ಕಳೆದ ಫೆಬ್ರವರಿಯಲ್ಲಿ ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಕರ್ನಾಟಕದ ತಾಳಿಕೋಟೆ ಮೂಲದ ಕಂಪನಿಯೊಂದು ದೊಡ್ಡ ಕ್ರಿಮಿನಲ್ ಷಡ್ಯಂತ್ರದಲ್ಲಿ ಭಾಗಿಯಾಗಿರುವ ಶಂಕೆ ಇದೆ.
ಕೊಚ್ಚಿ : ಕಳೆದ ಫೆಬ್ರವರಿಯಲ್ಲಿ ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ ಪ್ರಕರಣದಲ್ಲಿ ಕರ್ನಾಟಕದ ತಾಳಿಕೋಟೆ ಮೂಲದ ಕಂಪನಿಯೊಂದು ದೊಡ್ಡ ಕ್ರಿಮಿನಲ್ ಷಡ್ಯಂತ್ರದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಈಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ವಿಜಯಪುರದ ಮಹಾಂತಗೌಡ ಬಿರಾದಾರ್ (35) ಮತ್ತು ತಾಳಿಕೋಟೆಯ ಬಾಪಾಗೌಡ ಭೀಮರಾಯ ಚೌಧರಿ (47) ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೊಚ್ಚಿಯ ಎನ್‌ಐಎ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.ಏನಿದು ಪ್ರಕರಣ?:
ಮಲ್ಲಪ್ಪುರಂನ ತಿರುರಂಗಡಿಯಲ್ಲಿ ಫೆ.7ರಂದು 89,600 ಜಿಲೆಟಿನ್ ಕಡ್ಡಿಗಳು, 1.05 ಲಕ್ಷ ಎಲೆಕ್ಟ್ರಿಕೇತರ ಡಿಟೋನೇಟರ್ಸ್‌ಗಳನ್ನು ಲಾರಿಯೊಂದರಲ್ಲಿ ವಶಕ್ಕೆ ಪಡೆಯಲಾಗಿತ್ತು. ಆಗ ಸ್ಫೋಟಕಗಳನ್ನು ಪೂರೈಸಿದ ಕಂಪನಿಯು ಕರ್ನಾಟಕದ ತಾಳಿಕೋಟೆಯ ಚೇತನ್ ಎಂಟರ್‌ಪ್ರೈಸಸ್ ಎಂದು ಹಾಗೂ ಬಿರಾದಾರ್ ಮತ್ತು ಚೌಧರಿ ಅವರು ಕಂಪನಿಯ ಮಾಲೀಕರು ಎಂದು ಗೊತ್ತಾಗಿತ್ತು.
ಬಿರಾದಾರ್ ತಮಿಳುನಾಡಿನ ಕಂಪನಿಯೊಂದರಿಂದ ಸ್ಫೋಟಕಗಳನ್ನು ಖರೀದಿಸಿದ್ದರು. ಆ ಸ್ಫೋಟಕಗಳಿಗೆ ಅಳವಡಿಸಿದ್ದ ಬಾರ್‌ಕೋಡ್ ಲೇಬಲ್‌ಗಳನ್ನು ತಿರುಚಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.
‘ಚೇತನ್ ಎಂಟರ್‌ಪ್ರೈಸಸ್‌ನ ತಾಳಿಕೋಟೆ ಘಟಕದಲ್ಲಿ ಹುಡುಕಾಟ ನಡೆಸಿದಾಗ ಜೀವಂತ ಡಿಟೋನೇಟರ್‌ಗಳು ಹಾಗೂ ತಿರುಚಿದ ಬಾರ್‌ಕೋಡ್‌ಗಳು ಪತ್ತೆಯಾಗಿವೆ. ಈ ಮೂಲಕ ಇದರ ಹಿಂದೆ ದೊಡ್ಡ ಕ್ರಿಮಿನಲ್ ಷಡ್ಯಂತ್ರದ ಅನುಮಾನ ಮೂಡಿದೆ. ಹೀಗಾಗಿ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವುದು ಅಗತ್ಯ’ ಎಂದು ಎನ್‌ಐಎ ವಾದಿಸಿದೆ.
ಈ ವೇಳೆ ಅರ್ಜಿದಾರರು ನ್ಯಾಯಾಲಯಕ್ಕೆ ಅಧಿಕೃತವಾಗಿ ಸ್ಫೋಟಕ ಖರೀದಿಸಿದ ದಾಖಲೆ ಸಲ್ಲಿಸಿದರೂ ಜಿಎಸ್‌ಟಿ ಇ-ವೇ ಬಿಲ್ ಪ್ರದರ್ಶಿಸುವಲ್ಲಿ ವಿಫಲವಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತು.
ಮತ್ತೊಬ್ಬನಿಂದಲೂ ಅರ್ಜಿ:
ಈ ನಡುವೆ, ಕರ್ನಾಟಕದ ಸಂಗನಗೌಡ ಬಿರಾದಾರ್ (32) ಎಂಬವರು ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಕೇವಲ ನೋಟಿಸ್ ಅಷ್ಟೇ ನೀಡಲಾಗಿದೆ. ಸದ್ಯಕ್ಕೆ ಅವರನ್ನು ವಿಚಾರಣೆ ನಡೆಸುವ ಉದ್ದೇಶ ಇಲ್ಲ. ಇನ್ನಷ್ಟು ತನಿಖೆ ಬಳಿಕ ಅವರ ಪಾತ್ರ ಬೆಳಕಿಗೆ ಬರಬೇಕಿದೆ ಎಂದು ಎನ್‌ಐಎ ತಿಳಿಸಿದೆ.
ಕೇರಳದ ಮಲಪ್ಪುರಂನಲ್ಲಿ 89000 ಜಿಲೆಟಿನ್ ಕಡ್ಡಿ, 1 ಲಕ್ಷ ಡಿಟೋನೇಟರ್ಸ್ ಪತ್ತೆ
ಕಳೆದ ಫೆ.7ರಂದು ಲಾರಿಯಲ್ಲಿ ಸಾಗಿಸುವ ವೇಳೆ ಪತ್ತೆಯಾಗಿದ್ದ ಸ್ಫೋಟಕ ವಸ್ತು
ಈ ಬಗ್ಗೆ ಎನ್‌ಐಎದಿಂದ ತನಿಖೆ. ಈ ವೇಳೆ ತಾಳಿಕೋಟೆ ಕಂಪನಿ ಕೈವಾಡ ಪತ್ತೆ
ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ಕಂಪನಿಯ ಇಬ್ಬರು ಮಾಲೀಕರು
ಕೇಸಲ್ಲಿ ಕಂಪನಿ ಷಡ್ಯಂತ್ರವಿದೆ. ಅವರ ತನಿಖೆ ಅಗತ್ಯವಿದೆ ಎಂದು ಎನ್‌ಐಎ ವಾದ
ಈ ಹಿನ್ನೆಲೆಯಲ್ಲಿ ಇಬ್ಬರಿಗೂ ನಿರೀಕ್ಷಣಾ ಜಾಮೀನು ನಿರಾಕರಿಸಿದ ಕೇರಳ ಹೈಕೋರ್ಟ್

