ನವದೆಹಲಿ: ಟೈಮ್ಸ್ ಹೈಯರ್ ಎಜುಕೇಶನ್ ಬಿಡುಗಡೆ ಮಾಡಿರುವ 2024ನೇ ಸಾಲಿನ ವಿಷಯವಾರು ಶೈಕ್ಷಣಿಕ ಸಂಸ್ಥೆಗಳ ಗುಣಮಟ್ಟದ ರ್‍ಯಾಂಕಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿಯು ಹಲವಾರು ವಿಷಯಗಳಲ್ಲಿ ರ್‍ಯಾಂಕ್ ಪಡೆದುಕೊಂಡಿದೆ. ಕಂಪ್ಯೂಟರ್ ಸೈನ್ಸ್, ಎಂಜಿನಿಯರಿಂಗ್, ಅರ್ಥಶಾಸ್ತ್ರ, ಕಾನೂನು ಮತ್ತು ಭೌತಿಕ ವಿಜ್ಞಾನ ಸೇರಿದಂತೆ ಒಟ್ಟು 11 ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಈ ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ ಐಐಎಸ್‌ಸಿಯು ಇಂಜಿನಿಯರಿಂಗ್‌ನಲ್ಲಿ 101 ರಿಂದ 125, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ 101 ರಿಂದ 115, ಲೈಫ್ ಸೈನ್ಸ್ ವಿಷಯದಲ್ಲಿ 201 ರಿಂದ 250, ಭತಿಕ ವಿಜ್ಞಾನದಲ್ಲಿ 201 ರಿಂದ 250ನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಈ ಸಮೀಕ್ಷೆಯಲ್ಲಿ ದೇಶವನ್ನು ಅತಿ ಹೆಚ್ಚು ಬಾರಿ ಪ್ರತಿನಿಧಿಸುವ ಮೂಲಕ ದೇಶದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಕ್ಲಿನಿಕಲ್ ಮತ್ತು ಆರೋಗ್ಯ ವಿಭಾಗದಲ್ಲಿ ಕರ್ನಾಟಕದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ 201 ರಿಂದ 250ರ ಸ್ಥಾನದಲ್ಲಿದೆ. ಇದರೊಂದಿಗೆ ದೆಹಲಿ ಸೇರಿದಂತೆ ಅನೇಕ ವಿವಿಗಳು ಹಲವು ವಿಷಯಗಳಲ್ಲಿ ರ್‍ಯಾಂಕಿಂಗ್ ಪಡೆದುಕೊಂಡಿವೆ. ಒಟ್ಟಾರೆಯಾಗಿ 11ರಲ್ಲಿ 9 ವಿಷಯಗಳಲ್ಲಿ ಅಮೆರಿಕದ ಶೈಕ್ಷಣಿಕ ಸಂಸ್ಥೆಗಳೇ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ಉಳಿದೆರೆಡು ವಿಷಯದಲ್ಲಿ ಬ್ರಿಟನ್ನಿನ ಆಕ್ಸ್‌ಫರ್ಡ್ ವಿವಿ ಸ್ಥಾನ ಪಡೆದುಕೊಂಡಿದೆ.