-ಎಐ, ಅಪರೂಪದ ಖನಿಜ, ರಕ್ಷಣೆ ಕ್ಷೇತ್ರದಲ್ಲಿ ಸಹಕಾರ

-ಭಾರತ-ಜಪಾನ್‌ ವಾರ್ಷಿಕ ಶೃಂಗದಲ್ಲಿ ಡೀಲ್‌ ಅಂತಿಮ

-ಪ್ರಧಾನಿ ಮೋದಿ, ಜಪಾನ್‌ ಪ್ರಧಾನಿ ತಕೈಚಿ ಮಾತುಕತೆ

-10 ವರ್ಷದಲ್ಲಿ ₹5.9 ಲಕ್ಷ ಕೋಟಿ ಜಪಾನ್‌ ಹೂಡಿಕೆ ಗುರಿ

--


ತಕೈಚಿ ನನ್ನ ತಂಗಿ: ಮೋದಿನವದೆಹಲಿ: ಗುರುವಾರ ಇಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರಧಾನಿ ಸನೇ ತಕೈಚಿ ಅವರನ್ನು ‘ತಂಗಿ’ ಎಂದು ಸಂಬೋಧಿಸಿದ್ದಲ್ಲದೆ, ಅವರನ್ನು ‘ದಾರ್ಶನಿಕ ಮತ್ತು ಜನಪ್ರಿಯ ನಾಯಕಿ’ ಎಂದು ಶ್ಲಾಘಿಸಿದರು.

===

ನವದೆಹಲಿ: ಕೃತಕ ಬುದ್ಧಿಮತ್ತೆ, ಆರ್ಥಿಕ ಭದ್ರತೆ, ಅಪರೂಪದ ಖನಿಜಗಳು, ರಕ್ಷಣೆ, ಆರೋಗ್ಯ ಹಾಗೂ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಒಪ್ಪಂದಗಳಿಗೆ ಭಾರತ ಮತ್ತು ಜಪಾನ್‌ ಗುರುವಾರ ಸಹಿ ಹಾಕಿವೆ.

ದೆಹಲಿಯಲ್ಲಿ ನಡೆಯುತ್ತಿರುವ 16ನೇ ಭಾರತ-ಜಪಾನ್‌ ವಾರ್ಷಿಕ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಸಾನೆ ತಕೈಚಿ, ವ್ಯಾಪಾರ, ಹೂಡಿಕೆ, ನವ ತಂತ್ರಜ್ಞಾನಗಳು, ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಳಿಕ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋದಿ, ‘ಭಾರತ ಮತ್ತು ಜಪಾನ್‌ಗಳ ಆರ್ಥಿಕತೆಗಳು ಪರಸ್ಪರ ಪೂರಕವಾಗಿವೆ. ಸಾಂಸ್ಕೃತಿಕ ಮೌಲ್ಯಗಳಿಂದ ಹಿಡಿದು ಆಧುನಿಕ ತಂತ್ರಜ್ಞಾನದವರೆಗೆ, ನಮ್ಮ ಚಿಂತನೆ ಮತ್ತು ದೃಷ್ಟಿಕೋನದಲ್ಲೂ ಸಾಮ್ಯತೆಯಿದೆ. ಇದರ ಮೂಲಕ, ನಾವು ಸೆಮಿಕಂಡಕ್ಟರ್‌ಗಳು, ಕ್ವಾಂಟಮ್ ಮತ್ತು ಸುಧಾರಿತ ವಸ್ತುಗಳಂತಹ ಕ್ಷೇತ್ರಗಳಲ್ಲಿ ಪೂರೈಕೆ ಸರಪಳಿಯನ್ನು ಬಲಪಡಿಸುತ್ತೇವೆ. ಜೈವಿಕ ಅನಿಲ ಯೋಜನೆಯ ಮೂಲಕ, ಭಾರತದಲ್ಲಿ 1000 ಜೈವಿಕ ಅನಿಲ ಮತ್ತು ಸಾವಯವ ಗೊಬ್ಬರ ಘಟಕಗಳನ್ನು ಸ್ಥಾಪಿಸುತ್ತೇವೆ’ ಎಂದು ಘೋಷಿಸಿದರು. 5.9 ಲಕ್ಷ ಕೋಟಿ ರು. ಜಪಾನ್‌ ಹೂಡಿಕೆ ಗುರಿ: ‘ಭಾರತ-ಜಪಾನ್ ಹೂಡಿಕೆ ಪಾಲುದಾರಿಕೆ ಸ್ಥಿರವಾಗಿ ಬಲಗೊಳ್ಳುತ್ತಿದೆ. ಕಳೆದ ವರ್ಷದಲ್ಲಿ ಸುಮಾರು 120 ಹೊಸ ವ್ಯವಹಾರ ಒಪ್ಪಂದಗಳನ್ನು ತೀರ್ಮಾನಿಸಲಾಗಿದೆ. ಇದು ಭಾರತಕ್ಕೆ 5.9 ಲಕ್ಷ ಕೋಟಿ ರು.ಗಳಿಗಿಂತ ಹೆಚ್ಚಿನ ಜಪಾನಿನ ಹೂಡಿಕೆಯನ್ನು ತರುತ್ತದೆ. ಮುಂದಿನ ದಶಕದಲ್ಲಿ ಇಷ್ಟು ಮೊತ್ತದ ಜಪಾನ್‌ ಹೂಡಿಕೆಯನ್ನು ಆಕರ್ಷಿಸುವ ಮತ್ತು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಪಾನಿನ ಕಂಪನಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗುರಿ ಇದೆ’ ಎಂದು ಮೋದಿ ತಿಳಿಸಿದ್ದಾರೆ.