ಕಸ್ಟಡಿ ಅವಧಿ ಅಂತ್ಯ : 26/11ರ ರೂವಾರಿ ರಾಣಾ ತಿಹಾರ್ ಜೈಲಿಗೆ

KannadaprabhaNewsNetwork |  
Published : May 10, 2025, 01:09 AM ISTUpdated : May 10, 2025, 04:25 AM IST
ರಾಣಾ | Kannada Prabha

ಸಾರಾಂಶ

ಅಮೆರಿಕದಿಂದ ಭಾರತಕ್ಕೆ ಗಡೀಪಾರುಗೊಂಡಿರುವ 26/11ರ ಮುಂಬೈ ದಾಳಿ ರೂವಾರಿ ತಹಾವುರ್‌ ರಾಣಾ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ, ಎನ್‌ಐಎ ನ್ಯಾಯಾಲಯ ಜೂ.6ರ ತನಕ ನ್ಯಾಯಾಂಗ ಬಂಧನ ವಿಧಿಸಿದ್ದು, ರಾಣಾನನ್ನು ತಿಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.

ನವದೆಹಲಿ: ಅಮೆರಿಕದಿಂದ ಭಾರತಕ್ಕೆ ಗಡೀಪಾರುಗೊಂಡಿರುವ 26/11ರ ಮುಂಬೈ ದಾಳಿ ರೂವಾರಿ ತಹಾವುರ್‌ ರಾಣಾ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ, ಎನ್‌ಐಎ ನ್ಯಾಯಾಲಯ ಜೂ.6ರ ತನಕ ನ್ಯಾಯಾಂಗ ಬಂಧನ ವಿಧಿಸಿದ್ದು, ರಾಣಾನನ್ನು ತಿಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ.ಎನ್‌ಐಎ ಕಸ್ಟಡಿ ಅವಧಿ ಮುಗಿಯುವ ಒಂದು ದಿನದ ಮುಂಚೆ ಎನ್‌ಐಎ ಅಧಿಕಾರಿಗಳು ರಾಣಾನನ್ನು ಎನ್‌ಐಎ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಏ.11ರಂದು ರಾಣಾನನ್ನು 18 ದಿನಗಳ ಕಾಲ ಎನ್‌ಐಎ ವಶಕ್ಕೆ ನೀಡಲಾಗಿತ್ತು.

ಕೇರಳ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.99.5 ವಿದ್ಯಾರ್ಥಿಗಳು ಪಾಸ್

ತಿರುವನಂತಪುರಂ: ಕೇರಳದಲ್ಲಿ ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.99.5ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಪ್ರಕಟಿಸಿದ್ದಾರೆ.ಪರೀಕ್ಷೆ ಬರೆದ 4,27,020 ವಿದ್ಯಾರ್ಥಿಗಳಲ್ಲಿ 4,24,583 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ರಾಜ್ಯದಲ್ಲಿ 2,331 ಶಾಲೆಗಳು ಶೇ. 100 ರಷ್ಟು ಉತ್ತೀರ್ಣತೆ ದಾಖಲಿಸಿವೆ. ಪರೀಕ್ಷೆ ಬರೆದ 39,981 ಎಸ್‌ಸಿ ವಿದ್ಯಾರ್ಥಿಗಳಲ್ಲಿ 39,447 ವಿದ್ಯಾರ್ಥಿಗಳು ಹಾಗೂ 7,279 ಎಸ್‌ಟಿ ವಿದ್ಯಾರ್ಥಿಗಳಲ್ಲಿ 7,135 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಶರಬತ್‌ ಜಿಹಾದ್‌ ಹೇಳಿಕೆ ನೀಡಲ್ಲ: ಬಾಬಾ ರಾಮದೇವ್ ಮುಚ್ಚಳಿಕೆ

ನವದೆಹಲಿ: ಹಮ್‌ದರ್ದ್‌ ಸಂಸ್ಥೆಯ ರೂಫ್‌ ಅಫ್ಜಾ ತಂಪುಪಾನೀಯದ ವಿರುದ್ಧ ಇನ್ನು ಶರಬತ್‌ ಜಿಹಾದ್‌ನಂಥ ಆಕ್ಷೇಪಾರ್ಹ, ನಿಂದನಾತ್ಮಕ ಹೇಳಿಕೆ ನೀಡುವುದಿಲ್ಲ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಅಂಥ ಯಾವುದೇ ಪೋಸ್ಟ್‌ ಹಾಕುವುದಿಲ್ಲ, ಈ ರೀತಿ ಪುನರಾವರ್ತನೆ ಮಾಡುವುದಿಲ್ಲ ಎಂದು ಯೋಗಗುರು ರಾಮದೇವ್ ದೆಹಲಿ ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ. 

ಅದರ ಬೆನ್ನಲ್ಲೆ, ಪ್ರಕರಣವನ್ನು ಮುಕ್ತಾಯಗೊಳಿಸಿರುವುದಾಗಿ ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ.ಪತಂಜಲಿ ಕಂಪನಿಯ ‘ಗುಲಾಬ್ ಶರಬತ್’ ಪ್ರಚಾರ ಮಾಡುವ ವೇಳೆ ರಾಮದೇವ್ ಅವರು, ಹಮ್‌ದರ್ದ್‌ನ ‘ರೂಹ್ ಅಫ್ಜಾ’ದಿಂದ ಸಿಗುವ ಹಣದಿಂದ ಮದರಸಾ, ಮಸೀದಿಗಳನ್ನು ನಿರ್ಮಿಸಲಾಗುತ್ತಿದೆ. ಇದು ‘ಶರಬತ್ ಜಿಹಾದ್’ ಎಂದು ಆರೋಪಿಸಿದ್ದರು.ಇದರ ವಿರುದ್ಧ ಹಮ್‌ದರ್ದ್‌ ಕಂಪನಿ ರಾಮದೇವ್ ಅವರ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿತ್ತು. ಹಮ್‌ದರ್ದ್‌ ವಿರುದ್ಧ ಯಾವುದೇ ನಿಂದನಾತ್ಮಕ ಹೇಳಿಕೆ ನೀಡಬಾರದು ಎಂದು ಕೋರ್ಟ್ ಆದೇಶಿಸಿದ ಬಳಿಕ ಇನ್ನು ಆ ರೀತಿ ಮಾಡುವುದಿಲ್ಲವೆಂದು ರಾಮದೇವ್ ಕೋರ್ಟ್‌ಗೆ ಭರವಸೆ ನೀಡಿದ್ದರು. ಆ ಬೆನ್ನಲ್ಲೆ ಕೋರ್ಟ್ ಪ್ರಕರಣವನ್ನು ಅಂತ್ಯಗೊಳಿಸಿದೆ.

ಇಂದೋರ್ ಭಾರತದ ಮೊದಲ ಭಿಕ್ಷಾಟನೆ ಮುಕ್ತ ನಗರ

ಇಂದೋರ್: ಮಧ್ಯಪ್ರದೇಶದ ಇಂದೋರ್ ಭಾರತದ ಮೊದಲ ಭಿಕ್ಷಾಟನೆ ಮುಕ್ತ ನಗರವಾಗಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ತಿಳಿಸಿದ್ದಾರೆ.‘ಒಂದು ವರ್ಷದ ಹಿಂದೆ ನಗರದಲ್ಲಿ ಸುಮಾರು 5,000 ಭಿಕ್ಷುಕರಿದ್ದರು. ಆಡಳಿತವು ಭಿಕ್ಷಾಟನೆ ನಿರ್ಮೂಲನಾ ಅಭಿಯಾನವನ್ನು ಆರಂಭಿಸಿದ ಬಳಿಕ ಭಿಕ್ಷುಕರಿಗೆ ಉದ್ಯೋಗ ಕಲ್ಪಿಸಿ, ಪುನರ್ವಸತಿ ಕಲ್ಪಿಸಲಾಯಿತು. ಭಿಕ್ಷಾಟನೆಯಲ್ಲಿ ತೊಡಗಿದ್ದ ಮಕ್ಕಳನ್ನು ಶಾಲೆಗಳಿಗೆ ಸೇರಿಸಲಾಯಿತು. 

ಪರಿಣಾಮವಾಗಿ ಇಂದೋರ್ ಮಾದರಿ ಜಿಲ್ಲೆಯಾಗಿ ಬದಲಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ವಿಶ್ವಬ್ಯಾಂಕ್ ತಂಡದಿಂದ ಗುರುತಿಸಲ್ಪಟ್ಟಿದೆ’ ಎಂದು ಹೇಳಿದರು.ಇಂದೋರ್‌ನಲ್ಲಿ ಭಿಕ್ಷುಕರಿಗೆ ಹಣ ನೀಡುವುದನ್ನು ನಿಷೇಧಿಸಲಾಗಿದೆ. ನೀಡಿದರೆ ಅವರ ಮೇಲೆ ಕೇಸು ಹಾಕಿ ದಂಡ ವಿಧಿಸಲಾಗುತ್ತದೆ. ಭಿಕ್ಷಾಟನೆಯ ಮಾಹಿತಿ ನೀಡುವವರಿಗೆ 1,000 ರು. ಬಹುಮಾನ ನೀಡಲಾಗುತ್ತದೆ.

PREV

Recommended Stories

24 ಮಕ್ಕಳ ಬಲಿ ಪಡೆದ ಮಾರಕ ಸಿರಪ್‌ ಕಂಪನಿ ಮಾಲೀಕ ಸೆರೆ
ಪಾಕ್‌ ಏರ್‌ಬೇಸ್‌ ತಿಂದು ತೇಗಿದ ಭಾರತೀಯ ವಾಯುಪಡೆ!