ಇರಾನ್‌ ಜನತೆಗೆ ನೆತನ್ಯಾಹು ನಿಗೂಢ ಸಂದೇಶ : ಮುಕ್ತಿ ಸಮೀಪ ಎಂದ ಇಸ್ರೇಲ್‌ ಪ್ರಧಾನಿ

KannadaprabhaNewsNetwork |  
Published : Oct 01, 2024, 01:47 AM ISTUpdated : Oct 01, 2024, 04:47 AM IST
ನೆತನ್ಯಾಹು | Kannada Prabha

ಸಾರಾಂಶ

ಇರಾನ್‌ ಹಿಜ್ಬುಲ್ಲಾಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇರಾನ್‌ ಜನತೆಗೆ ಶೀಘ್ರದಲ್ಲೇ ಮುಕ್ತರಾಗುತ್ತೀರಿ ಎಂದು ನಿಗೂಢ ಸಂದೇಶ ರವಾನಿಸಿದ್ದಾರೆ.  

ಜೆರುಸಲೇಂ: ಹಿಜ್ಬುಲ್ಲಾ ಉಗ್ರರಿಗೆ ಬೆಂಬಲವಾಗಿ ನಿಂತಿರುವ ಇರಾನ್‌ ವಿರುದ್ಧ ಕೆಂಗಣ್ಣು ಬೀರಿರುವ ನಡುವೆಯೇ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇರಾನಿ ಜನರಿಗೆ ನಿಗೂಢ ಸಂದೇಶವೊಂದನ್ನು ರವಾನಿಸಿದ್ದಾರೆ.

‘ಪ್ರತಿ ದಿನ ನಿಮ್ಮ ಸರ್ಕಾರ ನಿಮ್ಮನ್ನು ದಮನ ಮಾಡುತ್ತಿದೆ. ಲೆಬನಾನ್‌ ಅನ್ನು ರಕ್ಷಿಸುವ ಬೆಂಕಿಯ ಮಾತುಗಳನ್ನು ಆಡುತ್ತದೆ, ಗಾಜಾ ರಕ್ಷಣೆಯ ಭರವಸೆ ನೀಡುತ್ತದೆ. ಆದರೆ ಮತ್ತೊಂದೆಡೆ ನಿತ್ಯವೂ ಈ ವಲಯ ಮತ್ತಷ್ಟು ಅಂಧಕಾರಕ್ಕೆ ತಳ್ಳಲ್ಪಡುತ್ತಿದೆ ಮತ್ತು ಇನ್ನಷ್ಟು ಯುದ್ಧಕ್ಕೆ ತೆರೆದುಕೊಳ್ಳುತ್ತಿದೆ. ಹೀಗಾಗಿ ಇರಾನ್‌ ಜನತೆ ಒಂದು ವಿಷಯ ಅರ್ಥ ಮಾಡಿಕೊಳ್ಳಬೇಕು, ನಾವು ನಿಮ್ಮೊಂದಿಗೆ ಇದ್ದೇವೆ. ನೀವು ಅಂದುಕೊಂಡಿದ್ದಕ್ಕಿಂತಲೂ ಮೊದಲೇ ನೀವು ಮುಕ್ತರಾಗುತ್ತೀರಿ. ಅಲ್ಲಿ ಎಲ್ಲವೂ ಹೊಸದಾಗಿರುತ್ತದೆ’ ಎಂದು ಹೇಳಿದ್ದಾರೆ.

ಇದೇ ವೇಳೆ ಇರಾನ್‌ ಸರ್ಕಾರವನ್ನೂ ನೇರವಾಗಿ ಎಚ್ಚರಿಸಿರುವ ನೆತನ್ಯಾಹು, ಮಧ್ಯಪ್ರಾಚ್ಯದಲ್ಲಿ ನಾವು ತಲುಪಲಾಗದ ಜಾಗ ಯಾವುದೂ ಇಲ್ಲ ಎಂದಿದ್ದಾರೆ.

ಇಸ್ರೇಲ್‌ ಭೂದಾಳಿ ಹಿಮ್ಮೆಟ್ಟಿಸಲು ನಾವು ಸಿದ್ಧ: ಹಿಜ್ಬುಲ್ಲಾ

ಬೈರೂತ್‌: ಲೆಬನಾನ್‌ನ ಮೇಲೆ ಇಸ್ರೇಲ್‌ ವಾಯುದಾಳಿ ಮುಂದುವರಿಸಿದ್ದು, ಭಾನುವಾರ ರಾತ್ರಿಯಿಂದ ಸೋಮವಾರ ನಸುಕಿನವರೆಗೆ ಸೆಂಟ್ರಲ್‌ ಬೈರೂತ್‌ ಮೇಲೆ ನಡೆಸಿದ ದಾಳಿಯಲ್ಲಿ 105 ಶಂಕಿತ ಹಿಜ್ಬುಲ್ಲಾ ಉಗ್ರರು ಸಾವನ್ನಪ್ಪಿದ್ದಾರೆ. 

ಇದರ ನಡುವೆ ಇಸ್ರೇಲ್‌ ಭೂದಾಳಿ ಬೆದರಿಕೆ ಹಾಕುತ್ತಿರುವ ಕಾರಣ ಗುಡುಗಿರುವ ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ಹಂಗಾಮಿ ಮುಖ್ಯಸ್ಥ ನಯೀಂ ಕಾಸೀಂ, ‘ಭೂದಾಳಿಯನ್ನು ಹಿಮ್ಮೆಟ್ಟಿಸಲು ನಮ್ಮ ಯೋಧರು (ಉಗ್ರರು) ತಯಾರಾಗಿದ್ದಾರೆ. ಅಲ್ಲದೆ, ಮೊನ್ನೆಯ ಇಸ್ರೇಲ್‌ ವಾಯುದಾಳಿಯಲ್ಲಿ ಮಡಿದ ಎಲ್ಲ ನಾಯಕರ ಸ್ಥಾನಮಾನಗಳನ್ನು ಭರ್ತಿ ಮಾಡಲಾಗಿದೆ’ ಎಂದು ಘೋಷಿಸಿದ್ದಾನೆ.

ಸೋಮವಾರ ಹೇಳಿಕೆ ನೀಡಿರುವ ಕಾಸೀಂ, ‘ನಾವು ಇಸ್ರೇಲ್‌ ದಾಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಮ್ಮ ಎಲ್ಲ ಸೇನಾ ನೆಲೆಗಳು ಸುಭದ್ರವಾಗಿವೆ. ಅವುಗಳಿಗೆ ಯಾವುದೇ ಧಕ್ಕೆ ಆಗಿಲ್ಲ. ಇದು ಸುದೀರ್ಘ ಯುದ್ಧವಾಗಲಿದೆ’ ಎಂದಿದ್ದಾನೆ.ಶನಿವಾರದ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್‌ ನಸ್ರಲ್ಲಾ ಸತ್ತಿದ್ದ. ಆತನ ಕಾಯಂ ಉತ್ತರಾಧಿಕಾರಿ ನೇಮಕ ಆಗುವರವೆಗೂ ಕಾಸೀಂನೇ ಹಿಜ್ಬುಲ್ಲಾದ ಹಂಗಾಮಿ ಮುಖ್ಯಸ್ಥನಾಗಿ ಕೆಲಸ ಮಾಡಲಿದ್ದಾನೆ. ಕಾಯಂ ಉತ್ತರಾಧಿಕಾರಿ ಆಗಿ ಹಾಷಿಂ ಸಫಿದ್ದೀನ್‌ ನೇಮಕ ಆಗುವ ಸಂಭವವಿದೆ.

ಹಿಟ್ಲರ್‌ ನಂತರದ ಅತಿ ದೊಡ್ಡ ಉಗ್ರ ನೆತನ್ಯಾಹು: ಪಿಡಿಪಿ ನಾಯಕಿ ಮೆಹಬೂಬಾ

ಶ್ರೀನಗರ : ‘ಪ್ಯಾಲೆಸ್ತೀನ್ ಮತ್ತು ಲೆಬನಾನ್‌ನ್ನು ಗ್ಯಾಸ್‌ ಚೇಂಬರ್‌ ಆಗಿ ಪರವರ್ತಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಜರ್ಮನಿಯ ಮಾಜಿ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ನಂತರದ ಅತಿದೊಡ್ಡ ಉಗ್ರ’ ಎಂದು ಜಮ್ಮು ಕಾಶ್ಮೀರದ ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಕಿಡಿಕಾರಿದ್ಧಾರೆ.

 ‘ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ ನೆತನ್ಯಾಹು ವಿರುದ್ಧ ತೀರ್ಪು ನೀಡಿದೆ. ಹಿಟ್ಲರ್‌ ಜನರನ್ನು ಕೊಲ್ಲಲು ಗ್ಯಾಸ್‌ ಚೇಂಬರ್‌ ಬಳಸಿದ್ದ. ನೆತನ್ಯಾಹು ಪ್ಯಾಲೆಸ್ತೀನ್, ಲೆಬನಾನ್‌ ಅನ್ನು ಗ್ಯಾಸ್‌ ಚೇಂಬರ್‌ಗಳಾಗಿ ಬದಲಾಯಿಸಿ ಸಾವಿರಾರು ಜನರ ಕೊಲ್ಲುತ್ತಿದ್ದಾರೆ’ ಎಂದರು. ಇಸ್ರೇಲ್‌ ನಡೆಸಿದ ವಾಯುದಾಳಿಗೆ ಹಿಜ್ಬುಲ್ಲಾ ನಾಯಕ ನಸ್ರಲ್ಲಾ ಬಲಿಯಾಗಿರುವುದನ್ನು ಖಂಡಿಸಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ 1 ದಿನ ಚುನಾವಣಾ ಪ್ರಚಾರ ಮುಂದೂಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸಿದ್ದು ಆಪ್ತ 20 ಶಾಸಕರಿಗೆಜಾರಕಿಹೊಳಿ ಔತಣಕೂಟ : ಬೆಳಗಾವೀಲೂ ಗರಿಗೆದರಿದ ಬಣ ರಾಜಕೀಯ
ದಿಲ್ಲಿಯಲ್ಲಿ ಜ.1ರಿಂದ ಕೇಂದ್ರದ ಭಾರತ್‌ ಟ್ಯಾಕ್ಸಿ ಸಂಚಾರ