ಕನ್ನಡಪ್ರಭ ವಾರ್ತೆ ಅಥಣಿ ಶಿಕ್ಷಕರು ಬೆಳಕಿನ ಹಣತೆ ಇದ್ದಂತೆ. ಮಕ್ಕಳಲ್ಲಿರುವ ಅಂಧಕಾರವನ್ನು ಅಳಿಸಿ ಸುಜ್ಞಾನ ಮೂಡಿಸುವ ಸಾಮರ್ಥ್ಯ ಹೊಂದಿರುವರು. ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಜಗತ್ತಿಗೆ ಪರಿಚಯಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಪ್ರಾಚಾರ್ಯ ಮಂಜುನಾಥ ಜುನಗೊಂಡ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಶಿಕ್ಷಕರು ಬೆಳಕಿನ ಹಣತೆ ಇದ್ದಂತೆ. ಮಕ್ಕಳಲ್ಲಿರುವ ಅಂಧಕಾರವನ್ನು ಅಳಿಸಿ ಸುಜ್ಞಾನ ಮೂಡಿಸುವ ಸಾಮರ್ಥ್ಯ ಹೊಂದಿರುವರು. ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಜಗತ್ತಿಗೆ ಪರಿಚಯಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಪ್ರಾಚಾರ್ಯ ಮಂಜುನಾಥ ಜುನಗೊಂಡ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ವಿದ್ಯಾವರ್ಧಕ ಸಂಸ್ಥೆಯ ೩೭ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಧಕರಿಗೆ ಸತ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಪಾನ ಇಂದು ಸಮೃದ್ದವಾಗಿ ಬೆಳೆಯಲು ಅಲ್ಲಿಯ ಶಿಕ್ಷಕರ ಸೇವೆ ಅಪಾರವಾಗಿದೆ. ಅತಿ ಹೆಚ್ಚು ಸಂಬಳ ಪಡೆಯುವವರು ಅಲ್ಲಿ ಶಿಕ್ಷಕರಾಗಿದ್ದಾರೆ. ಹೀಗಾಗಿ, ಜ್ಞಾನಕ್ಕೆ ಜಗತ್ತು ತಲೆಬಾಗುತ್ತದೆ. ಮಕ್ಕಳನ್ನು ಅಂಕಗಳಿಗೆ ಹೊಲಿಸದೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವುದು ಶಿಕ್ಷಕರ, ಪಾಲಕರ ಕರ್ತವ್ಯವಾಗಿದೆ. ಯಾವ ಮಕ್ಕಳು ದಡ್ಡರಲ್ಲ ಎಲ್ಲರೂ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಜಾಣರಿರುತ್ತಾರೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದಾಗ ಮಕ್ಕಳು ಸಾಧಕರಾಗಿ ಬೆಳೆಯಲು ಸಾಧ್ಯ ಎಂದರು.ಸಂಸ್ಥೆಯ ಅಧ್ಯಕ್ಷ ಶಿವಶಂಕರ ಹಂಜಿ ಮಾತನಾಡಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪ್ರತಿಯೊಂದು ಸಾಂಸ್ಕೃತಿಕ, ದೇಶಭಕ್ತಿಯ ಮತ್ತಿತರರ ಕಾರ್ಯಕ್ರಮಗಳಲ್ಲಿಯೂ ಮಕ್ಕಳು ಪ್ರಥಮ ಸ್ಥಾನ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹುದ್ದಾರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಹುದ್ದಾರ ಮಾತನಾಡಿ, ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು, ದೇಶಭಕ್ತಿಯನ್ನು ಮಕ್ಕಳಿಗೆ ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯು ಉತ್ತಮ ಆಡಳಿತ ಮಂಡಳಿ ಹಾಗೂ ನುರಿತ ಶಿಕ್ಷಕರೊಂದಿಗೆ ಸಾಧಕ ವಿದ್ಯಾರ್ಥಿಗಳನ್ನು ರೂಪಿಸುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ. ಈ ಸಂಸ್ಥೆಯ ಶೈಕ್ಷಣಿಕ ಸೇವೆ ಇನ್ನಷ್ಟು ವಿಶಿಷ್ಟವಾಗಿ ನಡೆಯಲಿ, ನಾಡಿಗೆ ಸಾಧಕ ವಿದ್ಯಾರ್ಥಿಗಳನ್ನು ಪರಿಚಯಿಸಲಿ ಎಂದು ಶುಭ ಹಾರೈಸಿದರು.ಈ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಸಾಧಕ ವಿದ್ಯಾರ್ಥಿಗಳನ್ನು, ಶಾಲೆಯ ಅಭಿಮಾನಿ ಪಾಲಕ ದಂಪತಿ ವಿಜಯ ಹುದ್ದಾರ ಹಾಗೂ ಪೂರ್ಣಿಮಾ ಹುದ್ದಾರರನ್ನು ಸತ್ಕರಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಮಹಾಜನ, ಕಾರ್ಯದರ್ಶಿ ಓಂಕಾರೆಪ್ಪ ಸಾವಡಕರ, ನಿದೇರ್ಶಕರಾದ ವಿಜಯಕುಮಾರ ಬುರ್ಲಿ, ಅಶೋಕ ಬುರ್ಲಿ, ಶ್ರೀಶೈಲ ಸಂಕ, ಸುನೀಲ ಶಿವಣಗಿ, ಮಹಾದೇವ ಧರಿಗೌಡರ, ಭಾರತಿ ಪೂಜಾರಿ, ಪಿ.ಡಿ.ಚನಗೌಡರ, ಎಮ.ಎಸ್.ದೇಸಾಯಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.