ಭಾರತೀಯ ಶುಕ್ಲಾ ಅಂತೂ ಬಾಹ್ಯಾಕಾಶಕ್ಕೆ ನೆಗೆತ

KannadaprabhaNewsNetwork |  
Published : Jun 25, 2025, 11:47 PM ISTUpdated : Jun 26, 2025, 04:52 AM IST
ಶುಕ್ಲಾ | Kannada Prabha

ಸಾರಾಂಶ

ಹಲವು ಅಡೆತಡೆಗಳು, 6 ಮುಂದೂಡಿಕೆಗಳ ನಂತರ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರ ಬಾಹ್ಯಾಕಾಶ ಯಾನ ಕೊನೆಗೂ ಬುಧವಾರ ಆರಂಭವಾಗಿದೆ.

ನವದೆಹಲಿ/ಫ್ಲೊರಿಡಾ :  ಹಲವು ಅಡೆತಡೆಗಳು, 6 ಮುಂದೂಡಿಕೆಗಳ ನಂತರ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರ ಬಾಹ್ಯಾಕಾಶ ಯಾನ ಕೊನೆಗೂ ಬುಧವಾರ ಆರಂಭವಾಗಿದೆ. ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇವರನ್ನು ಹೊತ್ತ ಸ್ಪೇಸ್‌ ಎಕ್ಸ್‌ನ ಫಾಲ್ಕನ್‌-9 ರಾಕೆಟ್‌, ಭಾರತೀಯ ಕಾಲಮಾನ ಮಧ್ಯಾಹ್ನ 12.01ಕ್ಕೆ ನಭಕ್ಕೆ ಚಿಮ್ಮಿದೆ.

ಶುಕ್ಲಾ, 41 ವರ್ಷಗಳ ಬಳಿಕ ಅಂತರಿಕ್ಷ ಯಾನ ಕೈಗೊಳ್ಳುತ್ತಿರುವ ಮೊದಲ ಭಾರತೀಯ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್‌ಎಸ್‌) ತೆರಳುತ್ತಿರುವ ಮೊದಲ ಭಾರತೀಯ ಎಂಬ ದಾಖಲೆಯನ್ನು ಶುಕ್ಲಾ ನಿರ್ಮಿಸಿದ್ದಾರೆ. 1984ರಲ್ಲಿ ಭಾರತೀಯ ರಾಕೇಶ್‌ ಶರ್ಮಾ, ರಷ್ಯಾದ ಸೂಯೆಜ್‌ ನೌಕೆಯಲ್ಲಿ ಅಂತರಿಕ್ಷಕ್ಕೆ ಹೋಗಿದ್ದರು.

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಕೂಡ ಈ ಯೋಜನೆಯ ಭಾಗವಾಗಿದ್ದು, ಶುಕ್ಲಾ ಯಶಸ್ವಿ ಯಾನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ದೇಶದ ಜನತೆ ಹರ್ಷಿಸಿದ್ದಾರೆ.

ಇಂದು ಸಂಜೆ 4.30ಕ್ಕೆ ಐಎಸ್‌ಎಸ್‌ಗೆ:

ಶುಕ್ಲಾ ಸೇರಿ ನಾಲ್ವರ ಯಾನ ಬುಧವಾರ ಮಧ್ಯಾಹ್ನ 12.01ಕ್ಕೆ ಆರಂಭವಾಯಿತು. ಗಗನಯಾತ್ರಿಗಳು 28 ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ಗುರುವಾರ ಭಾರತೀಯ ಕಾಲಮಾನ ಸಂಜೆ ಸುಮಾರು 4.30ಕ್ಕೆ ಬಾಹ್ಯಾಕಾಶ ಕೇಂದ್ರಕ್ಕೆ ಡಾಕ್‌ (ಜೋಡಣೆ) ಆಗುವ ನಿರೀಕ್ಷೆ ಇದೆ. ಶುಕ್ಲಾ ಜತೆ ಅಮೆರಿಕದ ಪೆಗ್ಗಿ ವಿಟ್ಸನ್‌, ಪೋಲೆಂಡ್‌ನ ಸ್ಲವೋಝ್‌ ಉಝ್‌ನಾಸ್ಕಿ, ಹಂಗರಿಯ ಟಿಬರ್‌ ಕಪು ಈ ಯೋಜನೆಯ ಭಾಗವಾಗಿದ್ದಾರೆ.

ಇಸ್ರೋ ಪರ ಶುಕ್ಲಾ 7 ಪ್ರಯೋಗ:

ಇವರೆಲ್ಲ 14 ದಿನಗಳ ಕಾಲ ಐಎಸ್‌ಎಸ್‌ನಲ್ಲಿ ಇರಲಿದ್ದು, 60ಕ್ಕೂ ಅಧಿಕ ಪ್ರಯೋಗಗಳನ್ನು ಕೈಗೊಳ್ಳಲಿದ್ದಾರೆ. ಈ ಪೈಕಿ ಶುಭಾಂಶು ಶುಕ್ಲಾ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪರ 7 ಅಧ್ಯಯನ ನಡೆಸಲಿದ್ದಾರೆ. ಇವು ಭವಿಷ್ಯದಲ್ಲಿ ಭಾರತದ ಅಂತರಿಕ್ಷ ಯಾನಕ್ಕೆ ನೆರವಾಗಲಿವೆ. ಭವಿಷ್ಯದಲ್ಲಿ ಭಾರತ ಅಂತರಿಕ್ಷ ಯಾನ ಕೈಗೊಂಡರೆ ಶುಕ್ಲಾ ಅವರೇ ನೇತೃತ್ವ ವಹಿಸಿ ಮುಖ್ಯ ಗಗನಯಾನಿ ಆಗಲಿದ್ದಾರೆ.

ನಿಮಿಷದಲ್ಲಿ ಫಾಲ್ಕನ್‌ ವಾಪಸ್‌:

ಫಾಲ್ಕನ್‌-9 ರಾಕೆಟ್‌ ನಭಕ್ಕೆ ಚಿಮ್ಮಿದ 8 ನಿಮಿಷದಲ್ಲೇ, 4 ಬಾಹ್ಯಾಕಾಶಯಾತ್ರಿಗಳಿದ್ದ ಡ್ರಾಗನ್‌ ಕ್ಯಾಪ್ಸೂಲ್‌ನಿಂದ ಬೇರ್ಪಟ್ಟು ಭೂಮಿಗೆ ಸುರಕ್ಷಿತವಾಗಿ ಮರಳಿದೆ. ಫ್ಲೋರಿಡಾದ ಕೇಪ್ ಕೆನವೆರಲ್ ಸ್ಪೇಸ್ ಫೋರ್ಸ್ ಸ್ಟೇಷನ್‌ನಲ್ಲಿರುವ ಲ್ಯಾಂಡಿಂಗ್ ಜೋನ್ 1ರಲ್ಲಿ ಬಂದು ಇಳಿದಿದೆ. ಈ ಮೂಲಕ, ರಾಕೆಟ್‌ ಮರುಬಳಕೆಯ ಯತ್ನ ಕೂಡ ಯಶಸ್ಸು ಕಂಡಿದೆ. ಗಗನಯಾತ್ರಿಗಳು ಕಕ್ಷೆಯನ್ನು ತಲುಪುತ್ತಿದ್ದಂತೆ, ಅವರಿದ್ದ ಕ್ಯಾಪ್ಸೂಲ್‌ಗೆ ‘ಗ್ರೇಸ್‌’ ಎಂದು ಹೆಸರಿಟ್ಟಿದ್ದಾರೆ.

ಈ ಮೊದಲು ತಾಂತ್ರಿಕ ಸಮಸ್ಯೆ ಮತ್ತು ಹವಾಮಾನ್ಯ ವೈಪರೀತ್ಯದ ಕಾರಣ ಉಡ್ಡಯನವನ್ನು ಹಲವು ಬಾರಿ ಮುಂದೂಡಲಾಗಿತ್ತು. ಈಗ ಕೊನೆಗೂ 7ನೇ ಯತ್ನ ಯಶಸ್ವಿಯಾಗಿದೆ.

ಮೈಸೂರು ಹಲ್ವಾ ಒಯ್ದ ಶುಕ್ಲಾ: 

ಯಾನದ ವೇಳೆ ಮೈಸೂರಿನ ಸಿಎಫ್‌ಟಿಆರ್‌ಐ ಸಿದ್ಧಪಡಿಸಿರುವ ಹಲ್ವಾ ಮೊಸರನ್ನ, ಮಾವಿನ ರಸ, ಮಸಾಲೆಯುಕ್ತ ಹಂಗೇರಿಯನ್ ಕೆಂಪುಮೆಣಸಿನ ಚಟ್ನಿ, ಹುರಿದು ಫ್ರೀಜ್‌ ಮಾಡಿದ ಪೋಲಿಷ್ ಪೈರೋಗಿಯನ್ನು ಕೊಂಡೊಯ್ಯಲಾಗಿದೆ.

ಗಗನದಿಂದ ಭಾರತದ ಪ್ರಮುಖ ವ್ಯಕ್ತಿ ಜತೆ ಮಾತು!

ಶುಭಾಂಶು ಶುಕ್ಲಾ ಅಂತರಿಕ್ಷ ಕೇಂದ್ರಕ್ಕೆ ತಲುಪಿದ ನಂತರ ಭಾರತದ ಪ್ರಮುಖ ವ್ಯಕ್ತಿಯೊಬ್ಬರ ಜತೆ ವಿಡಿಯೋ ಸಂವಾದ ನಡೆಸಲಿದ್ದಾರೆ ಎಂದು ಮೂಲಗಲು ಹೇಳಿವೆ. ಈ ಹಿಂದೆ ರಾಕೇಶ್‌ ಶರ್ಮಾ ಗಗನಯಾನ ಮಾಡಿದ್ದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಜತೆ ವಿಡಿಯೋ ಸಂವಾದ ನಡೆಸಿದ್ದರು. ‘ಗಗನದಿಂದ ಭಾರತ ಹೇಗೆ ಕಾಣುತ್ತದೆ?’ ಎಂದು ಇಂದಿರಾ ಕೇಳಿದಾಗ ಶರ್ಮಾ, ‘ಸಾರೇ ಜಹಾಂ ಸೇ ಅಚ್ಛಾ’ ಎಂದು ಹೇಳಿ ಗಮನ ಸೆಳೆದಿದ್ದರು.

ಧಾರವಾಡ ಹೆಸರು ಕಾಳು, ಮೆಂತ್ಯ ನಭಕ್ಕೆ!

ಧಾರವಾಡ: ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್ -4 ಕಾರ್ಯಾಚರಣೆಯ ಯಶಸ್ವಿ ಉಡಾವಣೆಯನ್ನು ಜಗತ್ತು ಸಂಭ್ರಮಿಸುವಾಗ ಧಾರವಾಡದ ಕೃಷಿ ವಿಶ್ವವಿದ್ಯಾಲಯ ತನ್ನದೇ ಆದ ವಿಶಿಷ್ಟ ಮೈಲಿಗಲ್ಲನ್ನು ದಾಖಲಿಸುತ್ತಿದೆ. ಬಾಹ್ಯಾಕಾಶ ಆಧಾರಿತ ಪೌಷ್ಟಿಕಾಂಶ ಸಂಶೋಧನೆಗಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೆಸರುಕಾಳು ಮತ್ತು ಮೆಂತ್ಯ ಒಣ ಬೀಜಗಳನ್ನು ಕಳಿಸಿದೆ.

ನಾನು ಒಬ್ಬಂಟಿ ಅಲ್ಲ, ತಿರಂಗಾ ನನ್ನ ಜತೆ ಇದೆ : ಶುಭಾಂಶು

- ಭಾರತವು ಬಾಹ್ಯಾಕಾಶಕ್ಕೆ ಮರಳುತ್ತಿದೆ, ಜೈ ಹಿಂದ್..

ನವದೆಹಲಿ: ‘ನಮಸ್ಕಾರ ದೇಶವಾಸಿಗಳೇ. ಜೈ ಹಿಂದ್‌ ನಾವು 41 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಬಂದಿದ್ದೇವೆ ಇದು ಅದ್ಭುತ ಯಾನವಾಗಿದೆ..’ ಇದು ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊರಟಿರುವ ಭಾರತೀಯ ಶುಭಾಂಶು ಶುಕ್ಲಾ ಅವರು ಗಗನಯಾನದ ವೇಳೆ ಆಡಿದ ಉತ್ಸಾಹದ ಮಾತುಗಳು.ಆಕ್ಸಿಯೋಂ-4 ಮಿಷನ್‌ನ ಭಾಗವಾಗಿ 3 ಗಗನಯಾತ್ರಿಗಳೊಂದಿಗೆ ಫಾಲ್ಕರ್‌-9 ರಾಕೆಟ್‌ನಲ್ಲಿ ನಭಕ್ಕೆ ನೆಗೆದ ಶುಕ್ಲಾ, ಭೂಮಿಯಿಂದ 200 ಕಿ.ಮೀ. ಎತ್ತರದಲ್ಲಿ ಡ್ರಾಗನ್‌ ನೌಕೆ ಭೂಮಿಯ ಕಕ್ಷೆಯಲ್ಲಿ ಸುತ್ತತೊಡಗಿದಾಗ ಹರ್ಷ ವ್ಯಕ್ತಪಡಿಸಿದ್ದಾರೆ.

‘ಗಂಟೆಗೆ 7.5 ಕಿ.ಮೀ. ವೇಗದಲ್ಲಿ ನಾವು ಭೂಮಿಯನ್ನು ಸುತ್ತುತ್ತಿದ್ದೇವೆ. ನನ್ನ ಭುಜದ ಮೇಲೆಲಿರುವ ಭಾರತದ ತ್ರಿವರ್ಣ ಧ್ವಜವು, ನಾನು ನಿಮ್ಮೆಲ್ಲರೊಂದಿಗಿದ್ದೇನೆ ಎಂದು ಹೇಳುತ್ತಿದೆ. ಇದು ಕೇಲ ನನ್ನ ಐಎಸ್‌ಎಸ್‌ ಯಾನವಲ್ಲ. ಬದಲಿಗೆ ಭಾರತದ ಮಾನವಸಹಿತ ಬಾಹ್ಯಾಕಾಶ ಹಾರಾಟದ ಆರಂಭವೂ ಆಗಿದೆ. 

ನೀವು ಪ್ರತಿಯೊಬ್ಬರೂ ಈ ಪ್ರಯಾಣದ ಭಾಗವಾಗಬೇಕೆಂದು ನಾನು ಬಯಸುತ್ತೇನೆ’ ಎಂದು ಶುಕ್ಲಾ ಹೇಳಿದ್ದಾರೆ.ಉಡ್ಡಯನಕ್ಕೂ ಮುನ್ನ ಮಾತನಾಡಿದ್ದ ಶುಕ್ಲಾ, ‘ನಾನು ಒಬ್ಬ ವ್ಯಕ್ತಿಯಾಗಿ ಬಾಹ್ಯಾಕಾಶಕ್ಕೆ ಪ್ರಯಾಣಿಸುತ್ತಿದ್ದರೂ, ಇದು 1.4 ಶತಕೋಟಿ ಜನರ ಪ್ರಯಾಣ ಎಂದು ನಾನು ನಂಬುತ್ತೇನೆ. ಭಾರತದ ಈ ಪೀಳಿಗೆಯ ಎಲ್ಲರಲ್ಲೂ ಕುತೂಹಲವನ್ನು ಹುಟ್ಟುಹಾಕಲು ಮತ್ತು ನಾವೀನ್ಯತೆಗೆ ಚಾಲನೆ ನೀಡಲು ಆಶಿಸುತ್ತೇನೆ’ ಎಂದಿದ್ದರು.

* ಭಾರತೀಯ ಶುಕ್ಲಾ ಅಂತೂ ಬಾಹ್ಯಾಕಾಶಕ್ಕೆ ನೆಗೆತ

- 6 ಹಿನ್ನಡೆ ಬಳಿಕ 7ನೇ ಯತ್ನದಲ್ಲಿ ಆಕ್ಸಿಯೋಂ-4 ಮಿಷನ್‌ ಯಶ

- ಮಧ್ಯಾಹ್ನ 12.01ಕ್ಕೆ ಫ್ಲೋರಿಡಾದಿಂದ ಉಡಾವಣೆ

- ಇಂದು ಸಂಜೆ 4.30ಕ್ಕೆ ಬಾಹ್ಯಾಕಾಶ ಕೇಂದ್ರ ಪ್ರವೇಶ ನಿರೀಕ್ಷೆ- 14 ದಿನ ಐಎಸ್‌ಎಸ್‌ ವಾಸ, 60ಕ್ಕೂ ಹೆಚ್ಚು ಪ್ರಯೋಗ

- 4 ದಶಕ ನಂತರ ಬಾಹ್ಯಾಕಾಶ ಯಾನ ಕೈಗೊಂಡ 2ನೇ ಭಾರತೀಯ

- ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಮೊದಲ ಭಾರತೀಯ ಎಂಬ ಖ್ಯಾತಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ