;Resize=(412,232))
ಶ್ರೀನಗರ/ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಯೋಗದಲ್ಲಿರುವ ಕಾಶ್ಮೀರಿ ಪಂಡಿತರಿಗೆ ಉಗ್ರ ಸಂಘಟನೆಗಳಿಂದ ಮತ್ತೆ ಕೊಲೆ ಬೆದರಿಕೆ ಬಂದಿದೆ. ಲಷ್ಕರ್-ಎ-ತೊಯ್ಬಾ ಬೆಂಬಲಿತ ಯುನೈಟೆಡ್ ಲಿಬರೇಷನ್ ಕೌನ್ಸಿಲ್ ಎಂಬ ಉಗ್ರ ಸಂಘಟನೆಯು ಪ್ರಧಾನಮಂತ್ರಿ ಪುನರ್ವಸತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸುಮಾರು 7,000 ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಪತ್ರಗಳನ್ನು ರವಾನಿಸಿದ್ದು, ಕೂಡಲೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡದಿದ್ದರೆ ಹತ್ಯೆಗೀಡಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಕಳೆದ 1 ತಿಂಗಳಲ್ಲಿ ಉಗ್ರರಿಂದ ಬಂದಿರುವ 5ನೇ ಬೆದರಿಕೆ ಪತ್ರ ಇದಾಗಿದೆ. ಕಾಶ್ಮೀರಿ ಪಂಡಿತರ ಖಾಸಗಿ ಫೋನ್ ಸಂಖ್ಯೆಗಳು, ಮನೆಯ ವಿಳಾಸಗಳು ಮತ್ತು ವಾಹನ ನೋಂದಣಿ ವಿವರಗಳನ್ನು ಆನ್‌ಲೈನ್ ಹಾಗೂ ಡಾರ್ಕ್ ವೆಬ್‌ನಲ್ಲಿ ಬಿತ್ತರಿಸಲಾಗಿದ್ದು, ತೀವ್ರ ಭದ್ರತಾ ಆತಂಕ ಸೃಷ್ಟಿಯಾಗಿದೆ.
ಈ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರು ಕೇಂದ್ರ ಗೃಹ ಸಚಿವಾಲಯ ಹಾಗೂ ಜಮ್ಮು ಮತ್ತು ಕಾಶ್ಮೀರದ ಉಪರಾಜ್ಯಪಾಲ ಮನೋಜ್ ಸಿನ್ಹಾ ಬಳಿ ತಕ್ಷಣದ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
ಕಳೆದ 15 ವರ್ಷಗಳಿಂದ ಕಾಶ್ಮೀರ ಕಣಿವೆಯಲ್ಲಿ 6,000ಕ್ಕೂ ಹೆಚ್ಚು ಪಿಎಂ ಪ್ಯಾಕೇಜ್ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರ ನಿರ್ಮಿಸಿರುವ ವಸತಿ ಸಮುಚ್ಚಯಗಳಲ್ಲಿ ಕೆಲವೇ ನೌಕರರಿಗೆ ಮಾತ್ರ ಮನೆಗಳು ಹಂಚಿಕೆಯಾಗಿದ್ದು, ಉಳಿದವರು ಸೂಕ್ತ ಭದ್ರತೆಯಿಲ್ಲದ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ.
1990ರಲ್ಲೂ ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಭೀಕರ ನರಮೇಧ ನಡೆಸಲಾಗಿತ್ತು. ಆಗ ಲಕ್ಷಾಂತರ ಮಂದಿ ಜೀವ ಉಳಿಸಿಕೊಳ್ಳಲು ಊರು ತೊರೆದಿದ್ದರು.