- ಇರಾನ್ ಸಚಿವ ಅರಾಗ್ಚಿ ಪಾಕ್‌ಗೆ
ಇಸ್ಲಾಮಾಬಾದ್: ನೆನೆಗುದಿಗೆ ಬಿದ್ದಿರುವ ಅಮೆರಿಕ-ಇರಾನ್ ನಡುವಿನ 2ನೇ ಸುತ್ತಿನ ಸಮರ ಸಂಧಾನ ಸಭೆ ಇನ್ನು 1-2 ದಿನದಲ್ಲಿ ಕೈಗೂಡುವ ನಿರೀಕ್ಷೆ ಇದೆ. ಏಕೆಂದರೆ ಮಹತ್ವದ ಬೆಳವಣಿಗೆಯೊಂದರಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಶನಿವಾರ ನಸುಕಿನಲ್ಲಿ ಸಂಧಾನದ ಮಧ್ಯಸ್ಥಿಕೆ ದೇಶ ಪಾಕಿಸ್ತಾನಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಇನ್ನು ಅಮೆರಿಕದಿಂದ ಮಧ್ಯಪ್ರಾಚ್ಯ ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಳಿಯ ಜೇರೆಡ್ ಕುಶ್ನರ್ ಆಗಮಿಸಲಿದ್ದಾರೆ. ಈ ನಡುವೆ ಅಮೆರಿಕದ ಭದ್ರತಾ ತಂಡವೊಂದು ಈಗಾಗಲೇ ಇಸ್ಲಾಮಾಬಾದ್‌ಗೆ ಬಂದು ಬೀಡು ಬಿಟ್ಟಿದೆ.ಪಾಕಿಸ್ತಾನದ ಅಧಿಕಾರಿಗಳು ಮಾತನಾಡಿ, ಇರಾನ್‌ನ ಸಣ್ಣ ನಿಯೋಗ ಬರಲಿದ್ದು, ಶುಕ್ರವಾರ ತಡರಾತ್ರಿ ಅಥವಾ ಶನಿವಾರ ನಸುಕಿನಲ್ಲಿ ಆಗಮಿಸಬಹುದು ಎಂದಿದ್ದಾರೆ. ಇರಾನ್ ಅಧಿಕಾರಿಗಳು ಹೇಳಿಕೆ ನೀಡಿ, ‘ಅರಾಗ್ಚಿ ಅವರು ಪಾಕಿಸ್ತಾನ ಅಲ್ಲದೆ ರಷ್ಯಾ ಮತ್ತು ಒಮಾನ್‌ಗೂ ತೆರಳಲಿದ್ದಾರೆ’ ಎಂದಿದ್ದಾರೆ. ಆದರೆ ಸ್ಪೀಕರ್ ಗಾಲಿಭಾಫ್ ಈ ತಂಡದಿಂದ ದೂರ ಉಳಿದಿದ್ದಾರೆ.ಏ.11ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಮೊದಲ ಸುತ್ತಿನ ಸಂಧಾನ ಸಭೆ ವಿಫಲವಾಗಿತ್ತು. ಆದರೆ ಮಂಗಳವಾರ ನಡೆಯಬೇಕಿದ್ದ 2ನೇ ಸುತ್ತಿನ ಸಂಧಾನ ಸಭೆಗೆ ಎರಡೂ ನಿಯೋಗ ಬಂದಿರಲಿಲ್ಲ. ಹೀಗಾಗಿ ಸಭೆ ರದ್ದಾಗಿತ್ತು. ಆದಾಗ್ಯೂ ಅಮೆರಿಕ ಕದನವಿರಾಮ ಮುಂದುವರೆಸಿತ್ತು.
ಇಸ್ರೇಲ್-ಲೆಬನಾನ್ ಕದನವಿರಾಮ 3 ವಾರ ವಿಸ್ತರಣೆವಾಷಿಂಗ್ಟನ್: ಈ ಹಿಂದೆ 10 ದಿನಗಳ ಕದನವಿರಾಮ ಘೋಷಿಸಿದ್ದ ಇಸ್ರೇಲ್ ಮತ್ತು ಲೆಬನಾನ್, ವಿರಾಮವನ್ನು 3 ವಾರಗಳವರೆಗೆ ವಿಸ್ತರಿಸಲು ಒಪ್ಪಿಕೊಂಡಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.2 ಬಾರಿಗೆ ಇಸ್ರೇಲ್ ಮತ್ತು ಲೆಬನಾನ್ ರಾಯಭಾರಿಗಳ ನಡುವಿನ ಸಭೆ ‘ತುಂಬಾ ಚೆನ್ನಾಗಿ’ ನಡೆಯಿತು. ಕದನವಿರಾಮ 3 ವಾರ ವಿಸ್ತರಣೆ ಆಗಿದೆ ಎಂದು ಶ್ವೇತಭವನದಲ್ಲಿ ಟ್ರಂಪ್ ಹೇಳಿದರು.ಇರಾನ್-ಅಮೆರಿಕ ಕದನದ ವೇಳೆಯೇ, ಇರಾನ್‌ನ ಮಿತ್ರರಾದ ಲೆಬನಾನ್‌ನ ಹಿಜ್ಬುಲ್ಲಾ ಉಗ್ರರ ಮೇಲೆ ಇಸ್ರೇಲ್ ಪ್ರತ್ಯೇಕ ದಾಳಿ ಆರಂಭಿಸಿತ್ತು. ಇರಾನ್-ಅಮೆರಿಕ ಕದನವಿರಾಮ ಘೋಷಣೆ ಆದರೂ ಇಸ್ರೇಲ್-ಲೆಬನಾನ್ ಕದನ ನಿಂತಿರಲಿಲ್ಲ. ಇದು ಇರಾನ್ ಕೆಂಗಣ್ಣಿಗೆ ಕಾರಣವಾಗಿತ್ತು. ಬಳಿಕ ಟ್ರಂಪ್ ಮಧ್ಯಪ್ರವೇಶಿಸಿ ಕದನವಿರಾಮ ಸಾರಿದ್ದರು.
ಮುಂಬೈಗೆ ಬಂದು ಸಾಂಸ್ಕೃತಿಕವಾಗಿ ಶುದ್ಧ ಆಗಿ: ಟ್ರಂಪ್‌ಗೆ ಇರಾನ್ ಟಾಂಗ್- ಮಹಾರಾಷ್ಟ್ರದ ಸಂಸ್ಕೃತಿಯ ವಿಡಿಯೋ ಮೂಲಕ ಚಾಟಿನವದೆಹಲಿ: ‘ಭಾರತ ಮತ್ತು ಚೀನಾ ನರಕದ ಕೂಪಗಳು’ ಎಂದು ಹೇಳುವ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಿವಾದಕ್ಕೆ ಗುರಿಯಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇದೀಗ ಇರಾನ್ ಮತ್ತೊಮ್ಮೆ ಕಾಲೆಳೆದಿದೆ.ಮಹಾರಾಷ್ಟ್ರದ ಸಾಂಸ್ಕೃತಿಕ ಹಾಗೂ ಭೌಗೋಳಿಕ ಪರಂಪರೆಯನ್ನು ಬಿಂಬಿಸುವ ವಿಡಿಯೋವೊಂದನ್ನು ಹಂಚಿಕೊಂಡಿರುವ ಮುಂಬೈನಲ್ಲಿರುವ ಇರಾನ್‌ನ ದೂತವಾಸ ಕಚೇರಿ, ಟ್ರಂಪ್ ಅವರು ಯಾವತ್ತಾದರೂ ಮುಂಬೈ ಪ್ರವಾಸ ಕೈಗೊಳ್ಳಬೇಕು, ಈ ಮೂಲಕವಾದರೂ ಅವರ ಸಾಂಸ್ಕೃತಿಕ ಶುದ್ಧೀಕರಣ ಆದೀತು ಎಂದು ವ್ಯಂಗ್ಯವಾಡಿದ್ದಾರೆ.‘ಯಾರಾದರೂ ಟ್ರಂಪ್ ಅವರಿಗೆ ಒನ್ ವೇ (ವಾಪಸ್ ಹೋಗಲು ಟಿಕೆಟ್ ಇಲ್ಲದ) ಸಾಂಸ್ಕೃತಿಕ ಶುದ್ಧೀಕರಣದ ಪ್ರವಾಸ ಬುಕ್ ಮಾಡಬೇಕು. ಈ ಮೂಲಕವಾದರೂ ಅವರ ಅರ್ಥವಿಲ್ಲದ ಮಾತು ಕಡಿಮೆ ಮಾಡಬಹುದು. ಇದಕ್ಕಾಗಿ ಅವರು ಭಾರತಕ್ಕೆ ಬರಬೇಕು’ ಎಂದು ದೂತಾವಾಸ ಕಚೇರಿ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.ಗುರುವಾರವಷ್ಟೇ ಇರಾನ್‌ನ ಹೈದರಾಬಾದ್ ದೂತವಾಸ ಕಚೇರಿ ಕೂಡ ಟ್ರಂಪ್ ಹೇಳಿಕೆಗೆ ತಿರುಗೇಟು ನೀಡಿತ್ತು.ಅಮೆರಿಕದ ರಾಜಕೀಯ ವಿಶ್ಲೇಷಕ ಮೈಕೆಲ್ ಸ್ಯಾವೇಜ್ ಅವರ ಪಾಡ್‌ಕಾಸ್ಟ್ ಅನ್ನು ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಹಂಚಿಕೊಂಡಿದ್ದರು. ಅದರಲ್ಲಿ ಸ್ಯಾವೇಜ್ ಅವರು ಅಮೆರಿಕದ ಜನ್ಮಸಿದ್ಧ ಪೌರತ್ವದ ಹಕ್ಕು ವಿರೋಧಿಸುವ ಭರದಲ್ಲಿ ಭಾರತ, ಚೀನಾವನ್ನು ನರಕದ ಕೂಪಗಳು ಎಂದು ಹಂಗಿಸಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.ಡೆಮಾಕ್ರಟಿಕ್ ಪಕ್ಷ ಕಿಡಿ:ಭಾರತ ಮತ್ತು ಇತರ ಕೆಲವು ದೇಶಗಳನ್ನು ‘ನರಕಗಳು’ ಎಂದು ಕರೆದಿದ್ದಕ್ಕಾಗಿ ಟ್ರಂಪ್ ಅವರನ್ನು ಡೆಮಾಕ್ರಟಿಕ್ ನಾಯಕರು ಟೀಕಿಸಿದ್ದಾರೆ. ‘ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ‘ಜನಾಂಗೀಯ ಕಸ’ವನ್ನು ವರ್ಧಿಸುವ ಮೂಲಕ ಅಧ್ಯಕ್ಷ ಸ್ಥಾನವನ್ನು ರಿಯಾಲಿಟಿ ಟಿವಿ ಕಾರ್ಯಕ್ರಮವಾಗಿ ಮಾರ್ಪಡಿಸಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.