;Resize=(412,232))
ನವದೆಹಲಿ: ಇನ್ನು ಮುಂದೆ ನೌಕರರ ಮೂಲ ವೇತನ ಎಷ್ಟೇ ಇದ್ದರೂ ಪ್ರತಿ ತಿಂಗಳು ಪ್ರಾವಿಡೆಂಟ್ ಫಂಡ್ (ಪಿಎಫ್) ರೂಪದಲ್ಲಿ 1,800 ರು. ಕಡಿತ ಕಡ್ಡಾಯ. ಒಂದು ವೇಳೆ ನೌಕರರು ಬಯಸಿದರೆ ಸ್ವಯಂಪ್ರೇರಿತರಾಗಿ ಪಿಎಫ್‌ಗೆ ಹೆಚ್ಚಿನ ಪಾಲು ನೀಡಬಹುದಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯು ಇದೀಗ ಪರಿಚಯಿಸಿರುವ ಹೊಸ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ಸ್ ಸ್ಕೀಂ-2026ನ ಪ್ರಕಾರ ನೌಕರರ ಮೂಲ ವೇತನದ ಶೇ.12ರಷ್ಟು ಪಿಎಫ್‌ಗೆ ಕಡಿತ ಕಡ್ಡಾಯ. ಅಂದರೆ ಮೂಲ ಶಾಸನಬದ್ಧ ಕನಿಷ್ಠ ವೇತನ ಮಿತಿ 15 ಸಾವಿರ ರು. ಆಗಿದ್ದು, ಅದರ ಶೇ.12ರಷ್ಟು ಅಂದರೆ 1,800 ರು. ಪಾವತಿ ಕಡ್ಡಾಯ. ನೌಕರನ ಮೂಲವೇತನ ₹1 ಲಕ್ಷ ಆಗಿದ್ದರೂ ಕನಿಷ್ಠ 1,800 ರು. ಪಿಎಫ್ ರೂಪದಲ್ಲಿ ಕಡಿತ ಆಗಲಿದೆ. ಉದ್ಯೋಗದಾತರು ಕೂಡ ಇಷ್ಟೇ ಪ್ರಮಾಣ (1800 ರು.)ದಲ್ಲಿ ತಮ್ಮ ಪಾಲು ನೀಡಬೇಕು. ಒಂದು ವೇಳೆ ನೌಕರರು ನಿವೃತ್ತಿಗಾಗಿ ಹೆಚ್ಚಿನ ಹಣ ಉಳಿತಾಯ ಮಾಡಲು ಬಯಸಿದರೆ ಪಿಎಫ್‌ಗೆ ಹೆಚ್ಚಿನ ಕೊಡುಗೆ ನೀಡಬಹುದಾಗಿದೆ. ಆದರೆ ಇದು ಐಚ್ಛಿಕ. ಹಾಗಂತ ಉದ್ಯೋಗದಾತರು ಕೂಡ ಇದಕ್ಕೆ ಸಮನಾದ ಪಾಲು ನೀಡುವುದು ಕಡ್ಡಾಯವಲ್ಲ.
ಹೊಸ ನಿಯಮದ ಪ್ರಕಾರ ನೌಕರರು-ಉದ್ಯೋಗದಾತರು ಪಿಎಫ್‌ಗೆ ಹೆಚ್ಚುವರಿಯಾಗಿ ಪಾವತಿಸುತ್ತಿರುವ ಹಣ ಯಾವಾಗ ಬೇಕಿದ್ದರೂ ಸ್ಥಗಿತಗೊಳಿಸಬಹುದು. ಇದಲ್ಲದೆ ತುರ್ತು ಸಂದರ್ಭಗಳಲ್ಲಿ ನೌಕರರು ಪಿಎಫ್ ನಿಧಿಯ ಭಾಗಶಃ ವಿಥ್‌ಡ್ರಾ ಕೂಡ ಸರಳವಾಗಿದೆ.
* 1,800 ರು. ಪಿಎಫ್ ಕಡಿತ ಕಡ್ಡಾಯ
- ವೇತನ ಎಷ್ಟೇ ಇರಲಿ ನೌಕರರ ವೇತನದಲ್ಲಿ ಮಾಸಿಕ 1800 ರು.ಪ್ರತಿ ತಿಂಗಳು ಪಿಎಫ್‌ಗೆ ಕಡಿತ ಆಗಲಿದೆ. ಉದ್ಯೋಗದಾತರೂ ಇಷ್ಟೇ ಪಾಲು ನೀಡಬೇಕು.
- ಉದ್ಯೋಗಿಗಳು ಸ್ವಯಂಪ್ರೇರಿತವಾಗಿ ಪಿಎಫ್‌ಗೆ ಹೆಚ್ಚುವರಿ ಕೊಡುಗೆ ನೀಡಬಹುದು. ಹಾಗಂತ ಉದ್ಯೋಗದಾತರೂ ಅಷ್ಟೇ ಪಾಲು ಹಾಕಬೇಕೆಂದೇನೂ ಇಲ್ಲ.
* ಭಾಗಶಃ ಹಿಂಪಡೆಯುವುದು ಸುಲಭ
- ಪಿಎಫ್ ಖಾತೆಯಿಂದ ಭಾಗಶಃ ಹಣ ಹಿಂಪಡೆಯುವುದು ಇನ್ನಷ್ಟು ಸುಲಭವಾಗಲಿದೆ. ಹಿಂದೆ ಸಾಕಷ್ಟು ಕೆಟಗರಿ, ಸಂಕೀರ್ಣ ನಿಮಯಗಳಿಂದ ಸಮಸ್ಯೆ ಆಗುತ್ತಿತ್ತು. ಆದರೆ, ಈಗ ಹಣ ವಿಥ್‌ಡ್ರಾ ಕಾರಣಗಳನ್ನು 3 ಪ್ರಮುಖ ಗುಂಪುಗಳಾಗಿ ವಿಂಗಡಿಸಿ ಸರಳೀಕರಿಸಲಾಗಿದೆ. ಅವು, ಅತ್ಯಗತ್ಯ ಅವಶ್ಯಕತೆಗಳು-ಅನಾರೋಗ್ಯ, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ, ಮದುವೆ. ಮನೆ ಸಂಬಂಧಿ-ಹೊಸ ಮನೆ ಖರೀದಿ, ಮನೆ ನಿರ್ಮಾಣ, ರಿಪೇರಿ ಮತ್ತು ವಿಶೇಷ ಕಾರಣಗಳೆಂದು ವಿಂಗಡಿಸಲಾಗಿದೆ.