ಮುಂಬೈ: ದೇಶದ ಹಲವೆಡೆ ಲೌಡ್‌ಸ್ಪೀಕರ್ ಗದ್ದಲಗಳಾಗುತ್ತಿರುವ ನಡುವೆ, ಪ್ರತಿದಿನದ ನಮಾಜ್‌ಗೆ ಮೊಬೈಲ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಲಾಗಿದೆ. ತಮಿಳುನಾಡು ಮೂಲದ ಕಂಪನಿ ತಯಾರಿಸಿರುವ ಈ ಆ್ಯಪ್‌ನಲ್ಲಿ, ಮಸೀದಿಗಳಲ್ಲಿ ಮಾಡಲಾಗುವ ಪ್ರಾರ್ಥನೆ (ನಮಾಜ್), ಬಳಕೆದಾರರಿಗೆ ನೇರವಾಗಿ ಕೇಳಲಿದೆ. ಇದರ ಬಳಕೆ ಈಗಾಗಲೇ ಆರಂಭವಾಗಿದೆ.
‘ಆನ್‌ಲೈನ್ ಆಜಾನ್’ ಹೆಸರಿನ ಆ್ಯಪ್ ಇದಾಗಿದೆ. ಮೌಲ್ವಿಗಳು ಆಜಾನ್‌ಗೆ (ನಮಾಜ್‌ಗೆ ಸಿದ್ಧರಾಗುವಂತೆ ನೀಡುವ ಕರೆ) ಕರೆ ನೀಡಿದಾಗ ಅವರ ಧ್ವನಿಯು, ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡವರ ಮೊಬೈಲ್‌ನಲ್ಲಿ ಕೇಳಿಸುತ್ತದೆ. ಆಗ ಜನರು ನಮಾಜ್‌ಗೆ ಸಿದ್ಧರಾಗಬಹುದು. ಆ್ಯಪ್ ಇನ್‌ಸ್ಟಾಲ್ ಮಾಡಿದ ಬಳಿಕ ವಾಸದ ಸ್ಥಳ ಮತ್ತು ಮಸೀದಿಯನ್ನು ಆಯ್ಕೆ ಮಾಡಿಕೊಂರೆ, ಅಲ್ಲಿ ನಡೆಯುವ ನಿಯಮಿತ ಪ್ರಾರ್ಥನೆ ಕೇಳುತ್ತದೆ.
ಈ ಬೆಳವಣಿಗೆ ಬಗ್ಗೆ ಮಾತನಾಡಿರುವ ಮಾಹಿಂ ಜುಮಾ ಮಸೀದಿಯ ಟ್ರಸ್ಟಿ ಫಹಾದ್ ಖಲೀಲ್ ಪಠಾಣ್, ‘ಪೊಲೀಸರ ಎಚ್ಚರಿಕೆಯಿಂದಾಗಿ ಹಲವು ಕಡೆ ಮಸೀದಿಗಳಲ್ಲಿ ಸ್ಪೀಕರ್ ಬಳಕೆಯನ್ನೇ ಕೈಬಿಡಬೇಕಾಗಿದೆ. ಆದರೆ ಈಗ ಈ ಆ್ಯಪ್‌ನಿಂದ ನಮ್ಮ ಆಚರಣೆಗೆ ಯಾವುದೇ ತೊಂದರೆಯಾಗದು. ಮಸೀದಿಯಲ್ಲಿ ಮಾಡುವ ನಮಾಜ್‌ಅನ್ನು ಎಲ್ಲರೂ ತಮ್ಮ ಮನೆಗಳಲ್ಲೇ ಕೇಳಬಹುದು. ಇದರಿಂದ ರಂಜಾನ್ ವೇಳೆ ಹಾಗೂ ವೃದ್ಧರಿಗೆ ತುಂಬಾ ಉಪಯೋಗವಾಗುತ್ತದೆ. ಕಳೆದ 3 ದಿನಗಳಲ್ಲಿ 500 ಮಂದಿ ಆ್ಯಪ್ ಬಳಕೆ ಆರಂಭಿಸಿದ್ದಾರೆ.’ ಎಂದರು.
ಇದನ್ನು ಮಹೀಮ್‌ನಲ್ಲಿರುವ ಜುಮಾ ಮಸೀದಿಯಲ್ಲಿ ಈಗಾಗಲೇ ಬಳಕೆಗೆ ತರಲಾಗಿದೆ. ಮುಂಬೈನ 6 ಮಸೀದಿಗಳು ಆ್ಯಪ್ ಸರ್ವರ್‌ನಲ್ಲಿ ಈಗಾಗಲೇ ನೋಂದಾಯಿಸಿಕೊಂಡಿವೆ. ಅತ್ತ ತಮಿಳುನಾಡಿನಲ್ಲಿ 250 ಮಸೀದಿಗಳು ನೋಂದಣಿ ಮಾಡಿಕೊಂಡಿವೆ.
ಆ್ಯಪ್ ಅಭಿವೃದ್ಧಿ ಪಡಿಸಿದವರಲ್ಲಿ ಒಬ್ಬರಾದ ಮೊಹಮ್ಮದ್ ಅಲಿ, ‘ಇದನ್ನು 3 ವರ್ಷಗಳ ಹಿಂದೆಯೇ ತಯಾರಿಸಲಾಗಿತ್ತು. ಇದರಲ್ಲಿ ಮಸೀದಿಯ ವಿಳಾದ ದೃಢೀಕರಣ, ನಮಾಜ್ ಮಾಡುವ ವ್ಯಕ್ತಿಯ ಆಧಾರ್ ಕಾರ್ಡ್ ಕೇಳಲಾಗುತ್ತದೆ’ ಎಂದು ಹೇಳಿದ್ದಾರೆ. ದೇಶದ ಹಲವು ನಗರಗಳಲ್ಲಿ ಲೌಡ್‌ಸ್ಪೀಕರ್ ಶಬ್ದಕ್ಕೆ ಮಿತಿ ನಿಗದಿಪಡಿಸಿರುವ ಕಾರಣ, ಮಸೀದಿಯಿಂದ ದೂರದಲ್ಲಿ ವಾಸವಿರುವವರಿಗೆ ನಮಾಜ್ ಕೇಳಲು ಸಮಸ್ಯೆಯಾಗುತ್ತಿತ್ತು. ಇದೀಗ ಪರಿಹಾರವಾಗಿದೆ.
- ಲೌಡ್‌ಸ್ಪೀಕರ್ ಬಳಕೆಗೆ ಬ್ರೇಕ್ ಹಾಕಲು ಈ ಕ್ರಮ
- ತ.ನಾಡು ಕಂಪನಿ ಆವಿಷ್ಕರಿಸಿದ ಆ್ಯಪ್‌ಗೆ ಉತ್ತಮ ಪ್ರತಿಕ್ರಿಯೆ
- ಆ್ಯಪ್‌ನಿಂದ ಆಚರಣೆಗೆ ಅಡಚಣೆಯಾಗದು: ಮಸೀದಿ ಟ್ರಸ್ಟಿ
- ತ.ನಾಡಿನ 250, ಮುಂಬೈನ 6 ಮಸೀದಿಗಳು ನೋಂದಣಿ