ತುರ್ತುಸ್ಥಿತಿಗೆ 50: ಬಿಜೆಪಿಯಿಂದ ಕರಾಳ ದಿನಾಚರಣೆ

KannadaprabhaNewsNetwork |  
Published : Jun 25, 2025, 01:18 AM IST
ಇಂದಿರಾ ಗಾಂಧಿ | Kannada Prabha

ಸಾರಾಂಶ

ಭಾರತದ ಇತಿಹಾಸದ ಕರಾಳ ಅಧ್ಯಾಯ ಹಾಗೂ ಕಾಂಗ್ರೆಸ್‌ ಪಾಲಿನ ಕಪ್ಪುಚುಕ್ಕಿ ಎಂದೇ ಪರಿಗಣಿಸಲಾಗುವ ತುರ್ತು ಸ್ಥಿತಿ ಹೇರಿಕೆಯಾಗಿ ಬುಧವಾರಕ್ಕೆ 50 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಸಂವಿಧಾನ ಹತ್ಯಾ ದಿವಸ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ.

ಕಾಂಗ್ರೆಸ್‌ ಪಾಲಿನ ಅತಿದೊಡ್ಡ ಕಳಂಕ, ಬಿಜೆಪಿಗೆ ರಾಜಕೀಯ ಅಸ್ತ್ರ

ವರ್ಷವಿಡೀ ತುರ್ತುಪರಿಸ್ಥಿತಿ ಕರಾಳತೆ ನೆನಪಿಸಲು ಕಾರ್ಯಕ್ರಮ

ವರ್ಷವಿಡೀ ಸಂವಿಧಾನ ಹತ್ಯಾ ದಿವಸ ಆಚರಣೆಗೆ ಬಿಜೆಪಿ ಸಿದ್ಧತೆ

==

ನವದೆಹಲಿ: ಭಾರತದ ಇತಿಹಾಸದ ಕರಾಳ ಅಧ್ಯಾಯ ಹಾಗೂ ಕಾಂಗ್ರೆಸ್‌ ಪಾಲಿನ ಕಪ್ಪುಚುಕ್ಕಿ ಎಂದೇ ಪರಿಗಣಿಸಲಾಗುವ ತುರ್ತು ಸ್ಥಿತಿ ಹೇರಿಕೆಯಾಗಿ ಬುಧವಾರಕ್ಕೆ 50 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ಸಂವಿಧಾನ ಹತ್ಯಾ ದಿವಸ ಆಚರಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಜೊತೆಗೆ 1 ವರ್ಷವಿಡೀ ತುರ್ತುಸ್ಥಿತಿಯಲ್ಲಾದ ಪ್ರಜಾಪ್ರಭುತ್ವ ನಾಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಆಯೋಜನೆಗೂ ಮುಂದಾಗಿದೆ.

1975ರಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಪತನಗೊಳ್ಳುತ್ತಿದ್ದಂತೆ, ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ತಮ್ಮ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ದೇಶಾದ್ಯಂತ ತುರ್ತುಸ್ಥಿತಿ ಹೇರಿದ್ದರು. 1977ರಲ್ಲಿ ಜನತಾಪಕ್ಷ ಅಭೂತಪೂರ್ವ ಜಯ ಸಾಧಿಸುವುದರೊಂದಿಗೆ ತುರ್ತು ಸ್ಥಿತಿಯನ್ನು ತೆರವುಗೊಳಿಸಲಾಗಿತ್ತು. ಆನಂತರದ ವರ್ಷಗಳಲ್ಲಿ ಬಿಜೆಪಿ ಪಾಲಿಗೆ ತುರ್ತಿಸ್ಥಿತಿ ವಿಷಯವು ಕಾಂಗ್ರೆಸ್‌ ವಿರುದ್ಧ ಪ್ರಬಲ ಅಸ್ತ್ರವಾಗಿದೆ.

ಏನೇನು ಕಾರ್ಯಕ್ರಮ?:

ನವದೆಹಲಿಯ ತ್ಯಾಗರಾಜ್‌ ಸ್ಟೇಡಿಯಂನಲ್ಲಿ ಮುಖ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇದರ ಮುಖ್ಯ ಅತಿಥಿಯಾಗಿರಲಿದ್ದಾರೆ. ಈ ವೇಳೆ, ಸಾಂವಿಧಾನಿಕ ಮೌಲ್ಯ, ಪ್ರಜಾಸತ್ತಾತ್ಮಕ ಹಕ್ಕು ಮತ್ತು ತುರ್ತು ಪರಿಸ್ಥಿತಿಯಿಂದ ಕಲಿತ ಪಾಠಗಳ ಬಗ್ಗೆ ದೇಶಾಂದ್ಯಂತ ಜಾಗೃತಿ ಮೂಡಿಸಲು ಹೊರಡಲಿರುವ ‘ಪ್ರಜಾಪ್ರಭುತ್ವ ಚಿರಾಯು ಯಾತ್ರೆ''''ಗೆ ಚಾಲನೆ ನೀಡಲಿದ್ದಾರೆ.

ಸಂವಿಧಾನ ಹತ್ಯಾ ದಿನದ ಪ್ರಯುಕ್ತ ಭವ್ಯ ಕಾರ್ಯಕ್ರಮ ಆಯೋಜಿಸುವಂತೆ ಕೇಂದ್ರ ಸಂಸ್ಕೃತಿ ಸಚಿವಾಲಯ ಈಗಾಗಲೇ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಇನ್ನು ಪ್ರಜಾಪ್ರಭುತ್ವದ ಸ್ಫೂರ್ತಿಯನ್ನು ಪ್ರತಿಬಿಂಬಿಸುವ ‘ದೀಪಶಿಖಾ ಯಾತ್ರೆ’ಗೆ ಜೂ.25ರಂದು ದೆಹಲಿಯಲ್ಲಿ ಚಾಲನೆ ನೀಡಲಾಗುವುದು. ಈ ಯಾತ್ರೆಯು 1 ವರ್ಷದ ಕಾಲ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿ, 2026ರ ಮಾ.21ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಕೊನೆಗೊಳ್ಳಲಿದೆ. ಈ ಅವಧಿಯಲ್ಲಿ ನಾಗರಿಕ ಹಕ್ಕುಗಳ ನಿರ್ಬಂಧ, ಮಾಧ್ಯಮಗಳ ಕಾರ್ಯನಿರ್ವಹಣೆ ಮೇಲೆ ಕಡಿವಾಣ ಮತ್ತು ವಿರೋಧ ಪಕ್ಷದ ನಾಯಕರ ಸಾಮೂಹಿಕ ಸೆರೆವಾಸ ಸೇರಿದಂತೆ ಪ್ರಜಾಪ್ರಭುತ್ವದ ನಾಶದ ಹಲವು ಘಟನೆಗಳ ಬಗ್ಗೆ ಪ್ರಚಾರ ಮಾಡಲಾಗುವುದು.

ಜತೆಗೆ, ‘ಸಂವಿಧಾನ ಹತ್ಯೆ ದಿನ’ ಶೀರ್ಷಿಕೆಯ ಕಿರುಚಿತ್ರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುವುದು.

ಅತ್ತ ಬಿಜೆಪಿಯ ಚಿಂತಕರ ಚಾವಡಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಸಂಶೋಧನಾ ಪ್ರತಿಷ್ಠಾನವು ದೆಹಲಿಯ ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದಲ್ಲಿ ಬೃಹತ್‌ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗುವುದು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!