ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಹಿಂದಿಕ್ಕಿ ದೇಶದ ಸುದೀರ್ಘ ಪ್ರಧಾನಿ ಎನಿಸಿಕೊಂಡಿರುವ ನರೇಂದ್ರ ಮೋದಿ ಅವರನ್ನು ಐರೋಪ್ಯ ಒಕ್ಕೂಟಗಳ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇನ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಜಾಗತಿಕ ನಾಯಕರು ಅಭಿನಂದಿಸಿದ್ದಾರೆ.
ಸುದೀರ್ಘ ಅವಧಿ ಪ್ರಧಾನಿ ಗರಿ । ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ ಸೇರಿ ಜಾಗತಿಕ ನಾಯಕರ ಅಭಿನಂದನೆನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಹಿಂದಿಕ್ಕಿ ದೇಶದ ಸುದೀರ್ಘ ಪ್ರಧಾನಿ ಎನಿಸಿಕೊಂಡಿರುವ ನರೇಂದ್ರ ಮೋದಿ ಅವರನ್ನು ಐರೋಪ್ಯ ಒಕ್ಕೂಟಗಳ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇನ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸೇರಿದಂತೆ ಜಾಗತಿಕ ನಾಯಕರು ಅಭಿನಂದಿಸಿದ್ದಾರೆ.
ಈ ವೇಳೆ ಮೋದಿಗೆ ರಷ್ಯಾ ‘ಭಾರತದ ಪ್ರಧಾನಿಗಳಲ್ಲೇ ವರಿಷ್ಠರು’ ಎಂಬ ಬಿರುದನ್ನು ನೀಡಿದೆ. ಜತೆಗೆ ಉಭಯ ದೇಶಗಳ ಸಂಬಂಧಗಳನ್ನು ಬಲಪಡಿಸುವಲ್ಲಿ ಅವರ ಕೊಡುಗೆ ನಿರಂತರವಾಗಿರಲಿ ಎಂದು ಅಧ್ಯಕ್ಷರ ಕಚೇರಿ ಕ್ರೆಮ್ಲಿನ್ ಆಶಿಸಿದೆ. ಉಳಿದಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು, ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ-ಮ್ಯೂಂಗ್, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ, ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ, ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮರ್ಜ್, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಮಾಹಿ ಪಿಎಂ ರಿಷಿ ಸುನಕ್, ಅಮೆರಿಕ, ನೇಪಾಳ, ಭೂತಾನ್‌ನ ನಾಯಕರು ಪ್ರಧಾನಿ ಹುದ್ದೆಯಲ್ಲಿ 4,399 ದಿನ ಪೂರೈಸಿದ್ದಕ್ಕೆ ಮೋದಿಯವರಿಗೆ ಶುಭಾಶಯ ಕೋರಿದ್ದಾರೆ. ಜತೆಗೆ ಭಾರತದೊಂದಿಗಿನ ಸಂಬಂಧವನ್ನು ವೃದ್ಧಿಸುವತ್ತ ಎಲ್ಲಾ ನಾಯಕರು ಆಸಕ್ತಿ ತೋರಿಸಿದ್ದಾರೆ.1952ರಲ್ಲಿ ಪ್ರಧಾನಿಯಾಗಿ ಚುನಾಯಿತರಾಗಿದ್ದ ನೆಹರು 1964ರ ವರೆಗೆ 4,398 ದಿನ ಆಡಳಿತ ನಡೆಸಿದ್ದರು.
==ಮೋದಿ ದಾರ್ಶನಿಕ ನಾಯಕತ್ವಕ್ಕೆ ಎನ್‌ಡಿಎ ಕೂಟ ಅಭಿನಂದನೆ
ನವದೆಹಲಿ: 4,399 ದಿನ ಪ್ರಧಾನಿಯಾಗಿರುವ ಮೂಲಕ ಆ ಹುದ್ದೆಯಲ್ಲಿ ಸುದೀರ್ಘಾವಧಿಗಿದ್ದವರು ಎಂಬ ಹಿರಿಮೆಗೆ ಪಾತ್ರರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಅಭಿನಂದನೆ ಸಲ್ಲಿಸಿದೆ.ಬುಧವಾರ ನಡೆದ ಸಮಾವೇಶದಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ಅದರಲ್ಲಿ ಮೋದಿ ಅವರ ದಾರ್ಶನಿಕ ನಾಯಕತ್ವ ಮತ್ತು ಸಾರ್ವಜನಿಕ ಸೇವೆಯ ಪ್ರತಿ ಅವಿಶ್ರಾಂತ ಸಮರ್ಪಣೆಯನ್ನು ಶ್ಲಾಘಿಸಲಾಗಿದೆ.‘ಮೋದಿಯವರ ಆಡಳಿತವು ಜನಸ್ನೇಹಿಯಾಗಿದ್ದು, ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್, ಸಬ್‌ಕಾ ವಿಶ್ವಾಸ್ ಅನ್ನು ನಿಜವಾದ ಅರ್ಥದಲ್ಲಿ ಮಾಡುತ್ತಿದೆ. ನಿರಂತರವಾಗಿ ಈ ಸರ್ಕಾರದ ಮೇಲೆ ನಂಬಿಕೆಯಿಟ್ಟು ಬೆಂಬಲಿಸಿದ್ದಕ್ಕೆ ಕೂಟ ಕೃತಜ್ಞವಾಗಿದೆ. ಹೊಸ ಬದ್ಧತೆ ಮತ್ತು ವಿಶ್ವಾಸದೊಂದಿಗೆ, ಎನ್‌ಡಿಎ ಕೂಟವು ವಿಕಸಿತ ಭಾರತದ ಗುರಿಯತ್ತ ಕೆಲಸ ಮಾಡುವುದನ್ನು ಮುಂದುವರಿಸಲಿದೆ’ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
==ಭಾರತೀಯರ ಸಾಮೂಹಿಕ ಪ್ರಯತ್ನದ ಫಲ: ಮೋದಿ
ಶುಭಾಶಯ ಕೋರಿದ ಗಣ್ಯರಿಗೆ ಪ್ರಧಾನಿ ಧನ್ಯವಾದನವದೆಹಲಿ: ಅತಿ ದೀರ್ಘಾವಧಿ ಪ್ರಧಾನಿ ಎಂಬ ಮೈಲುಗಲ್ಲು ಸಾಧಿಸಿದ್ದಕ್ಕೆ ತಮಗೆ ಶುಭ ಹಾರೈಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಎನ್‌ಡಿಎ ಮುಖ್ಯಮಂತ್ರಿಗಳು, ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಧನ್ಯವಾದ ಸಮರ್ಪಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ‘ರಾಷ್ಟ್ರಪತಿ ಜಿ, ನಿಮ್ಮ ಆತ್ಮೀಯ ಶುಭಾಶಯ ಮತ್ತು ಪ್ರಿಯ ಮಾತುಗಳಿಗೆ ಕೃತಜ್ಞನಾಗಿದ್ದೇನೆ. ಇಷ್ಟು ವರ್ಷಗಳಲ್ಲಿ ಸಾಧಿಸಿರುವ ಯಾವುದೇ ಸಾಧನೆಯು ಭಾರತದ ಜನರ ಸಾಮೂಹಿಕ ಪ್ರಯತ್ನ ಮತ್ತು ಆಕಾಂಕ್ಷೆಗಳ ಫಲಿತಾಂಶವಾಗಿದೆ. ಅಭಿವೃದ್ಧಿ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ. ರಾಷ್ಟ್ರದ ಸೇವೆ ಮತ್ತು ವಿಕಸಿತ ಭಾರತದ ದೃಷ್ಟಿಕೋನದಲ್ಲಿ ನಾವು ಹೊಸ ಚೈತನ್ಯದೊಂದಿಗೆ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ’ ಎಂದು ತಿಳಿಸಿದ್ದಾರೆ.