ಭಾರತದ ದಾಳಿ ಬಗ್ಗೆ ಪಾಕ್‌ ಉಲ್ಟಾ ಪಲ್ಟಾ ಹೇಳಿಕೆ!

KannadaprabhaNewsNetwork | Updated : May 10 2025, 04:27 AM IST
Follow Us

ಸಾರಾಂಶ

ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿ, ಅದೇ ಭಾಷೆಯಲ್ಲಿ ಭಾರತದ ಕಡೆಯಿಂದ ಬಂದ ಉತ್ತರದಿಂದ ತತ್ತರಿಸಿರುವ ಪಾಕಿಸ್ತಾನದ ಸಚಿವರೆಲ್ಲ ನಿಮಿಷಕ್ಕೊಂದು ಹೇಳಿಕೆ ಕೊಟ್ಟು ತಮ್ಮನ್ನು ತಾವೇ ನಗೆಪಾಟಲಿಗೆ ಈಡುಮಾಡಿಕೊಳ್ಳುತ್ತಿದ್ದಾರೆ.

ಇಸ್ಲಾಮಾಬಾದ್‌: ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸಿ, ಅದೇ ಭಾಷೆಯಲ್ಲಿ ಭಾರತದ ಕಡೆಯಿಂದ ಬಂದ ಉತ್ತರದಿಂದ ತತ್ತರಿಸಿರುವ ಪಾಕಿಸ್ತಾನದ ಸಚಿವರೆಲ್ಲ ನಿಮಿಷಕ್ಕೊಂದು ಹೇಳಿಕೆ ಕೊಟ್ಟು ತಮ್ಮನ್ನು ತಾವೇ ನಗೆಪಾಟಲಿಗೆ ಈಡುಮಾಡಿಕೊಳ್ಳುತ್ತಿದ್ದಾರೆ.

ಮೊದಲಿಗೆ, ಭಾರತದಿಂದ ಹಾರಿಸಲ್ಪಟ್ಟ ಎಲ್ಲಾ ಕ್ಷಿಪಣಿ, ಡ್ರೋನ್‌, ವಿಮಾನಗಳನ್ನು ತಡೆದು ಹೊಡೆದು ಹಾಕಿದ್ದೇವೆ ಎಂದಿದ್ದ ಪಾಕಿಸ್ತಾನದ ರಕ್ಷಣಾ ಸಚಿವರು, ಬಳಿಕ, ‘ನಾವು ಬೇಕೆಂದೇ ಭಾರತದ ಡ್ರೋನ್‌ಗಳನ್ನು ತಡೆಯಲಿಲ್ಲ’ ಎಂದಿದ್ದಾರೆ. ಒಂದು ಕಡೆ, ಪಾಕಿಸ್ತಾನದ ಅಂತರ ಸೇವೆಗಳ ಸಾರ್ವಜನಿಕ ಸಂಪರ್ಕಗಳ ಮಹಾನಿರ್ದೇಶಕ ಲೆ। ಜ। ಅಹ್ಮದ್‌ ಷರೀಫ್‌, ‘ಭಾರತದ ಕಡೆಯಿಂದ ಬಂದ ಹಾರ್ಪಿ ಡ್ರೋನ್‌ಗಳ ಪೈಕಿ 12 ಡ್ರೋನ್‌ಗಳನ್ನು ಪಾಕ್‌ ಪಡೆಗಳು ಲಾಹೋರ್‌, ರಾವಲ್ಪಿಂಡಿ, ಭವಾಲ್ಪುರ್‌, ಕರಾಚಿ ಸೇರಿದಂತೆ ಹಲವು ಸ್ಥಳಗಳಲ್ಲಿ ಹೊಡೆದುಹಾಕಿವೆ’ ಎಂದು ಅದರ ಚಿತ್ರಗಳನ್ನೂ ಪ್ರದರ್ಶಿಸಿದ್ದಾರೆ.

ಇನ್ನೊಂದು ಕಡೆ, ‘ಸ್ಫೋಟಕ ತುಂಬಿದ ಅರಬ್‌ ಡ್ರೋನ್‌ಗಳು ಹಾರಿಬರುತ್ತಿದ್ದರೆ, ಅದನ್ನು ನಮ್ಮ ರಕ್ಷಣಾ ವ್ಯವಸ್ಥೆ ಏಕೆ ತಡೆಯಲಿಲ್ಲ?’ ಎಂದು ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌, ‘ಅವುಗಳು 35000 ಅಡಿ ಎತ್ತರದಿಂದ ಬರುತ್ತಿದ್ದವು. ಅವುಗಳಲ್ಲಿ ಸ್ಟೆಲ್ಥ್‌ (ರಡಾರ್‌ ಕಣ್ಣಿಗೆ ಕಾಣದ) ತಂತ್ರಜ್ಞಾನ ಇತ್ತು’ ಎಂದಿದ್ದಾರೆ. 

ಈ ಮೂಲಕ, ತಮ್ಮ ವಾಯು ರಕ್ಷಣಾ ವ್ಯವಸ್ಥೆ ಭಾರತದ ದಾಳಿಯನ್ನು ತಡೆಯುವಲ್ಲಿ ವಿಫಲವಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಸಂಸತ್ತಿನಲ್ಲಿ ಮಾತನಾಡಿದ ಆಸಿಫ್‌, ‘ದೇಶದ ವಾಯು ರಕ್ಷಣಾ ಘಟಕಗಳ ಸ್ಥಳವನ್ನು ಭಾರತೀಯ ಪಡೆಗಳಿಗೆ ಬಹಿರಂಗಪಡಿಸುವುದನ್ನು ತಪ್ಪಿಸುವ ಉದ್ದೇಶದಿಂದ ನಾವು ಭಾರತೀಯ ಭಾರತದ ಡ್ರೋನ್‌ ಹಾಗೂ ಕ್ಷಿಪಣಿಗಳನ್ನು ತಡೆಯಲಿಲ್ಲ, ಹೊಡೆಯಲಿಲ್ಲ’ ಎಂದಿದ್ದಾರೆ. ಇವರ ಇಂತ ವ್ಯತಿರಿಕ್ತ ಹೇಳಿಕೆಗಳು ಟೀಕೆಗೆ ಗುರಿಯಾಗುತ್ತಿದೆ.

ಷರೀಫ್‌ ಮೋದಿಗೆ ಹೆದರುವ ಹೇಡಿ: ಪಾಕ್ ಸಂಸದ

ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೂ ಭಾರತ ಸರ್ಕಾರ ಹಾಗೂ ಅಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೇರ ಸಂದೇಶ ನೀಡಲು ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್ ವಿಫಲರಾಗಿದ್ದಾರೆ. ತಮ್ಮ ಭಾಷಣದಲ್ಲಿ ಷರೀಫ್‌ ಅವರು ಮೋದಿ ಅವರ ಹೆಸರನ್ನೂ ಹೇಳಲಿಲ್ಲ. ಅವರು ಅಷ್ಟೊಂದು ಹೇಡಿ’ ಎಂದು ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸಂಸದ ಶಾಹಿದ್ ಖಟ್ಟಕ್ ಕಿಡಿಕಾರಿದ್ದಾರೆ. 

ಶುಕ್ರವಾರ ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಖಟ್ಟಕ್, ‘ಷರೀಫ್‌ರಿಂದ ಭಾರತದ ವಿರುದ್ಧ ಒಂದೇ ಒಂದು ಹೇಳಿಕೆ ಬಂದಿಲ್ಲ. ಗಡಿಯಲ್ಲಿ ನಿಂತಿರುವ ಪಾಕಿಸ್ತಾನಿ ಸೈನಿಕರು ಸರ್ಕಾರ ಧೈರ್ಯದಿಂದ ಹೋರಾಡುತ್ತದೆ ಎಂದು ನಿರೀಕ್ಷಿಸುತ್ತಾರೆ. ಆದರೆ ನಿಮ್ಮ (ಸೈನಿಕರ) ನಾಯಕ ಮೋದಿಯ ಹೆಸರನ್ನು ಸಹ ಉಚ್ಚರಿಸಲಾಗದ ಹೇಡಿ. ಗಡಿಯಲ್ಲಿ ಹೋರಾಡುವ ಸೈನಿಕನಿಗೆ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ?’ ಎಂದು ಪ್ರಶ್ನಿಸಿದರು.