾನಕ್ಕಿಂತ ಸರಿಸುಮಾರು 4 ಪಟ್ಟು ಉದ್ದವನ್ನು ಹೊಂದಿದೆ. ಕಳೆದ ಮೇ 2ರಂದು ಪ್ರಧಾನಿ ನರೇಂದ್ರ ಮೋದಿಯವರು ವಿಳಿಂಜಂನಲ್ಲಿ ದೇಶದ ಮೊದಲ ಕಂಟೇನರ್ ಸಾಗಣೆ ಬಂದರಿಗೆ ಚಾಲನೆ ನೀಡಿದ್ದರು.

ಕೋವಿಡ್‌ ಹೊಸ ರೂಪಾಂತರ ತಳಿಯ 163 ಪ್ರಕರಣಗಳು ಪತ್ತೆ

ನವದೆಹಲಿ: ಭಾರತದಲ್ಲಿ ಇದುವರೆಗೆ ಕೊರೋನಾ ಸೋಂಕಿನ ಹೊಸ ರೂಪಾಂತರ ತಳಿ ಎಕ್ಸ್‌ಎಫ್‌ಜಿನ 163 ಪ್ರಕರಣ ಪತ್ತೆಯಾಗಿವೆ ಎಂದು ಭಾರತೀಯ ಸಾರ್ಸ್‌-ಸಿಒವಿ-2 ಜೀನೋಮಿಕ್ಸ್ ಒಕ್ಕೂಟದ (ಇನ್ಸಾಕೊಗ್‌) ದತ್ತಾಂಶ ಹೇಳಿದೆ.ಮರುಸಂಯೋಜಿತ ಎಕ್ಸ್ಎಫ್‌ಜಿ ರೂಪಾಂತರ ತಳಿಯು 4 ಪ್ರಮುಖ ಬದಲಾವಣೆಯ ಲಕ್ಷಣ ಹೊಂದಿದೆ. ವೇಗವಾಗಿ ಹರಡುವ ಸಾಮರ್ಥ್ಯದ ಈ ರೂಪಾಂತರ ಮೊದಲಿಗೆ ಕೆನಡಾದಲ್ಲಿ ಪತ್ತೆಯಾಗಿತ್ತು. ಭಾರತದಲ್ಲಿ ಇದು 163 ಮಾದರಿಗಳಲ್ಲಿ ಕಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 89, ತಮಿಳುನಾಡು 16, ಕೇರಳ 15, ಗುಜರಾತ್ 11, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ 6 ಪ್ರಕರಣ ವರದಿ ಹೇಳಿದೆ ಎಂದು ದತ್ತಾಂಶ ಹೇಳಿದೆ.

ಕಳೆದ 48 ಗಂಟೆಗಳಲ್ಲಿ ಭಾರತದಲ್ಲಿ 769 ಹೊಸ ಕೋವಿಡ್‌ ಪ್ರಕರಣ ಪತ್ತೆಯಾಗಿವೆ. ಸಕ್ರಿಯ ಪ್ರಕರಣ ಸಂಖ್ಯೆ 6000 ದಾಟಿದೆ.

PREV
Read more Articles on

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ