ಸಲ್ಮಾನ್‌ ಖಾನ್‌ಗೆ ಬೆದರಿಕೆ: ರಾಜ್ಯದಲ್ಲಿ ಇನ್ನೊಬ್ಬ ಅರೆಸ್ಟ್‌

KannadaprabhaNewsNetwork |  
Published : Nov 13, 2024, 12:07 AM ISTUpdated : Nov 13, 2024, 12:08 AM IST
ಸಲ್ಮಾನ್‌ ಖಾನ್‌ | Kannada Prabha

ಸಾರಾಂಶ

ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಹೆಸರಲ್ಲಿ ನಟ ಸಲ್ಮಾನ್‌ ಖಾನ್‌ರಿಂದ 5 ಕೋಟಿ ರು.ಗೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ರಾಯಚೂರು ಜಿಲ್ಲೆಯ ಮಾನ್ವಿಯ ಸುಹೇಲ್‌ ಪಾಷಾ (24) ಎಂಬಾತನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

--

- ಬಿಷ್ಣೋಯಿ ಹೆಸರಲ್ಲಿ ಬೆದರಿಕೆ: ಮಾನ್ವಿ ವ್ಯಕ್ತಿ ಸೆರೆ- ತಾನು ಬರೆದ ಹಾಡು ಫೇಮಸ್‌ ಮಾಡಲು ಬೆದರಿಕೆ!

- ಗ್ಯಾಂಗ್‌ಸ್ಟಾರ್‌ ಲಾರೆನ್ಸ್‌ ಬಿಷ್ಣೋಯಿ ಹೆಸರಲ್ಲಿ ನಟ ಸಲ್ಮಾನ್‌ ಖಾನ್‌ಗೆ ಬೆದರಿಕೆ ಹಾಕಿದ್ದ ಮಾನ್ವಿಯ ಸುಹೇಲ್‌- ಇದೇ ರೀತಿ ಪ್ರತ್ಯೇಕವಾಗಿ ಬೆದರಿಕೆ ಹಾಕಿ ಕಳೆದ ವಾರವಷ್ಟೇ ಬಂಧನಕ್ಕೆ ಒಳಗಾಗಿದ್ದ ಹಾವೇರಿಯ ಭಿಕಾರಾಂ- ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ರಾಜ್ಯದಿಂದಲೇ ಇಬ್ಬರ ಬಂಧನ

--ಮುಂಬೈ: ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಹೆಸರಲ್ಲಿ ನಟ ಸಲ್ಮಾನ್‌ ಖಾನ್‌ರಿಂದ 5 ಕೋಟಿ ರು.ಗೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ರಾಯಚೂರು ಜಿಲ್ಲೆಯ ಮಾನ್ವಿಯ ಸುಹೇಲ್‌ ಪಾಷಾ (24) ಎಂಬಾತನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಿಷ್ಣೋಯಿ ಹೆಸರಲ್ಲಿ ಸಲ್ಮಾನ್‌ ಖಾನ್‌ಗೆ ಬೆದರಿಕೆ ಹಾಕಿ ಕರ್ನಾಟಕದಲ್ಲಿ ಬಂಧನಕ್ಕೆ ಒಳಗಾದ 2ನೇ ವ್ಯಕ್ತಿ ಸುಹೇಲ್‌. ಸಲ್ಮಾನ್‌ ಖಾನ್‌ಗೆ ಪ್ರತ್ಯೇಕವಾಗಿ ಬೆದರಿಕೆ ಹಾಕಿದ್ದ ರಾಜಸ್ಥಾನ ಮೂಲದ ಭಿಕಾರಾಂ ಜಲಾರಾಂ ಎಂಬಾತನನ್ನು ಕಳೆದ ಮಂಗಳವಾರ ಹಾವೇರಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು.

ಬೆದರಿಕೆ ಏಕೆ?:

ಯುವ ಗೀತ ರಚನೆಕಾರನಾಗಿರುವ ಸುಹೇಲ್‌, ತನ್ನ ಹೊಸ ಹಾಡನ್ನು ಜನಪ್ರಿಯ ಮಾಡುವ ನಿಟ್ಟಿನಲ್ಲಿ ಇಂಥದ್ದೊಂದು ಬೆದರಿಕೆ ಹಾಕಿದ್ದ ಎಂಬ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ ವೆಂಕಟ ನಾರಾಯಣ ಎಂಬ ಅಮಾಯಕ ವ್ಯಕ್ತಿಯ ಮೊಬೈಲ್‌ ಬಳಸಿ ಜಾಣತನ ಪ್ರದರ್ಶಿಸಲು ಹೋಗಿದ್ದ ಸುಹೇಲ್‌ ತಾನೇ ಸಂಕಟ ತಂದುಕೊಂಡಿದ್ದಾನೆ.ಸುಲಿಗೆ ಕರೆ:

ನ.7ರಂದು ಮುಂಬೈ ಪೊಲೀಸರ ವಾಟ್ಸಾಪ್‌ ಸಹಾಯವಾಣಿಗೆ ಸಂದೇಶ ಕಳುಹಿಸಿದ್ದ ಸುಹೇಲ್‌, ‘5 ಕೋಟಿ ಕೊಡದಿದ್ದರೆ ಸಲ್ಮಾನ್‌ರನ್ನು ಕೊಲ್ಲಲಾಗುವುದು. ಜೊತೆಗೆ, ‘ಮೈ ಸಿಕಂದರ್‌ ಹೂಂ ಎಂಬ’ ಹಾಡು ಬರೆದವರನ್ನೂ ಹತ್ಯೆ ಮಾಡಲಾಗುವುದು’ ಎಂದು ಬೆದರಿಕೆ ಹಾಕಿದ್ದ.ಸಂದೇಶ ಬಂದ ವಾಟ್ಸಾಪ್‌ ಸಂಖ್ಯೆ ಬೆನ್ನಟ್ಟಿದ ಮುಂಬೈ ಪೊಲೀಸರಿಗೆ ಅದು ವೆಂಕಟ ನಾರಾಯಣ ಎಂಬುವರ ಸಂಖ್ಯೆಯಿಂದ ರವಾನೆಯಾಗಿದ್ದು ಕಂಡುಬಂದಿತ್ತು. ಆದರೆ ತನಿಖೆ ವೇಳೆ ವೆಂಕಟ್‌ರ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಸಂಪರ್ಕವೇ ಇರಲಿಲ್ಲ ಎಂಬುದು ಪತ್ತೆಯಾಗಿತ್ತು.

ಈ ಬಗ್ಗೆ ಅವರನ್ನು ವಿಚಾರಿಸಿದಾಗ ಅಪರಿಚಿತನೊಬ್ಬ ಕರೆ ಮಾಡುವ ಉದ್ದೇಶದಿಂದ ತನ್ನ ಮೊಬೈಲ್‌ ಪಡೆದಿದ್ದ ಎಂದು ವೆಂಕಟ್‌ ತಿಳಿಸಿದ್ದರು. ಜೊತೆಗೆ ಮೊಬೈಲ್‌ ಪರಿಶೀಲನೆ ವೇಳೆ ಮೊಬೈಲ್‌ಗೆ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಲು ಒಟಿಪಿ ಬಂದಿದ್ದ ವಿಷಯ ಪತ್ತೆಯಾಗಿತ್ತು.

ಅದರ ಜಾಡು ಹಿಡಿದು ತೆರಳಿದಾಗ ಆರೋಪಿ ಸುಹೇಲ್‌, ನಾರಾಯಣ ಅವರ ಮೊಬೈಲ್‌ ಸಂಖ್ಯೆ ಬಳಸಿ ತನ್ನ ಮೊಬೈಲ್‌ನಲ್ಲಿ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಿದ್ದ. ಇದಕ್ಕಾಗಿಯೇ ಆತ ವೆಂಕಟ್‌ ಅವರ ಮೊಬೈಲ್‌ ಪಡೆದು ಅದರ ಮೂಲಕ ಒಟಿಪಿ ಪಡೆದುಕೊಂಡಿದ್ದ ಎಂಬುದು ಖಚಿತಪಟ್ಟಿತ್ತು. ಈ ಸುಳಿವು ಆಧರಿಸಿ ಮಾನ್ವಿಗೆ ತೆರಳಿ ಸುಹೇಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ, ತನ್ನ ಹೊಸ ಹಾಡು ‘ಮೈ ಸಿಕಂದರ್‌ ಹೂಂ’ ಜನಪ್ರಿಯಗೊಳಿಸುವ ಸಲುವಾಗಿ ಸಂದೇಶ ಕಳಿಸಿದ್ದೆ ಎಂದು ಒಪ್ಪಿಕೊಂಡಿದ್ದಾನೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ
ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ