ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಗ್ಯಾಸ್‌ ಟ್ಯಾಂಕರ್‌ ಸ್ಫೋಟ : 30 ವಾಹನಕ್ಕೆ ಬೆಂಕಿ!

KannadaprabhaNewsNetwork |  
Published : Dec 21, 2024, 01:18 AM ISTUpdated : Dec 21, 2024, 04:34 AM IST
ಜೈಪುರ | Kannada Prabha

ಸಾರಾಂಶ

ಗ್ಯಾಸ್‌ ಟ್ಯಾಂಕರ್‌ ಒಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ ಭೀಕರ ಅಗ್ನಿ ಅವಘಡ ಸಂಭವಿಸಿದ ಘಟನೆ ಶುಕ್ರವಾರ ಬೆಳಗ್ಗೆ ರಾಜಸ್ಥಾನದ ಜೈಪುರ-ಅಜ್ಮೇರ್‌ ಹೆದ್ದಾರಿಯ ಭಂಕ್ರೋಟಾ ಎಂಬಲ್ಲಿ ನಡೆದಿದೆ.

ಜೈಪುರ: ಗ್ಯಾಸ್‌ ಟ್ಯಾಂಕರ್‌ ಒಂದು ಹಲವು ವಾಹನಗಳಿಗೆ ಡಿಕ್ಕಿ ಹೊಡೆದು ಸ್ಫೋಟಗೊಂಡ ಪರಿಣಾಮ ಭೀಕರ ಅಗ್ನಿ ಅವಘಡ ಸಂಭವಿಸಿದ ಘಟನೆ ಶುಕ್ರವಾರ ಬೆಳಗ್ಗೆ ರಾಜಸ್ಥಾನದ ಜೈಪುರ-ಅಜ್ಮೇರ್‌ ಹೆದ್ದಾರಿಯ ಭಂಕ್ರೋಟಾ ಎಂಬಲ್ಲಿ ನಡೆದಿದೆ. ಈ ದುರಂತದಲ್ಲಿ 30 ವಾಹನಗಳು ಹೊತ್ತಿ ಉರಿದಿದ್ದು, 11 ಮಂದಿ ಸಾವನ್ನಪ್ಪಿ, 35 ಜನ ಗಾಯಗೊಂಡಿದ್ದಾರೆ

ಕೆಲವರು ವಾಹನದೊಳಗೇ ಸುಟ್ಟು ಹೋಗಿರುವ ಶಂಕೆಯಿದ್ದು, ಸಾವು-ನೋವು ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅಲ್ಲದೆ ಗಾಯಾಳು 35 ಜನರಲ್ಲಿ ಅರ್ಧದಷ್ಟು ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸುಮಾರು 25 ಆ್ಯಂಬುಲೆನ್ಸ್‌ಗಳಲ್ಲಿ ಎಸ್‌ಎಂಎಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಹೇಗಾಯಿತು?:ಶುಕ್ರವಾರ ಬೆಳಗ್ಗೆ 5:30ರ ಸುಮಾರಿಗೆ ಜೈಪುರ- ಅಜ್ಮೇರ್‌ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಎಲ್‌ಪಿಜಿ ಟ್ಯಾಂಕರ್‌ವೊಂದು ಹಲವು ವಾಹನಗಳಿಗೆ ಡಿಕ್ಕಿಯಾಗಿದೆ. ಇದರಿಂದಾಗಿ ಬೆಂಕಿ ಭುಗಿಲೆದ್ದಿದ್ದು, ಎಲ್ಲೆಲ್ಲೂ ದಟ್ಟ ಹೊಗೆ ಆವರಿಸಿಸಿದೆ. ಈ ಘಟನೆ ಸಿಸಿಟೀವಿ ದೃಶ್ಯಗಳಲ್ಲಿ ಸೆರೆಯಾಗಿದೆ.

ಈ ಬೆಂಕಿ ಹತ್ತಿರದಲ್ಲೇ ಸಾಗುತ್ತಿದ್ದ ಸುಮಾರು 30 ವಾಹನಗಳು ಹಾಗೂ ಹತ್ತಿರದಲ್ಲಿದ್ದ ಮನೆಗಳಿಗೆ ಹಬ್ಬಿದ್ದು, ಆ ವಾಹನಗಳಲ್ಲಿದ್ದ ಹಾಗೂ ಮನೆಗಳಲ್ಲಿದ್ದ ಹಲವರು ಸಜೀವ ದಹನವಾಗಿರುವ ಶಂಕೆಯಿದೆ. ಘಟನೆ ವೇಳೆ ಟ್ಯಾಂಕರ್‌ ಹಿಂದಿನಿಂದ ಸ್ಲೀಪರ್‌ ಬಸ್‌ ಒಂದು ಬರುತ್ತಿದ್ದು, ಅದರಲ್ಲಿದ್ದವರ ಮಾಹಿತಿ ಕಲೆಹಾಕಲಾಗುತ್ತಿದೆ.300 ಮೀ.ನಷ್ಟು ವ್ಯಾಪಿಸಿದ ಬೆಂಕಿ:ಹೆದ್ದಾರಿಯ ಸುಮಾರು 300 ಮೀ. ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಸುಟ್ಟ ವಾಹನಗಳನ್ನು ಪರಿಶೀಲಿಸಿ ತೆರವುಗೊಳಿಸಲಾಗಿದೆ.ಸಿಎಂ ದೌಡು:

ರಾಜಸ್ಥಾನ ಸಿಎಂ ಭಜನ್‌ಲಾಲ್‌ ಶರ್ಮಾ ಹಾಗೂ ಆರೋಗ್ಯ ಸಚಿವ ಗಜೇಂದ್ರ ಸಿಂಗ್‌ ಖಿಮಸರ್‌ ಕೂಡಲೇ ಎಸ್‌ಎಂಎಸ್‌ ಆಸ್ಪತ್ರೆಗೆ ದೌಡಾಯಿಸಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ವೈದ್ಯರು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.

‘ಆಸ್ಪತ್ರೆಗೆ ದಾಖಲಾದವರಲ್ಲಿ ಅರ್ಧದಷ್ಟು ಜನರ ಸ್ಥಿತಿ ಅತಿ ಗಂಭೀರವಾಗಿದೆ. ಸ್ಥಿತಿ ನಿಭಾಯಿಸಲು ಎಲ್ಲಾ ವೈದ್ಯರು, ನರ್ಸ್‌ಗಳನ್ನು ಕರೆಸಲಾಗಿದೆ. ಜತೆಗೆ ಗಾಯಾಳುಗಳಿಗಾಗಿ ಇನ್ನೊಂದು ವಾರ್ಡ್‌ ಕೂಡ ರಚಿಸಲಾಗಿದೆ. ಕೆಲವರಿಗೆ ಹತ್ತಿರದ ಆಸ್ಪತ್ರೆಗಳಲ್ಲೇ ಪ್ರಾರ್ಥಮಿಕ ಚಿಕಿತ್ಸೆ ನೀಡಲಾಯಿತು’ ಎಂದು ಖಿಮಸರ್‌ ತಿಳಿಸಿದ್ದಾರೆ.

ಘಟನೆಗೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಪಾಲ ಹರಿಭಾವೂ ಭಾಗಡೆ, ಮಾಜಿ ಸಿಎಂ ಅಶೋಕ್‌ ಗೆಹ್ಲೋಟ್‌ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.

ಕಣ್ಣೆದುರೇ ವ್ಯಕ್ತಿ ದಹಿಸಿದ : ಪ್ರತ್ಯಕ್ಷದರ್ಶಿ

- ಕೆಲವರು ಹಾರಿ ಬಚಾವಾದರು, ಉಳಿದವರು ಸುಟ್ಟುಹೋದರು

‘ಬೆಳಗ್ಗೆ 5:30 ಸುಮಾರಿಗೆ ಭಯಂಕರ ಸ್ಫೋಟದ ಸದ್ದು ಕೇಳಿ ಎಚ್ಚರವಾಯಿತು. ಸಾಧ್ಯವಾದವರು ಬಸ್‌ನಿಂದ ಹೊರಗೆ ಹಾರಿ ಬಚಾವಾದರು. ಉಳಿದವರು ಒಳಗೇ ಸುಟ್ಟುಹೋದರು. ಹೆದ್ದಾರಿಯ 100ರಿಂದ 200 ಮೀ. ಸುಟ್ಟುಹೋಗಿದೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

ಸ್ಲೀಪರ್‌ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರು ಮಾತನಾಡಿ, ‘ಇದ್ದಕ್ಕಿದ್ದಂತೆ ಬಸ್‌ ನಿಂತಾಗ ಸುತ್ತಲೂ ಬೆಂಕಿ ಕಾಣಿಸುತ್ತಿತ್ತು. ಬಸ್‌ನ ಬಾಗಿಲು ಒಳಗಿನಿಂದ ಲಾಕ್‌ ಆಗಿದ್ದ ಕಾರಣ ಕಿಟಕಿಯ ಗಾಜನ್ನು ಒಡೆದು ಹೊರಗೆ ಬಂದೆವು. 7ರಿಂದ 8 ಜನರೂ ನಮ್ಮೊಂದಿಗೆ ಹಾರಿದರು. ಒಂದಾದ ಮೇಲೊಂದು ಸ್ಫೋಟ ಸಂಭವಿಸುತ್ತಲೇ ಇತ್ತು. ಹತ್ತಿರದಲ್ಲೇ ಪೆಟ್ರೋಲ್‌ ಪಂಪ್‌ ಕೂಡ ಇತ್ತು’ ಎಂದರು.

ಈ ವೇಳೆ, ಮಕ್ಕಳನ್ನು ಕರೆತರಲು ಹೊರಟಿದ್ದ ಶಾಲಾ ವಾಹನದ ಚಾಲಕರೊಬ್ಬರು ಈ ಅವಘಡವನ್ನು ಕಣ್ಣಾರೆ ಕಂಡಿದ್ದು, ಮೈಗೆ ಬೆಂಕಿ ಹತ್ತಿದ್ದ ಒಬ್ಬ ವ್ಯಕ್ತಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದುದಕ್ಕೆ ಸಾಕ್ಷಿಯಾಗಿದ್ದಾಗಿ ಹೇಳಿದ್ದಾರೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ