ಕನ್ನಡಪ್ರಭ ವಾರ್ತೆ ತಿಪಟೂರು

ಕಲ್ಪತರು ಎಂಜಿನಿಯರಿಂಗ್ ಕಾಲೇಜು ಹಾಗೂ ಸಿಸ್ಕೋ ಸಂಸ್ಥೆ ಸಹಭಾಗಿತ್ವದಲ್ಲಿ ನಾಳೆ 29ರಂದು ಸಿಸ್ಕೋ ಎಕ್ಸಲೆನ್ಸ್ ಸೆಂಟರ್ ಕೆಐಟಿನಲ್ಲಿ ಉದ್ಘಾಟನೆಯಾಗುತ್ತಿದ್ದು ಇದರ ಮೂಲಕ ತಾಂತ್ರಿಕ ಶಿಕ್ಷಣದಲ್ಲಿ ನಮ್ಮ ಕಾಲೇಜು ಹೊಸ ಕ್ರಾಂತಿ ಉಂಟುಮಾಡುತ್ತಿದೆ ಎಂದು ಕಲ್ಪತರು ವಿದ್ಯಾ ಸಂಸ್ಥೆಯ ಖಜಾಂಚಿ ಟಿ.ಎಸ್.ಶಿವಪ್ರಸಾದ್ ತಿಳಿಸಿದರು.

ಕಲ್ಪತರು ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಜಾಗತಿಕ ತಂತ್ರಜ್ಞಾನ ದೈತ್ಯ ಸಿಸ್ಕೋ ಸೈಬರ್ ಸೆಕ್ಯೂರಿಟಿ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ಮಾಡುತ್ತಿರುವ ಆವಿಷ್ಕಾರಗಳು ಭಾರತದ ಡಿಜಿಟಲ್ ಕ್ರಾಂತಿಗೆ ಭದ್ರ ಬುನಾದಿಯಾಗಿದೆ. ಇಂತಹ ಸಂಸ್ಥೆಯ ಸಹಯೋಗದೊಂದಿಗೆ ಪ್ರಾರಂಭಿಸಲಾಗುತ್ತಿರುವ ಎಕ್ಸ್‌ಲೆನ್ಸ್ ಸೆಂಟರ್‌ನಿಂದಾಗಿ ನಮ್ಮ ಗ್ರಾಮೀಣ ಭಾಗದ ಎಂಜಿನಿಯರಿಂಗ್ ಶಿಕ್ಷಣದ ಮಹತ್ವ ಮತ್ತಷ್ಟು ಹೆಚ್ಚಲಿದೆ. ಈ ಕೇಂದ್ರದಿಂದ ವಿದ್ಯಾರ್ಥಿಗಳು ಉದ್ಯಮ ಆಧಾರಿತ ಕೌಶಲ ಕ್ಷೇತ್ರ ಹಾಗೂ ನೈಜ ತಂತ್ರಜ್ಞಾನದ ಮೇಲೆ ಹೆಚ್ಚು ಪ್ರಾಯೋಗಿಕ ಜ್ಞಾನ ಪಡೆಯಲಿದ್ದಾರೆ. ಜೊತೆಗೆ ಅಂತರಾಷ್ಟ್ರೀಯ ಮಟ್ಟದ ಕಂಪನಿಗಳಲ್ಲಿ ನಮ್ಮ ವಿದ್ಯಾರ್ಥಿಗಳು ಹೆಚ್ಚು ಉದ್ಯೋಗ ಪಡೆದುಕೊಳ್ಳಲಿದ್ದಾರೆ ಎಂದರು. ನಮ್ಮ ಕಾಲೇಜಿನ ಕೆಐಟಿಯ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿನಿ ಮಾನಸಿ ಪರಿಸರ ಕಾಳಜಿ ಬಗ್ಗೆ ಮಾಡಿರುವ ಪ್ರಾಜೆಕ್ಟ್‌ಗೆ ಜಾಗತಿಕ ಮನ್ನಣೆ ದೊರೆತಿದ್ದು ಜಪಾನ್ ದೇಶದ ಒಕಿನೋವ ವಿಶ್ವವಿದ್ಯಾಲಯ ಒಂದು ಅವರ ಪ್ರಾಜೆಕ್ಟ್‌ ಸ್ಪಾನ್ಸರ್ ಮಾಡಲು ಮುಂದೆ ಬಂದಿದ್ದು ಒಂದೂವರೆ ತಿಂಗಳ ಕಾಲ ವಿದ್ಯಾರ್ಥಿನಿಯನ್ನು ಜಪಾನ್ ದೇಶಕ್ಕೆ ಸದ್ಯದಲ್ಲೇ ಕರೆಸಿಕೊಂಡು ಅವರ ಸಂಶೋಧನೆಗೆ ನೆರವಾಗಲಿದೆ. ದೆಹಲಿಯಲ್ಲಿ ನಡೆದ ಈ ಪ್ರಾಜೆಕ್ಟ್ ಎಕ್ಸಿಬಿಷನ್‌ನಲ್ಲಿ ಪ್ರಸ್ತುತಪಡಿಸಿದ ವಿಶೇಷ ಪರಿಸರ ಕಾಳಜಿ ಹೊಂದಿರುವ ಈ ಪ್ರಾಜೆಕ್ಟ್ ಬಹುತೇಕ ಕಂಪನಿಗಳು ಪ್ರಾಯೋಜಿಸಲು ಮುಂದೆ ಬಂದಿದ್ದು, ಅಂತಿಮವಾಗಿ ಜಪಾನ್ ದೇಶದ ಒಕಿನೋವಾ ವಿಶ್ವವಿದ್ಯಾಲಯವನ್ನು ನಾವು ಆಯ್ಕೆ ಮಾಡಿಕೊಂಡಿದ್ದು, ಈ ವಿಶ್ವವಿದ್ಯಾಲಯ ನಮ್ಮ ಕಾಲೇಜಿನ ಮೇಲೆ ವಿಶ್ವಾಸವಿಟ್ಟು ಹಲವು ವಿಷಯಗಳ ಬಗ್ಗೆ ಒಡಂಬಡಿಕೆ ಮಾಡಿಕೊಳ್ಳಲು ಎಲ್ಲ ತಯಾರಿ ಆಗಿದೆ ಎಂದು ತಿಳಿಸಿದರು.ಕೆಐಟಿ ಪ್ರಾಂಶುಪಾಲ ಡಾ.ಎಚ್.ಸಿ.ಸತೀಶ್‌ಕುಮಾರ್ ಮಾತನಾಡಿ ಜಪಾನಿನ ಓಕಿನೋವಾ ಯೂನಿವರ್ಸಿಟಿಯವರು ನಮ್ಮ ಕಾಲೇಜಿನ ವಿದ್ಯಾರ್ಥಿನಿ ಮಾನಸಿ ಪ್ರಸ್ತುತಪಡಿಸಿರುವ ಪ್ರಾಜೆಕ್ಟ್ ಮೇಲೆ ಬಂಡವಾಳ ಹೂಡುತ್ತಿದ್ದು ಆ ಪರಿಸರ ಸಂಬಂಧಿತ ವಿಶೇಷ ಪ್ರಾಜೆಕ್ಟ್‌ಗಾಗಿ ಪೇಟೆಂಟ್ ಕೂಡ ಪಡೆದುಕೊಳ್ಳುತ್ತಿದ್ದೇವೆ. ಇದರ ಜೊತೆಗೆ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳ ಪ್ರಾಜೆಕ್ಟ್‌ಳಿಗೆ ಪ್ರತಿವರ್ಷ ೬೦ಲಕ್ಷ ರು.ಗಳಂತೆ ಮೂರು ವರ್ಷಗಳ ಕಾಲ ಹಣ ಬಿಡುಗಡೆಯಾಗಲಿದೆ. ಕಾಲೇಜಿನಲ್ಲಿರುವ ನಯನ್ ಸ್ಕಿಲ್ ಲ್ಯಾಬ್ ಮೂಲಕ ವಿದ್ಯಾರ್ಥಿಗಳಿಗೆ ನೂತನ ಪ್ರಾಜೆಕ್ಟ್‌ಗಳಿಗೆ ೫ಲಕ್ಷ ಖರ್ಚು ಮಾಡಲು ಸಾಧ್ಯವಿದ್ದು ಹೆಚ್ಚು ವಿಷಯಗಳ ಬಗ್ಗೆ ಸಂಶೋಧನೆಗಳಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು. ಕಾರ್ಯದರ್ಶಿ ಎಂ.ಆರ್.ಸಂಗಮೇಶ್ ಮಾತನಾಡಿ ಜಾಗತಿಕ ತಾಪಮಾನ ಹಾಗೂ ಪರಿಸರ ಮಾಲಿನ್ಯಗಳ ತಡೆ ಬಗ್ಗೆ ನಮ್ಮ ಕಾಲೇಜಿನಲ್ಲಿ ನೂತನ ಸಂಶೋಧನೆಗಳನ್ನು ನಡೆಸಲು ನಮ್ಮ ವಿದ್ಯಾರ್ಥಿಗಳು ಹಾಗೂ ನಮ್ಮ ಸಂಸ್ಥೆ ಹೆಚ್ಚು ಆಸಕ್ತವಾಗಿದ್ದು ಈ ಕೆಲಸ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಟಿ.ಎಸ್.ಬಸವರಾಜು, ಬಾಗೇಪಲ್ಲಿ ನಟರಾಜು, ಕಾರ್ಯದರ್ಶಿಗಳಾದ ಜಿ.ಎಸ್.ಉಮಾಶಂಕರ್, ಟಿ.ಯು.ಜಗದೀಶಮೂರ್ತಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಹೆಚ್‌ಓಡಿ ಮೈತ್ರಿ, ಪ್ರೋ. ಮಿಟ್ಟಾಶೇಖರಗೌಡ ಇತರರು ಉಪಸ್ಥಿತರಿದ್ದರು.