ಮೋದಿ ರಾಜಕೀಯ ಜೀವನಕ್ಕೆ 25 ವರ್ಷ: 1 ತಿಂಗಳು ಸಂಭ್ರಮ

Published : Sep 10, 2026, 12:34 PM IST
Narendra Modi

ಸಾರಾಂಶ

ಪ್ರಧಾನಿ ಮೋದಿ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜನ್ಮ ದಿನವಾದ ಸೆ.17ರಿಂದ ಒಂದು ತಿಂಗಳ ‘ಸೇವಾ ಸಂಕಲ್ಪ’ ಅಭಿಯಾನ ಆರಂಭಿಸಲು ಬಿಜೆಪಿ ನಿರ್ಧರಿಸಿದೆ. ಈ ಅವಧಿಯಲ್ಲಿ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ, ರಕ್ತದಾನ, ಸ್ವಚ್ಛತಾ ಅಭಿಯಾನ, ಸಂವಾದ ಸೇರಿ ಸರಣಿ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲು ನಿರ್ಧರಿಸಿಲಾಗಿದೆ.

ನವದೆಹಲಿ: ಪ್ರಧಾನಿ ಮೋದಿ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟು 25 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಜನ್ಮ ದಿನವಾದ ಸೆ.17ರಿಂದ ಒಂದು ತಿಂಗಳ ‘ಸೇವಾ ಸಂಕಲ್ಪ’ ಅಭಿಯಾನ ಆರಂಭಿಸಲು ಬಿಜೆಪಿ ನಿರ್ಧರಿಸಿದೆ. ಈ ಅವಧಿಯಲ್ಲಿ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ, ರಕ್ತದಾನ, ಸ್ವಚ್ಛತಾ ಅಭಿಯಾನ, ಸಂವಾದ ಸೇರಿ ಸರಣಿ ಕಾರ್ಯಕ್ರಮಗಳನ್ನು ದೇಶಾದ್ಯಂತ ಆಯೋಜಿಸಲು ನಿರ್ಧರಿಸಿದ್ದು, ಯುವಕರು ಹಾಗೂ ಸಾರ್ವಜನಿಕರ ಭಾಗೀದಾರಿಕೆಗೆ ಆದ್ಯತೆ ನೀಡಲುದ್ದೇಶಿಸಲಾಗಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ್ದಾರೆ.

2001ರ ಅ.7ರಂದು ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಕ್ಕೀಗ 25 ವರ್ಷದ ಸಂಭ್ರಮ.

ಏನೇನು ಕಾರ್ಯಕ್ರಮ?:

ಸೆ.17ರಂದು ‘ಆಶೀರ್ವಾದ್‌ ಕ ದಿಯಾ’ ಕಾರ್ಯಕ್ರಮ ಆಯೋಜಿಸಲಿದ್ದು, ಅದರಡಿ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ದೀಪ ಬೆಳಗಿಸಲಿದ್ದಾರೆ.

ಸೇವಾ ಸಂಕಲ್ಪ:

ಜಿಲ್ಲಾ ಕೇಂದ್ರಗಳಲ್ಲಿ ‘ಸೇವಾ ಜ್ಯೋತಿ ಕಲಶ ಯಾತ್ರೆ’ ಕಾರ್ಯಕ್ರಮಗಳನ್ನು ನಡೆಸಲಿದ್ದು, ಇದರ ಭಾಗವಾಗಿ ಪಾದಯಾತ್ರೆ, ಬೈಕ್‌ ಹಾಗೂ ಸೈಕಲ್‌ ರ್‍ಯಾಲಿಗಳು ನಡೆಯಲಿವೆ. ಎಲ್ಲಾ ಜಿಲ್ಲಾ ಕೇಂದ್ರಗಳ ಸುಮಾರು 1 ಸಾವಿರ ಕಡೆ ಅ.7ರಂದು ವಿಕಸಿತ ಭಾರತ 2047ಕ್ಕಾಗಿ ಸಾಮೂಹಿಕ ಸಂಕಲ್ಪ ಕೈಗೊಳ್ಳಲಾಗುವುದು. ಸೆ.17ರಿಂದ ಅ.7ರವರೆಗೆ ಶಾಲೆಗಳಲ್ಲಿ ಚಿತ್ರಕತೆ, ಭಾಷಣ ಸ್ಪರ್ಧೆ ಆಯೋಜಿಸಲಾಗುವುದು. ಪುರಸ್ಕೃತರಿಗೆ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರ ಮಟ್ಟದಲ್ಲಿ ಪ್ರಮಾಣಪತ್ರ ವಿತರಿಸಲಾಗುವುದು.

ಹಳ್ಳಿಹಳ್ಳಿಗಳಲ್ಲಿ ನಾಟಕ:

ನಮೋ ಸೇವಾ ಅನ್‌ಕಹೀ ಕಹಾನಿಯಾ (ನಮೋ ಸೇವೆ ಹೇಳದ ಕಥೆಗಳು) ಅಡಿ ಸರ್ಕಾರಿ ಕಲ್ಯಾಣ ಯೋಜನೆಗಳ ಲಾಭ ಪಡೆದು ಬದುಕು ಬದಲಿಸಿಕೊಂಡವರ ಕಥೆಗಳನ್ನು ಸಂಗೀತ, ನಾಟಕ ಮತ್ತು ಬೀದಿ ನಾಟಕಗಳ ಮೂಲಕ ಹಳ್ಳಿಗಳಲ್ಲಿ ಪ್ರಚಾರ ಮಾಡಲಾಗುವುದು.

20 ದಿನದ ಯಾತ್ರೆ:

ಇನ್ನು ಯುವಕರ ನೇತೃತ್ವದ ಎರಡು ಸೇವಾ ಯಾತ್ರೆಗಳನ್ನು ಮೋದಿ ಅವರ ಹುಟ್ಟೂರು ವಡನಗರ್‌ನಿಂದ ಕರ್ಮಭೂಮಿ ವಾರಾಣಸಿ ವರೆಗೆ ಆಯೋಜಿಸು ನಿರ್ಧರಿಸಲಾಗಿದ್ದು, 10 ತಂಡಗಳ ಒಂದು ಗುಂಪು ವಡನಗರ್‌ನಿಂದ ವಾರಾಣಸಿ ವರೆಗೆ ಪ್ರಯಾಣಿಸಿದರೆ, ಮತ್ತೊಂದು 10 ತಂಡಗಳ ಗುಂಪು ವಾರಾಣಸಿಯಿಂದ ವಡನಗರ್‌ ವರೆಗೆ ಪ್ರಯಾಣಿಸಲಿದೆ. ಸುಮಾರು 1 ಸಾವಿರ ಯುವಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. 20 ದಿನಗಳ ಯಾತ್ರೆಯು 10 ರಾಜ್ಯಗಳ ಮೂಲಕ ಸಂಚರಿಸಲಿದೆ. ರೈತರು, ಗ್ರಾಮೀಣ ಜನರು, ಅಂಗನವಾಡಿ ಕಾರ್ಯಕರ್ತರು, ಯುವಕರ ಕ್ಲಬ್‌ಗಳು, ವಿದ್ಯಾರ್ಥಿಗಳ ಜತೆ ಈ ಗುಂಪು ಸಂವಾದ ನಡೆಸಲಿದೆ.

‘ಸೇವಾ ಮೇರಾ ಯೋಗ್‌ದಾನ್‌’ ಕಾರ್ಯಕ್ರಮದಡಿ 25 ವಿಷಯಗಳಡಿ ಸಾರ್ವಜನಿಕರಿಗೆ ಕನಿಷ್ಠ 25 ನಿಮಿಷ ಶ್ರಮದಾನಕ್ಕೆ ಪ್ರೋತ್ಸಾಹಿಸಲಾಗುವುದು.

ರಂಗೋಲಿ:

‘ಸೇವಾ ಕೆ ರಂಗ್‌ ರಾಷ್ಟ್ರಕೆ ಸಂಗ್‌’ ಕಾರ್ಯಕ್ರಮದಡಿ ಪ್ರಮುಖ ಸಾರ್ವಜನಿಕ ಪ್ರದೇಶಗಳಲ್ಲಿ ರಂಗೋಲಿಗಳನ್ನು ಹಾಕಲಾಗುವುದು. ‘ಸೇವಾ ಫಸ್ಟ್‌ ಇನ್ನೋವೇಷನ್‌ ಚಾಲೆಂಜ್‌’ ಎಂಬ ಕಾರ್ಯಕ್ರಮವನ್ನೂ ಯುವಕರು, ವಿದ್ಯಾರ್ಥಿಗಳು, ಸ್ಟಾರ್ಟ್‌ ಅಪ್‌, ವೃತ್ತಿಪರರು ಮತ್ತು ಕಾರ್ಪೊರೇಟ್‌ ನವೋದ್ಯಮಿಗಳಿಗೆ ಆಯೋಜಿಸಲಾಗುವುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸರ್ಕಾರಿ ಕೆಲಸ ಬಿಡಿ: ಕಾಶ್ಮೀರಿ ಪಂಡಿತರಿಗೆ ಲಷ್ಕರ್‌ ಬೆದರಿಕೆ!
ಕರ್ನಾಟಕ ಸೇರಿ 4 ರಾಜ್ಯಗಳ 5 ರೈಲ್ವೆ ಯೋಜನೆಗೆ ಕೇಂದ್ರ ಅಸ್ತು