ಟೆಲ್ ಅವೀವ್: ಹಿಜ್ಬುಲ್ಲಾ ಉಗ್ರ ಸಂಘಟನೆ ಮುಖ್ಯಸ್ಥ ಹಸನ್ ನಸ್ರಲ್ಲಾ ಹತ್ಯೆಯಿಂದ ಮಧ್ಯಪ್ರಾಚ್ಯದಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಪರಿಸ್ಥಿತಿ, ಪೂರ್ಣ ಪ್ರಮಾಣದ ಯುದ್ಧದ ಸ್ವರೂಪ ಪಡೆಯುವ ಲಕ್ಷಣಗಳು ಕಂಡುಬಂದಿವೆ. ಇದಕ್ಕೆ ಪೂರಕವೆಂಬಂತೆ, ಇಸ್ರೇಲ್‌ನ ಸೇನಾ ನೆಲೆಗಳು ಮತ್ತು ಗುಪ್ತಚರ ಸಂಸ್ಥೆ ಮೊಸಾದ್ ಕಚೇರಿಯನ್ನು ಗುರಿಯಾಗಿಸಿ ಮಂಗಳವಾರ ಹಿಜ್ಬುಲ್ಲಾ ಉಗ್ರರು, ಯೆಮನ್ ಸೇನೆ ಮತ್ತು ಇರಾನ್ ಸೇನಾ ಪಡೆಗಳು ರಾಕೆಟ್, ಕ್ಷಿಪಣಿ ದಾಳಿ ನಡೆಸಿವೆ.
ಶತ್ರು ದೇಶದ ವಿರುದ್ಧ ಈ ಮೂರು ದೇಶಗಳು ಒಟ್ಟಾಗಿ ನಡೆಸಿದ ದಾಳಿಗೆ, ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರು ಕೂಡಾ ಕೈಜೋಡಿಸಿದರೆ ಭೀಕರ ಯುದ್ಧ ನಡೆಯುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಹೀಗಾಗಿ ಜಗತ್ತಿನ ಮೇಲೆ ಮತ್ತೊಂದು ಯುದ್ಧದ ಆತಂಕ ಎದುರಾಗಿದೆ.ಮೊಸಾದ್ ಮೇಲೆ ದಾಳಿ:ಇಸ್ರೇಲಿ ಸೇನೆ ಸೋಮವಾರ, ಲೆಬನಾನಿನ ದಕ್ಷಿಣ ಭಾಗದಲ್ಲಿ ಸೀಮಿತ ಭೂದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಇಸ್ರೇಲಿನ ಸೇನಾ ನೆಲೆಗಳು ಮತ್ತು ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌ನ ಕೇಂದ್ರ ಕಚೇರಿ ಗುರಿಯಾಗಿಸಿ ಹಿಜ್ಬುಲ್ಲಾ ಉಗ್ರರು ಮಂಗಳವಾರ ರಾಕೆಟ್, ಕ್ಷಿಪಣಿ ದಾಳಿ ನಡೆಸಿದ್ದಾರೆ. ಸಂಘರ್ಷ ಪ್ರಾರಂಭವಾದಾಗಿನಿಂದ ಲೆಬನಾನ್ ಕಡೆಯಿಂದ ನಡೆದ ಅತಿ ದೊಡ್ಡ ದಾಳಿ ಇದಾಗಿದೆ.
ಮತ್ತೊಂದೆಡೆ ಯೆಮೆನ್‌ನ ಸಶಸ್ತ್ರ ಪಡೆಗಳು ಕೂಡ ಡ್ರೋನ್ ಬಳಸಿ ಆಕ್ರಮಣ ಮಾಡಿರುವುದಾಗಿ ಹೇಳಿವೆ. ಬಾಹ್ಯ ದಾಳಿ ತಡೆಗೆ ಇಸ್ರೇಲ್ ಹೊಂದಿರುವ ಐರನ್ ಡ್ರೋನ್ ವ್ಯವಸ್ಥೆಯನ್ನೂ ದಾಟಿ ಕ್ಷಿಪಣಿ, ರಾಕೆಟ್‌ಗಳು ಇಸ್ರೇಲ್ ಪ್ರವೇಶಿಸಿವೆ ಎಂದು ವರದಿಗಳು ತಿಳಿಸಿವೆ.ಇರಾನ್ ದಾಳಿ:ಈ ನಡುವೆ ಕ್ಷಿಪಣಿ ದಾಳಿಗೆ ಇರಾನ್ ಸಜ್ಜಾಗಿದೆ ಎಂಬ ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ಇಸ್ರೇಲ್ ಮೇಲೆ ಇರಾನ್ ಮಂಗಳವಾರ ದಾಳಿ ನಡೆಸಿದೆ. ಕ್ಷಿಪಣಿ ದಾಳಿ ಆರಂಭದ ಬೆನ್ನಲ್ಲೇ ಇಸ್ರೇಲ್‌ನಾದ್ಯಂತ ದಾಳಿ ಬಗ್ಗೆ ಮುನ್ನೆಚ್ಚರಿಕೆ ನೀಡುವ ಸೈರನ್‌ಗಳು ಮೊಳಗಿವೆ. ಮತ್ತೊಂದೆಡೆ ಬೀಚ್ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಜನರ ಗುಂಪುಗೂಡುವಿಕೆಯನ್ನು ಇಸ್ರೇಲ್ ನಿಷೇಧಿಸಿದೆ.