ನವದೆಹಲಿ: ನಟ ಸಲ್ಮಾನ್‌ಖಾನ್‌ರನ್ನು ಮುಂಬೈನ ಹೊರವಲಯದ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ ಹತ್ಯೆ ಮಾಡಲು 25 ಲಕ್ಷ ರೂ.ಗೆ ಸುಪಾರಿ ನೀಡಲಾಗಿತ್ತು. ಹತ್ಯೆಗೆಂದೇ ಪಾಕಿಸ್ತಾನದಿಂದ ಅತ್ಯಾಧುನಿಕ ಗನ್ ಖರೀದಿಗೆ ಆರೋಪಿಗಳು ಮುಂದಾಗಿದ್ದರು ಎಂದು ನವಿ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ನಟ ಸಲ್ಮಾನ್ ಖಾನ್‌ರವರ ಮುಂಬೈನ ಬಾಂದ್ರಾ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧ ತನಿಖೆ ವೇಳೆ ಈ ವಿಷಯ ಬೆಳಕಿಗೆ ಬಂದಿದೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಈ ಸುಪಾರಿ ಪಡೆದುಕೊಂಡಿತ್ತು. ಹತ್ಯೆಗೆ ಐದು ಜನರ ತಂಡ ರೂಪಿಸಲಾಗಿತ್ತು. ಆರೋಪಿಗಳ ಹತ್ಯೆಗೆ ಪಾಕಿಸ್ತಾನ ಅಥವಾ ಟರ್ಕಿ ದೇಶದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಾದ ಎಕೆ 47, ಎಕೆ92, ಎಂ16 ಮತ್ತು ಟರ್ಕಿ ನಿರ್ಮಿತ ಜಿಗಾನಾ ಆಯುಧ ಖರೀದಿಗೆ ಸಿದ್ಧತೆ ನಡೆಸಿದ್ದರು. ಈ ಸಂಚಿಗೆ ಅಪ್ರಾಪ್ತರನ್ನು ಬಳಸಿಕೊಳ್ಳಲಾಗಿತ್ತು. 60-70 ಜನ ಸಲ್ಮಾನ್ ಚಲನವಲನಗಳ ಮೇಲೆ ಕಣ್ಣಿಟಿದ್ದರು. 2023ರ ಆಗಸ್ಟ್‌ನಿಂದ ಈ ವರ್ಷದ ಏಪ್ರಿಲ್ ಒಳಗೆ ಕೊಲ್ಲಲು ಸಂಚು ರೂಪಿತವಾಗಿತ್ತು. ಹತ್ಯೆ ಬಳಿಕ ಎಲ್ಲರೂ ಕನ್ಯಾಕುಮಾರಿಗೆ ತೆರಳಿ, ಅಲ್ಲಿಂದ ಶ್ರೀಲಂಕಾಕ್ಕೆ ಪರಾರಿಯಾಗುವುದು. ಮುಂದೆ ಭಾರತೀಯ ತನಿಖಾ ಸಂಸ್ಥೆಗಳು ಬರಲಾಗದ ಜಾಗಕ್ಕೆ ತೆರಳುವುದಕ್ಕೆ ಪ್ಲ್ಯಾನ್ ಮಾಡಲಾಗಿತ್ತು ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸಲ್ಮಾನ್ ಹತ್ಯೆಗೆ ಸಂಚು: ಬಿಷ್ಣೋಯಿ ಗ್ಯಾಂಗ್‌ನ ಸದಸ್ಯನ ಬಂಧನ
ಮುಂಬೈ: ನಟ ಸಲ್ಮಾನ್ ಖಾನ್‌ರ ಮುಂಬೈನ ನಿವಾಸದ ಮೇಲೆ ಕಳೆದ ಏಪ್ರಿಲ್‌ನಲ್ಲಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸುಖ ಅಲಿಯಾಸ್ ಸುಖ್‌ಬೀರ್ ಬಲ್ಬೀರ್ ಸಿಂಗ್ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಬಲ್ಬೀರ್, ಲಾರೆನ್ಸ್ ಬಿಷ್ಣೋಯಿ ಗುಂಪಿನ ಸದಸ್ಯನಾಗಿದ್ದು, ಹರ್ಯಾಣದ ಪಾಣಿಪತ್‌ನಲ್ಲಿ ಸಿಕ್ಕಿಬಿದ್ದಿದ್ದಾನೆ. ಈತ ಸಲ್ಮಾನ್ ಹತ್ಯೆಗೆ ಸುಪಾರಿ ನೀಡಿದ್ದ. ಈತ ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್ ದೋಗರ್ ಜೊತೆಗೆ ನಿಕಟ ಸಂಪರ್ಕದಲ್ಲಿದ್ದ. ಈ ತಂಡ ಎಕೆ 47, ಎಂ 16 ಮತ್ತು ಎಕೆ 92 ಗನ್‌ಗಳನ್ನು ಪಾಕಿಸ್ತಾನ ಅಥವಾ ಟರ್ಕಿ ದೇಶದಿಂದ ಖರೀದಿಸಿ ಸಲ್ಮಾನ್ ಹತ್ಯೆಗೆ ಬಳಸಲು ಉದ್ದೇಶಿಸಿದ್ದರು ಎಂದು ಪೊಲಿಸರು ತಿಳಿಸಿದ್ದಾರೆ.