ನವದೆಹಲಿ: ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದ ಸುತ್ತ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಿದ್ದ 3 ಕೊಳಗೇರಿಗಳ ನಿವಾಸಿಗಳಿಗೆ ಮಾ.6ರ ಒಳಗಾಗಿ ಜಾಗ ಖಾಲಿ ಮಾಡುವಂತೆ ನೋಟೀಸ್ ನೀಡಲಾಗಿದೆ. ಅವರಿಗೆ 45 ಕಿ.ಮೀ. ದೂರದಲ್ಲಿರುವ ಸಾವ್ದಾ ಘೇವ್ಡಾದಲ್ಲಿ ಪುನರ್ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಭಾಯಿ ರಾಮ್ ಕ್ಯಾಂಪ್, ಮಸ್ಜಿದ್ ಕ್ಯಾಂಪ್ ಮತ್ತು ಡಿಐಡಿ ಕ್ಯಾಂಪ್‌ಗಳು ಪ್ರಧಾನಿ ನಿವಾಸದಿಂದ ಕೆಲವೇ ಕಿ.ಮೀ. ದೂರದಲ್ಲಿವೆ. ಇವು ಸರ್ಕಾರಿ ಭೂಮಿಯಲ್ಲಿದ್ದುದರಿಂದ ಜಾಗ ಖಾಲಿ ಮಾಡುವಂತೆ ಕಳೆದ ವರ್ಷ ಅ.29ರಂದೇ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನೋಟೀಸ್ ಜಾರಿ ಮಾಡಿತ್ತು. ಆದರೆ ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಬಗ್ಗೆ ನ.13ರಂದು ಮಧ್ಯಂತರ ತೀರ್ಪು ನೀಡಿದ ಕೋರ್ಟ್, ಸುರಕ್ಷತಾ ವಿಧಾನಗಳನ್ನು ಪಾಲಿಸದೆ ಅರ್ಜಿದಾರರನ್ನು ಹೊರಹಾಕಬಾರದು ಎಂದು ಆದೇಶಿಸಿತ್ತು.
ಸರ್ಕಾರ ಖಾಲಿ ಮಾಡಲು ಮುಂದಾಗಿರುವ 3 ಕೊಳಗೇರಿಗಳ 717 ಕುಟುಂಬಗಳಿಗೆ 45 ಕಿ.ಮೀ. ದೂರದ ಸಾವ್ದಾ ಘೇವ್ಡಾದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಇವರು ಪುನರ್ವಸತಿಗೆ ಅರ್ಹರೇ ಎಂಬುದರ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.