ಶುಭಾಂಶು ಶುಕ್ಲಾ ಇಂದು ಬಾಹ್ಯಾಕಾಶಕ್ಕೆ

KannadaprabhaNewsNetwork |  
Published : Jun 25, 2025, 01:18 AM IST
ಶುಭಾಂಶು | Kannada Prabha

ಸಾರಾಂಶ

ಹಲವು ಬಾರಿ ಮುಂದೂಡಲ್ಪಟ್ಟ ಭಾರತೀಯ ಶುಭಾಂಶು ಶುಕ್ಲಾ ಅವರ ಅಂತರಿಕ್ಷ ಯಾನ ಬುಧವಾರ ತಡರಾತ್ರಿ ವೇಳೆಗೆ ಕೈಗೂಡುವ ನಿರೀಕ್ಷೆ ಇದೆ. ಶುಕ್ಲಾ ಸೇರಿದಂತೆ ನಾಲ್ವರನ್ನು ಹೊತ್ತ ಅಮೆರಿಕದ ಆ್ಯಕ್ಸಿಯೋಂ ನೌಕೆಯನ್ನು ಭಾರತೀಯ ಕಾಲಮಾನ ಬುಧವಾರ ಮಧ್ಯಾಹ್ನ 12 ಗಂಟೆಗೆ ಉಡ್ಡಯನ ಮಾಡಲು ನಿರ್ಧರಿಸಲಾಗಿದೆ.

ಇಂದು ಮಧ್ಯಾಹ್ನ 12ಕ್ಕೆ ಆ್ಯಕ್ಸಿಯೋಂ ನೌಕೆ ಉಡ್ಡಯನದ ಪ್ರಯತ್ನ

ಭಾರತೀಯ ಪ್ರಜೆಯೊಬ್ಬರು ಮೊದಲ ಬಾರಿ ಅಂತರಿಕ್ಷ ಕೇಂದ್ರಕ್ಕೆ ಲಗ್ಗೆ

ಶುಕ್ಲಾ ಜತೆಗೆ ಇನ್ನೂ 3 ಗಗನಯಾತ್ರಿಗಳಿಂದ ಬಾಹ್ಯಾಕಾಶ ಯಾನ

28 ಗಂಟೆ ಪ್ರಯಾಣದ ಬಳಿಕ ಗುರುವಾರ ಸಂಜೆ ವೇಳೆಗೆ ಐಎಸ್‌ಎಸ್‌ಗೆ

14 ದಿನ ಅಂತರಿಕ್ಷ ವಾಸ । ಐಎಸಎಸ್‌ನಲ್ಲಿ 60 ಪ್ರಯೋಗಗಳು

==

ನವದೆಹಲಿ: ಹಲವು ಬಾರಿ ಮುಂದೂಡಲ್ಪಟ್ಟ ಭಾರತೀಯ ಶುಭಾಂಶು ಶುಕ್ಲಾ ಅವರ ಅಂತರಿಕ್ಷ ಯಾನ ಬುಧವಾರ ತಡರಾತ್ರಿ ವೇಳೆಗೆ ಕೈಗೂಡುವ ನಿರೀಕ್ಷೆ ಇದೆ. ಶುಕ್ಲಾ ಸೇರಿದಂತೆ ನಾಲ್ವರನ್ನು ಹೊತ್ತ ಅಮೆರಿಕದ ಆ್ಯಕ್ಸಿಯೋಂ ನೌಕೆಯನ್ನು ಭಾರತೀಯ ಕಾಲಮಾನ ಬುಧವಾರ ಮಧ್ಯಾಹ್ನ 12 ಗಂಟೆಗೆ ಉಡ್ಡಯನ ಮಾಡಲು ನಿರ್ಧರಿಸಲಾಗಿದೆ.

ಈ ಹಿಂದೆ ತಾಂತ್ರಿಕ ಮತ್ತು ಹವಾಮಾನ್ಯ ವೈಪರೀತ್ಯದ ಕಾರಣ ಉಡ್ಡಯನವನ್ನು ಹಲವು ಬಾರಿ ಮುಂದೂಡಲಾಗಿತ್ತು. ಆದರೆ ಇದೀಗ ಸೂಕ್ತ ಹವಾಮಾನ ಮತ್ತು ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ 12.01ಕ್ಕೆ ನೌಕೆ ಉಡ್ಡಯನಕ್ಕೆ ನಿರ್ಧರಿಸಲಾಗಿದೆ. ನೌಕೆ ಗುರುವಾರ ಸಂಜೆ 4.30ರವೇಳೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಲಿದೆ ಎಂದು ನಾಸಾ ಮಂಗಳವಾರ ಮಾಹಿತಿ ನೀಡಿದೆ.

ಒಂದು ವೇಳೆ ಬುಧವಾರ ಉಡ್ಡಯನ ಸಾಧ್ಯವಾದರೆ, 41 ವರ್ಷಗಳ ಬಳಿಕ ಅಂತರಿಕ್ಷ ಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುತ್ತಿರುವ ಮೊದಲ ಭಾರತೀಯ ಎಂಬ ದಾಖಲೆಗೆ ಶುಕ್ಲಾ ಪಾತ್ರವಾಗಲಿದ್ದಾರೆ.

‘ಆ್ಯಕ್ಸಿಯೋಂ-4’ ಯೋಜನೆಯ ಭಾಗವಾಗಿ ಭಾರತೀಯ ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್‌, ಪೋಲೆಂಡ್‌ನ ಸ್ಲವೋಝ್‌ ಉಝ್‌ನಾಸ್ಕಿ, ಹಂಗರಿಯ ಟಿಬರ್‌ ಕಪು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸೆಕ್ಸ್‌ನ ಫಾಲ್ಕನ್‌ 9 ರಾಕೆಟ್‌ನಲ್ಲಿ ಐಎಸ್‌ಎಸ್‌ಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಇವರೆಲ್ಲಾ 14 ದಿನಗಳ ಕಾಲ ಅಲ್ಲೇ ಇದ್ದು 60 ರೀತಿಯ ವಿವಿಧ ಪ್ರಯೋಗ ನಡೆಸಲಿದ್ದಾರೆ. ಇದರಲ್ಲಿ ಭಾರತದ ಪರವಾಗಿ ಶುಕ್ಲಾ ನಡೆಸುವ 7 ಪ್ರಯೋಗ ಕೂಡಾ ಸೇರಿದೆ. ತಮ್ಮ ಪ್ರಯಾಣದ ವೇಳೆ ಮೈಸೂರು ಹಲ್ವಾ, ಮಾವಿನ ಹಣ್ಣಿನ ರಸವನ್ನು ಐಎಸ್‌ಎಸ್‌ನ ಸಹಯೋಗಿಗಳಿಗಾಗಿ ಕೊಂಡೊಯ್ಯಲಿದ್ದಾರೆ.

ಈ ಹಿಂದೆ 1984ರಲ್ಲಿ ರಾಕೇಶ್‌ ಶರ್ಮಾ, ರಷ್ಯಾದ ಸೂಯೆಜ್‌ ನೌಕೆಯಲ್ಲಿ ಅಂತರಿಕ್ಷ ಪ್ರವಾಸ ಕೈಗೊಂಡು ಇತಿಹಾಸ ನಿರ್ಮಿಸಿದ್ದರು. ಇದಾದ ನಂತರ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ಕಲ್ಪನಾ ಚಾವ್ಲಾ ಬಾಹ್ಯಾಕಾಶ ಯಾನ ನಡೆಸಿದ್ದರು. ಆದರೆ ಅವರು ಭಾರತೀಯ ಮೂಲದ ಅಮೆರಿಕ ಪ್ರಜೆಗಳೇ ಹೊರತು ಭಾರತೀಯ ಪ್ರಜೆ ಅಲ್ಲ. ಹೀಗಾಗಿ ಶರ್ಮಾ ನಂತರ ನಭಕ್ಕೆ ಜಿಗಿಯಲಿರುವ ಮೊದಲ ಭಾರತೀಯ ಎಂಬ ಕೀರ್ತಿ ಶುಕ್ಲಾಗೆ ದೊರಕಲಿದೆ. ಶುಕ್ಲಾರನ್ನು ಈ ಪ್ರಯೋಗಕ್ಕೆ ಕಳುಹಿಸಲು ಭಾರತ ಸರ್ಕಾರ ಅಂದಾಜು 500 ಕೋಟಿ ರು. ವೆಚ್ಚ ಮಾಡಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ