ಭಾರತದ 8 ಮಾಜಿ ನೌಕಾ ಸಿಬ್ಬಂದಿಗೆ ಕತಾರ್‌ ಗಲ್ಲು!

KannadaprabhaNewsNetwork | Updated : Oct 27 2023, 12:31 AM IST

ಸಾರಾಂಶ

ಇಸ್ರೇಲ್‌ ಪರ ಬೇಹುಗಾರಿಕೆ ಆರೋಪದಡಿ ಶಿಕ್ಷೆ. ಭಾರತಕ್ಕೆ ತಿಳಿಸದೇ ವಿಚಾರಣೆ ಮುಗಿಸಿ ತೀರ್ಪು.
ರಕ್ಷಿಸಲು ಎಲ್ಲ ಯತ್ನ ಕತಾರ್ ನ್ಯಾಯಾಲಯದ ತೀರ್ಪಿನಿಂದ ಆಘಾತವಾಗಿದೆ. ತೀರ್ಪಿನ ಪ್ರತಿಗಾಗಿ ಕಾಯುತ್ತಿದ್ದೇವೆ. ಎಂಟೂ ಮಂದಿಯ ಕುಟುಂಬ ಹಾಗೂ ಕಾನೂನು ತಂಡದ ಜತೆ ಸಂಪಕ್ದಲ್ಲಿದ್ದೇವೆ. ಭಾರತೀಯರನ್ನು ರಕ್ಷಿಸಲು ಎಲ್ಲ ಆಯ್ಕೆಗಳನ್ನೂ ಪರಿಶೀಲಿಸಲಾಗುತ್ತಿದೆ. - ಭಾರತದ ವಿದೇಶಾಂಗ ಸಚಿವಾಲಯ ದೋಹಾ/ನವದೆಹಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಕತಾರ್‌ನಲ್ಲಿ ಇಸ್ರೇಲ್‌ ಪರ ಗೂಢಚರ್ಯೆ ನಡೆಸಿದ ಆರೋಪದಡಿ ಎಂಟು ಮಂದಿ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಿಗೆ ಕತಾರ್‌ನ ನ್ಯಾಯಾಲಯವೊಂದು ಗಲ್ಲು ಶಿಕ್ಷೆ ವಿಧಿಸಿದೆ. ತೀರ್ಪಿಗೆ ಆಘಾತ ವ್ಯಕ್ತಪಡಿಸಿರುವ ಭಾರತ ಸರ್ಕಾರ, ಭಾರತೀಯರನ್ನು ರಕ್ಷಿಸಲು ಎಲ್ಲಾ ಕಾನೂನು ಆಯ್ಕೆಗಳನ್ನು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದೆ. ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿಗಳಾದ ಕ್ಯಾಪ್ಟನ್‌ ನವತೇಜ್‌ ಸಿಂಗ್‌ ಗಿಲ್‌, ಕ್ಯಾಪ್ಟನ್‌ ಬೀರೇಂದ್ರ ಕುಮಾರ್‌ ವರ್ಮಾ, ಕ್ಯಾಪ್ಟನ್‌ ಸೌರಭ್‌ ವಸಿಷ್ಠ, ಕಮಾಂಡರ್‌ ಅಮಿತ್‌ ನಾಗಪಾಲ್‌, ಕಮಾಂಡರ್‌ ಪೂರ್ಣೇಂದು ತಿವಾರಿ, ಕಮಾಂಡರ್‌ ಸುಗುಣಾಕರ್‌ ಪಾಕಳ, ಕಮಾಂಡರ್‌ ಸಂಜೀವ್‌ ಗುಪ್ತಾ ಹಾಗೂ ಸೇಲರ್‌ ರಾಗೇಶ್‌ ವಿರುದ್ಧ ಗುರುವಾರ ಗಲ್ಲುಶಿಕ್ಷೆಯ ತೀರ್ಪು ಹೊರಬಿದ್ದಿದೆ ಎನ್ನಲಾಗಿದೆ. ಆದರೆ ಈ ಹೆಸರುಗಳನ್ನು ಕತಾರ್‌ ಅಧಿಕೃತವಾಗಿ ಖಚಿತಪಡಿಸಿಲ್ಲ. ಕತಾರ್‌ನ ಸೇನೆಯ ಯೋಧರಿಗೆ ತರಬೇತಿ ಮತ್ತು ಇತರೆ ವಿಷಯದಲ್ಲಿ ಅಲ್‌ ದಹ್ರಾ ಎಂಬ ಕಂಪನಿ ಸೇವೆ ನೀಡುತ್ತದೆ. ಈ ಕಂಪನಿಯಲ್ಲಿ ನೌಕರರಾಗಿದ್ದ 8 ಭಾರತೀಯರನ್ನು ಕಳೆದ ವರ್ಷದ ಆಗಸ್ಟ್‌ನಲ್ಲಿ ಕತಾರ್‌ ಪೊಲೀಸರು ಬಂಧಿಸಿದ್ದರು. ಬಳಿಕ ಭಾರತ ಸರ್ಕಾರಕ್ಕಾಗಲೀ, ಭಾರತದಲ್ಲಿರುವ ಅವರ ಕುಟುಂಬಕ್ಕಾಗಲೀ ಯಾವುದೇ ಮಾಹಿತಿ ನೀಡದೆ ಕೋರ್ಟ್‌ನಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇಸ್ರೇಲ್‌ ಪರ ಗೂಢಚರ್ಯೆ ಆರೋಪ: ಗಲ್ಲುಶಿಕ್ಷೆಗೆ ಗುರಿಯಾದ ಎಂಟು ಮಂದಿಯ ವಿರುದ್ಧ ಕತಾರ್‌ ಪೊಲೀಸರು ಇಸ್ರೇಲ್‌ನ ಪರ ಗೂಢಚರ್ಯೆ ನಡೆಸಿದ ಆರೋಪ ಹೊರಿಸಿದ್ದರು. ಅದನ್ನು ಸಾಬೀತುಪಡಿಸಲು ಅವರ ಬಳಿ ಎಲೆಕ್ಟ್ರಾನಿಕ್‌ ಸಾಕ್ಷ್ಯಗಳಿವೆ ಎಂದು ಪತ್ರಿಕೆಯೊಂದು ಈ ಹಿಂದೆ ವರದಿ ಮಾಡಿತ್ತು. ಇವರೆಲ್ಲರೂ ದಹ್ರಾ ಗ್ಲೋಬಲ್‌ ಟೆಕ್ನಾಲಜೀಸ್‌ನಲ್ಲಿ ನೌಕರಿ ಮಾಡುತ್ತಿದ್ದರು. ಇಟಲಿ ಮೂಲದ ತಂತ್ರಜ್ಞಾನ ಬಳಸಿ ರಹಸ್ಯವಾಗಿ ದಾಳಿ ನಡೆಸುವ ಸಬ್‌ಮರೀನ್‌ಗಳನ್ನು ಉತ್ಪಾದಿಸುವ ಯೋಜನೆಯಲ್ಲಿ ಈ ಜನರು ತೊಡಗಿದ್ದರು. ಈ ವೇಳೆ ಇವರೆಲ್ಲಾ ಗೂಢಚರ್ಯೆ ನಡೆಸಿ ಕತಾರ್‌ ಸೇನೆಯ ಕುರಿತ ರಹಸ್ಯ ಮಾಹಿತಿಗಳನ್ನು ಇಸ್ರೇಲ್‌ಗೆ ರವಾನಿಸಿದ್ದಾರೆ ಎಂಬ ಆರೋಪ ಹೊರಿಸಲಾಗಿದೆ. ಕಾನೂನು ಹೋರಾಟ ನಡೆಸುತ್ತೇವೆ-ಭಾರತ: ‘ಕತಾರ್‌ನ ನ್ಯಾಯಾಲಯ ನೀಡಿರುವ ತೀರ್ಪು ಆಘಾತ ತಂದಿದೆ. ವಿಸ್ತೃತ ಆದೇಶದ ಪ್ರತಿಗಾಗಿ ಕಾಯುತ್ತಿದ್ದೇವೆ. ಆರೋಪಿಗಳ ಕುಟುಂಬದ ಜೊತೆ ಹಾಗೂ ಕಾನೂನು ತಂಡದ ಜೊತೆಗೆ ಸಂಪರ್ಕದಲ್ಲಿದ್ದೇವೆ. ಗಲ್ಲುಶಿಕ್ಷೆ ಎದುರಿಸುತ್ತಿರುವ ಭಾರತೀಯರನ್ನು ರಕ್ಷಿಸಲು ಎಲ್ಲಾ ಕಾನೂನು ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದೇ ವೇಳೆ ಸಾಧ್ಯವಿರುವ ಎಲ್ಲಾ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿ ಭಾರತೀಯರ ಬಿಡುಗಡೆಗೆ ಸರ್ಕಾರ ಮುಂದಾಗಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ. ಯಾಕೆ ಶಿಕ್ಷೆ?

- ಎಂಟೂ ಮಂದಿ ಕತಾರ್‌ನ ಅಲ್‌ ದಹ್ರಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು

- ಕತಾರ್‌ ಸೇನೆ ಯೋಧರಿಗೆ ತರಬೇತಿ, ಮತ್ತಿತರೆ ಸೇವೆ ನೀಡುವ ಕಂಪನಿ ಇದು

- ಇಟಲಿ ತಂತ್ರಜ್ಞಾನ ಬಳಸಿ ದಾಳಿ ನಡೆಸುವ ಸಬ್‌ಮರೀನ್‌ ಉತ್ಪಾದಿಸುತ್ತಿದ್ದರು

- ಈ ವೇಳೆ ಕತಾರ್‌ ಸೇನೆಯ ರಹಸ್ಯ ಮಾಹಿತಿಯನ್ನು ಇಸ್ರೇಲ್‌ಗೆ ರವಾನಿಸಿದ ಆರೋಪ

- ಕಳೆದ ವರ್ಷ ಆಗಸ್ಟ್‌ನಲ್ಲೇ 8 ಭಾರತೀಯ ಮಾಜಿ ನೌಕಾ ಅಧಿಕಾರಿಗಳ ಬಂಧನ

- ಭಾರತ ಸರ್ಕಾರಕ್ಕಾಗಲೀ, ಭಾರತೀಯರ ಕುಟುಂಬಕ್ಕಾಗಲೀ ಮಾಹಿತಿ ನೀಡದೆ ವಿಚಾರಣೆ

- ಇದೀಗ ನ್ಯಾಯಾಲಯದಿಂದ ತೀರ್ಪು ಪ್ರಕಟ. ಎಂಟು ಮಂದಿಗೆ ಮರಣದಂಡನೆ ಘೋಷಣೆ

Share this article