ಜೂ.30ರವರೆಗೆ ಭಾರತದ ತೈಲ ಮಾರಾಟ ಕಂಪನಿಗಳು 74,781 ಕೋಟಿ ರು. ನಷ್ಟ ಅನುಭವಿಸಿವೆ. ಮುಂದಿನ ದಿನಗಳಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಹಾದಿಯಲ್ಲೇ ಸಾಗಿದರೆ ಆಗ ಭಾರತದಲ್ಲಿ ದರ ಕಡಿಮೆ ಮಾಡುವ ಬಗ್ಗೆ ಯೋಚಿಸಬಹುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲವನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದ ಕಾರಣ ಜೂ.30ರವರೆಗೆ ಭಾರತದ ತೈಲ ಮಾರಾಟ ಕಂಪನಿಗಳು 74,781 ಕೋಟಿ ರು. ನಷ್ಟ ಅನುಭವಿಸಿವೆ. ಮುಂದಿನ ದಿನಗಳಲ್ಲಿ ಕಚ್ಚಾತೈಲ ಬೆಲೆ ಇಳಿಕೆ ಹಾದಿಯಲ್ಲೇ ಸಾಗಿದರೆ ಆಗ ಭಾರತದಲ್ಲಿ ದರ ಕಡಿಮೆ ಮಾಡುವ ಬಗ್ಗೆ ಯೋಚಿಸಬಹುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ದರ ಇಳಿಸುವ ಕುರಿತು ಚಿಂತಿಸಲಾಗುವುದು

ಸದ್ಯಕ್ಕೆ ಎರಡು ತಿಂಗಳ ಹಿಂದೆ ಹೆಚ್ಚಿನ ದರದಲ್ಲಿ ಖರೀದಿಸಿದ ಕಚ್ಚಾ ತೈಲವನ್ನು ಕಂಪನಿಗಳು ಸಂಸ್ಕರಿಸಿ ಪೆಟ್ರೋಲ್‌, ಡೀಸೆಲ್ ಉತ್ಪಾದಿಸುತ್ತಿವೆ. ಇನ್ನೂ ಕೆಲ ವಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗದಿದ್ದರೆ ಪೆಟ್ರೋಲ್‌, ಡೀಸೆಲ್‌ ದರ ಇಳಿಸುವ ಕುರಿತು ಚಿಂತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಮೂಲಕ ಸದ್ಯಕ್ಕೆ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

ತೈಲ ದರ ಕಡಿಮೆಯಾಗಿರಬಹುದು

ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕಡಿಮೆಯಾಗಿರಬಹುದು. ಆದರೆ, ತೈಲ ಕಂಪನಿಗಳು ಹಿಂದೆ ಹೆಚ್ಚಿನ ದರದಲ್ಲಿ ಖರೀದಿಸಿದ ತೈಲವನ್ನೇ ಸಂಸ್ಕರಣೆ ಮಾಡುತ್ತಿವೆ. ಕಚ್ಚಾ ತೈಲ ಸಂಸ್ಕರಿಸಿ ಪೆಟ್ರೋಲ್‌, ಡೀಸೆಲ್‌ ಉತ್ಪಾದಿಸಬೇಕಿದ್ದರೆ 2 ತಿಂಗಳು ಬೇಕು. ಸದ್ಯ ಸಂಸ್ಕರಣೆ ಮಾಡುತ್ತಿರುವ ಕಚ್ಚಾತೈಲವು ಏಪ್ರಿಲ್‌, ಮೇ ತಿಂಗಳಲ್ಲಿ ಖರೀದಿಸಿದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಮೆರಿಕ ಮತ್ತು ಇರಾನ್‌ ಒಪ್ಪಂದದ ಮಾತುಕತೆ ಆರಂಭವಾದ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರವು ಜೂನ್‌ ಎರಡನೇ ವಾರದಲ್ಲಿ ನಿಧಾನವಾಗಿ ಇಳಿಕೆಯಾಗಲು ಆರಂಭಿಸಿದೆ.