ಮಾಸ್ಕೋ: ಭಾರತಕ್ಕೆ ಅತಿದೊಡ್ಡ ಕಚ್ಚಾ ತೈಲ ಪೂರೈಕೆ ದೇಶವಾದ ರಷ್ಯಾ, ಇದೀಗ ಭಾರತದಿಂದಲೇ ಸಂಸ್ಕರಿತ ತೈಲ ಖರೀದಿ ಮಾಡುತ್ತಿದೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಕಳೆದ ಕೆಲ ದಿನಗಳಿಂದ ರಷ್ಯಾದ ತೈಲ ಸಂಸ್ಕರಣಾ ಘಟಕಗಳ ಮೇಲೆ ಉಕ್ರೇನ್ ಭಾರೀ ಪ್ರಮಾಣದ ದಾಳಿ ನಡೆಸುತ್ತಿದೆ. ಹೀಗಾಗಿ ಉತ್ಪಾದನೆ ಶೇ.30ರಷ್ಟು ಕಡಿತವಾಗಿದ್ದು, ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಬಂಕ್‌ಗಳಲ್ಲಿ ಉದ್ದದ ಸರದಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತುರ್ತಾಗಿ ತೈಲ ಪೂರೈಕೆ ಮಾಡುವಂತೆ ಭಾರತಕ್ಕೆ ರಷ್ಯಾ ಮನವಿ ಮಾಡಿದೆ.

ಭಾರತ ಮೊದಲ ಹಂತದಲ್ಲಿ 5 ಲಕ್ಷ ಬ್ಯಾರೆಲ್‌ ಪೂರೈಸಿದೆ

ಈ ಹಿನ್ನೆಲೆಯಲ್ಲಿ ಭಾರತ ಮೊದಲ ಹಂತದಲ್ಲಿ 5 ಲಕ್ಷ ಬ್ಯಾರೆಲ್‌ಗಳಷ್ಟು ತೈಲವನ್ನು ರಷ್ಯಾಕ್ಕೆ ಪೂರೈಸಿದೆ. ಇದರ ಜೊತೆಗೆ 30,000-40,000 ಪೆಟ್ರೋಲ್‌ ತುಂಬಿದ ಇನ್ನೂ 2 ಟ್ಯಾಂಕರ್‌ಗಳು ರಷ್ಯಾದತ್ತ ಪ್ರಯಾಣ ಬೆಳೆಸಿವೆ ಎಂದು ರಾಯಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.


ಭಾರತ-ರಷ್ಯಾ ಸಂಬಂಧ ಗಟ್ಟಿ:

ಭಾರತ ರಷ್ಯಾದಿಂದ ಬಹಳ ಕಡಿಮೆ ಬೆಲೆಗೆ ಕಚ್ಚಾತೈಲ ಖರೀದಿ ಮಾಡುತ್ತಿದೆ. ಜೂನ್‌ನಲ್ಲಿ ಭಾರತದ ಒಟ್ಟು ಕಚ್ಚಾತೈಲ ಆಮದಿನಲ್ಲಿ ರಷ್ಯಾ ಪಾಲು ಅರ್ಧಕ್ಕಿಂತ ಹೆಚ್ಚು. ಈ ತಿಂಗಳಿನಲ್ಲಿ ಭಾರತ ಪ್ರತಿದಿನ ಸರಾಸರಿ 27 ಲಕ್ಷ ಬ್ಯಾರೆಲ್ ರಷ್ಯಾದ ಕಚ್ಚಾತೈಲ ಆಮದು ಮಾಡಿಕೊಂಡಿದೆ. ಈಗ ರಷ್ಯಾ ತನ್ನ ದೇಶದಲ್ಲಿ ಪೆಟ್ರೋಲ್ ಕೊರತೆಯಿಂದಾಗಿ ಭಾರತದಿಂದ ಪೆಟ್ರೋಲ್ ತೆಗೆದುಕೊಳ್ಳುತ್ತಿರುವುದರಿಂದ ಎರಡು ದೇಶಗಳ ನಡುವಿನ ತೈಲ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ.