ನಿಮಗಿಂತ ಜೆನ್‌ಝೀ ಕೊಡುಗೆ ಹೆಚ್ಚು: ದಾಸ್‌

ನವದೆಹಲಿ: ಸಿಜೆಪಿ ಪ್ರತಿಭಟನೆ ದೇಶದಲ್ಲಿ ಸಂಚಲನ ಸೃಷ್ಟಿಸಿರುವ ನಡುವೆಯೇ ನಟಿ, ಸಂಸದೆ ಕಂಗನಾ ರಣಾವತ್‌ ‘ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸಿದವರು ಬಳಸುತ್ತಿರುವ ಭಾಷೆ, ಅವರು ನಡೆದುಕೊಳ್ಳುತ್ತಿರುವ ರೀತಿ ಎಲ್ಲವೂ ಅಸಹ್ಯಕರವಾಗಿದೆ. ಅವರಿಗೆ ಯಾರು ಜನ್ಮ ನೀಡಿ ಬೆಳೆಸುತ್ತಿದ್ದಾರೆ?’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಆದರೆ ಇದಕ್ಕೆ ಜಿರಳೆ ಪಕ್ಷದ ನಾಯಕ ಸೌರವ್‌ ದಾಸ್‌ ತಿರುಗೇಟು ನೀಡಿದ್ದು, ‘ನಿಮಗಿಂತ ಜೆನ್‌ಝೀಗಳು ದೇಶಕ್ಕೆ ಹೆಚ್ಚು ಕೊಡುಗೆ ನೀಡಿದ್ದಾರೆ. ನೀವೇನು ಕೊಡುಗೆ ನೀಡಿದ್ದೀರಿ ಎಂಬುದು ನೀವು ಸಂಸದರಾಗಿರುವ ಹಿಮಾಚಲ ಪ್ರದೇಶದ ಜನರಿಗೆ ಗೊತ್ತಿದೆ’ ಎಂದು ಕಂಗನಾರನ್ನು ಒಮ್ಮೆ ಜನ ತರಾಟೆಗೆ ತೆಗೆದುಕೊಂಡ ಪ್ರಸಂಗ ಉಲ್ಲೇಖಿಸ ಚಾಟಿ ಬೀಸಿದ್ದಾರೆ.

ಕಂಗನಾ ಹೇಳಿದ್ದೇನು?:

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಕೆಲ ವಿಡಿಯೋಗಳಿಗೆ ಆಕ್ಷೇಪಿಸಿರುವ ಕಂಗನಾ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ‘ಒಂದೇ ಸ್ಥಳದಲ್ಲಿ ಇಷ್ಟೊಂದು ಮಟ್ಟಿಗಿನ ಕೊಳಕನ್ನು ನನ್ನ ಜೀವನದಲ್ಲಿ ಇದುವರೆಗೆ ನೋಡಿಲ್ಲ. ಅವರು ಮಾತಾಡುವ ರೀತಿ, ಅವರು ಬಳಸುತ್ತಿರುವ ಭಾಷೆ ಎಲ್ಲವೂ ಪ್ರತಿಯೊಂದು ಫ್ರೇಮ್‌ನಲ್ಲಿಯೂ ಅಸಹ್ಯಕರವಾಗಿದೆ. ಛೇ ಯಾರು ಇವರಿಗೆ ಜನ್ಮ ನೀಡಿ ಬೆಳೆಸುತ್ತಿದ್ದಾರೆ?’ ಎಂದು ಪಶ್ನಿಸಿದ್ದಾರೆ.


‘ನೀವು ನಿಮ್ಮನ್ನು ಜಿರಳೆಗಳು ಎಂದು ಕರೆದುಕೊಳ್ಳುತ್ತೀರಿ ಮತ್ತು ಅವುಗಳಂತೆಯೇ ಕಾಣುತ್ತೀರಿ, ಹಾಗೆಯೇ ವರ್ತಿಸುತ್ತೀರಿ. ಅಲ್ಲಿ ಯಾವುದೇ ವಿರೋಧಾಭಾಸ ಅಥವಾ ಹೋಲಿಕೆ ಇಲ್ಲ, ಕೇವಲ ನಿಮ್ಮ ಕೊಳಕು, ಕಸವನ್ನು ಜಗತ್ತಿಗೆ ಹರಡುತ್ತಿದ್ದೀರಿ’ ಎಂದು ಹೇಳಿದ್ದಾರೆ,